ತೋಟದ ಕೆಲಸದವರಿಂದಲೇ 4.50 ಲಕ್ಷ ಮೌಲ್ಯದ ಕಾಫಿ ಕಳ್ಳತನ : ಸುಂಟಿಕೊಪ್ಪದಲ್ಲಿ ಇಬ್ಬರ ಬಂಧನ

February 8, 2021

ಮಡಿಕೇರಿ ಫೆ.8 : ತೋಟದ ಕೆಲಸದವರಿಂದಲೇ ಸುಮಾರು 4.50 ಲಕ್ಷ ರೂ. ಮೌಲ್ಯದ ಕಾಫಿ ಕಳ್ಳತನವಾಗಿರುವ ಪ್ರಕರಣ ಬಯಲಿಗೆ ಬಂದಿದ್ದು, ಇಬ್ಬರು ಆರೋಪಿಗಳನ್ನು ಸುಂಟಿಕೊಪ್ಪ ಹಾಗೂ ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ.
ಟಿಸಿಎಲ್ ಎಸ್ಟೇಟ್ ನಲ್ಲಿ ಫೀಲ್ಡ್ ಆಫೀಸರ್ ಕೆಲಸ ಮಾಡುತ್ತಿದ್ದ ಸೋಮವಾರಪೇಟೆ ತಾಲ್ಲೂಕು ಐಗೂರು ನಿವಾಸಿ ದರ್ಶನ್ ಹಾಗೂ ಚಾಲಕನಾಗಿದ್ದ ಸುಂಟಿಕೊಪ್ಪದ ರಮೇಶ್ ಬಂಧಿತ ಆರೋಪಿಗಳು.
ಸುಂಟಿಕೊಪ್ಪದ ಟಿಸಿಎಲ್ ಎಸ್ಟೇಟ್‍ನ ಗೋದಾಮಿನಲ್ಲಿರಿಸಿದ್ದ ಸುಮಾರು 4.50 ಲಕ್ಷ ರೂ. ಮೌಲ್ಯದ ಸುಮಾರು 25 ಚೀಲ ಪಾರ್ಚ್‍ಮೆಂಟ್ ಕಾಫಿ ಕಳವಾಗಿರುವ ಬಗ್ಗೆ ಫೆ.7ರಂದು ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಹಾಗೂ ಡಿವೈಎಸ್‍ಪಿ ಶೈಲೇಂದ್ರ ಅವರ ಮಾರ್ಗದರ್ಶನದಲ್ಲಿ ಕುಶಾಲನಗರ ವೃತ್ತ ನಿರೀಕ್ಷದ ಎಂ.ಮಹೇಶ್ ಅವರ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು.
ಈ ತಂಡವು ಅದೇ ದಿನ ತೋಟದ ಫೀಲ್ಡ್ ಆಫೀಸರ್ ದರ್ಶನ್ ಹಾಗೂ ಚಾಲಕ ರಮೇಶ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದು, ಅದರಂತೆ ಆರೋಪಿಗಳಿಂದ ಕಳವು ಮಾಡಿದ್ದ ಕಾಫಿ ಹಾಗೂ ಕೃತ್ಯಕ್ಕೆ ಬಳಸಿದ್ದ ಟ್ರ್ಯಾಕ್ಟರ್‍ನ್ನು ವಶಪಡಿಸಿಕೊಂಡಿದ್ದಾರೆ.
ಸುಂಟಿಕೊಪ್ಪ ಪೊಲೀಸ್ ಠಾಣಾ ಅಪರಾಧ ವಿಭಾಗದ ಪಿ.ಎಸ್.ಐ ವೆಂಕಟರಮಣ, ಪಿ.ಎಸ್.ಐ ಪುನೀತ್ ಸಿಬ್ಬಂದಿಗಳಾದ ಸತೀಶ್, ಜಗದೀಶ್, ಉದಯಕುಮಾರ್, ಪುನೀತ್ ಅವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!