ಹಳ್ಳಿಗಟ್ಟು ಹಾಡಿಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ : ಕಸವಿಲೇವಾರಿ ಘಟಕ ಸ್ಥಾಪನೆಗೆ ವಿರೋಧ

February 8, 2021

ಗೋಣಿಕೊಪ್ಪಲು ಫೆ.8 : ಗೋಣಿಕೊಪ್ಪಲು ಸಮೀಪದ ಅರ್ವತೋಕ್ಲು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಟ್ಟು ದೇವಕಾಲೋನಿ ಹಾಡಿಯಲ್ಲಿ ಭೂಮಿ ಮತ್ತು ವಸತಿಗಾಗಿ ನಡೆಯುತ್ತಿರುವ ಹೋರಾಟ 3 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಆಶ್ರಯದಲ್ಲಿ ಹೋರಾಟದ ಭಾಗವಾಗಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಹಳ್ಳಿಗಟ್ಟು ಹಾಡಿಯ ತಾಯಮ್ಮ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹರಿಸುವ ಮೂಲಕ ಚಾಲನೆ ನೀಡಲಾಯಿತು.
ಸಂಭ್ರಮಾಚರಣೆ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು ::::
ಅರ್ವತೋಕ್ಲು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಟ್ಟು ದೇವಕಾಲೋನಿಯ 60 ಗಿರಿಜನ ಕುಟುಂಬಗಳಿಗೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕೂಡಲೇ ಒದಗಿಸಬೇಕು. ಸದರಿ ಜಾಗದಲ್ಲಿ ಕಸವಿಲೇವಾರಿ ಘಟಕ ಸ್ಥಾಪಿಸುವ ಗ್ರಾಮ ಪಂಚಾಯಿತಿಯ ತೀರ್ಮಾನವನ್ನು ತಕ್ಷಣ ಕೈ ಬಿಡಬೇಕು. ಕಸವೀಲೆವಾರಿ ಆದೇಶವನ್ನು ಜಿಲ್ಲಾಧಿಕಾರಿಯವರು ಕೂಡಲೇ ಹಿಂಪಡೆಯಬೇಕು. ದಿನಾಂಕ- 05 /02/2021 ರಂದು ವಿರಾಜಪೇಟೆ ತಾಲ್ಲೂಕು ಪಂಚಾಯತಿ ಸಾಮಾನ್ಯ ಸಭೆಯಲ್ಲಿ ದೇವಕಾಲೋನಿಯ ಪ್ರದೇಶ ವಾಸಕ್ಕೆ ಯೋಗ್ಯವಲ್ಲ ಎಂದು ತಾಲ್ಲೂಕು ಕಾರ್ಯನಿರ್ವಾಣಧಿಕಾರಿ ಸಭೆಗೆ ತಿಳಿಸಿರುವುದು ಖಂಡನಾರ್ಹ. ಕೂಡಲೇ ಯೋಗ್ಯವಲ್ಲ ಎಂಬ ಪದವನ್ನು ಕಡತದಿಂದ ತೆಗೆದು ಹಾಕಬೇಕು ಹಾಗೂ ಹಕ್ಕು ಪತ್ರವನ್ನು ಕೂಡಲೇ ದೇವಕಾಲೋನಿಯ ಗಿರಿಜನ ಜನರಿಗೆ ಹಂಚಬೇಕು. 60 ಕುಟುಂಬಕ್ಕೆ ಮನೆ ನಿರ್ಮಾಣಕ್ಕಾಗಿ ತಲಾ.3.50ಲಕ್ಷ ಹಣವನ್ನು ಐ.ಟಿ.ಡಿ.ಪಿ ಇಲಾಖೆಯಿಂದ ಮಂಜೂರು ಮಾಡಬೇಕು.
ಈ ಸಂದರ್ಭ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಅಧ್ಯಕ್ಷ ಅಮೀನ್ ಮೊಹಿಸಿನ್, ತಾಲ್ಲೂಕು ಪಂಚಾಯತಿ ಸದಸ್ಯೆ ಆಶಾ, ಪ್ರಮುಖರಾದ ಮೊಣ್ಣಪ್ಪ ಪಾಲೇಮಾಡು, ಕುಸುಮಾ, ನಿರಾಶ್ರಿತರ ಹೋರಾಟ ಸಮಿತಿಯ ರೆಜಿತ್ ಕುಮಾರ್ ಗುಹ್ಯ, ನಮ್ಮ ಕೊಡಗು ತಂಡದ ನೌಶಾದ್ ಜನ್ನತ್, ಕೆ.ಎ ಷರೀಫಾ, ಹೇಮಂತ್, ಶೋಭಾ, ಸರಸು, ಲಕ್ಷಮೀ, ದಿಲೀಶ್ ಸೇರಿದಂತೆ ಮತ್ತಿತರರು ಇದ್ದರು.

error: Content is protected !!