ಕಸ ಹಾಕಿದರೆ ದಂಡ : ಸೋಮವಾರಪೇಟೆ ಪ.ಪಂ ಎಚ್ಚರಿಕೆ

February 8, 2021

ಮಡಿಕೇರಿ ಫೆ.8 : ಎಲ್ಲೆಂದರಲ್ಲಿ ಕಸ ಎಸೆಯುವುದು, ಕಸ ಬೇರ್ಪಡಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಮಲಮೂತ್ರ ವಿಸರ್ಜನೆ ಮಾಡುವುದು, ರಸ್ತೆ ಮತ್ತು ಖಾಲಿ ಜಾಗದಲ್ಲಿ ಕಟ್ಟಿದ ಡೆಬ್ರಿಸ್ ವಿಲೆ ಮಾಡುವುದು ಮುಂತಾದ ಪ್ರಕರಣಗಳು ಕಂಡು ಬಂದಲ್ಲಿ ರೂ.100 ರಿಂದ 25,000 ವರೆಗೆ ದಂಡ ವಿಧಿಸಲಾಗುವುದು ಎಂದು ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪಿ.ಕೆ.ನಾಚಪ್ಪ ರವರು ತಿಳಿಸಿದ್ದಾರೆ. ಸೋಮವಾರಪೇಟೆ ಪಟ್ಟ್ತಣ ಪಂಚಾಯತ್ ವ್ಯಾಪ್ತಿಯಲ್ಲಿ ಬಯಲು ಮಲ ವಿಸರ್ಜನೆ ಮುಕ್ತ ಪಟ್ಟಣ ಮಾಡುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮ ಕೈಗೊಳ್ಳಲಾಗಿದೆ. ಆ ದಿಸೆಯಲ್ಲಿ ಜೂನ್ 2018 ರ ಮಾಹೆಯಲ್ಲಿ ಮೊದಲ ಬಾರಿಗೆ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ ವತಿಯಿಂದ ಸೋಮವಾರಪೇಟೆ ಪಟ್ಟಣವನ್ನು “ಬಯಲು ಮಲ ವಿಸರ್ಜನೆ ಮುಕ್ತ ಪಟ್ಟಣ” ಎಂದು ಘೋಷಿಸಲಾಗಿದ್ದು, ತದನಂತರ ಅದೇ ಸಂಸ್ಥೆಯು ಸೋಮವಾರಪೇಟೆ ಪಟ್ಟಣದಲ್ಲಿ ಮರು ಪರಿಶೀಲನೆ ನಡೆಸಿ ಮತ್ತೆ “ಬಯಲು ಮಲ ವಿಸರ್ಜನೆ ಮುಕ್ತ ಪಟ್ಟಣ” ಪ್ರಮಾಣ ಪತ್ರ ನೀಡಿದೆ ಎಂದು ಪಿ.ಕೆ.ನಾಚಪ್ಪ ಅವರು ತಿಳಿಸಿದ್ದಾರೆ.
ಸೋಮವಾರಪೇಟೆ ಪಟ್ಟಣವನ್ನು ಈಗಾಗಲೇ “ಬಯಲು ಮಲ ವಿಸರ್ಜನೆ ಮುಕ್ತ ಪಟ್ಟಣ” ಎಂದು ಘೋಷಣೆ ಮಾಡಿರುವುದರಿಂದ ಹಾಗೂ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸುಧಾರಿತ ಮತ್ತು ಹೆಚ್ಚು ಸುಧಾರಿತ ಬಯಲು ಮಲ ವಿಸರ್ಜನೆ ಮುಕ್ತ ಪಟ್ಟಣ ಎಂದು ಪ್ರಮಾಣಿಕರಣದ ಘೋಷಣೆಗಾಗಿ ಬೇಕಾಗಿರುವ ಷರತ್ತು ಪೂರೈಸಿದೆ.
ಈ ಬಗ್ಗೆ ಯಾವುದಾದರು ಆಕ್ಷೇಪಣೆಗಳಿದ್ದಲ್ಲಿ 15 ದಿನದೊಳಗೆ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಕಚೇರಿಗೆ ಲಿಖಿತವಾಗಿ ದೂರು ಸಲ್ಲಿಸುವಂತೆ ಮುಖ್ಯಾಧಿಕಾರಿ ಕೋರಿದ್ದಾರೆ.

error: Content is protected !!