ಫೆ.20 ರಂದು ಜಿಲ್ಲಾ ಮಟ್ಟದ ಯುವ ವಿಜ್ಞಾನಿ ಪ್ರಶಸ್ತಿಗೆ ಆಯ್ಕೆ

February 9, 2021

ಮಡಿಕೇರಿ ಫೆ.9 :ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವತಿಯಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ , ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ 2019-20 ನೇ ಸಾಲಿನ ನೇ ಸಾಲಿನ ಜಿಲ್ಲಾ ಮಟ್ಟದ ಯುವ ವಿಜ್ಞಾನಿ ಪ್ರಶಸ್ತಿಗೆ ಸ್ಪರ್ಧೆಯು ಫೆಬ್ರವರಿ, 20 ರಂದು ಬೆಳಗ್ಗೆ 10 ಗಂಟೆಗೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ.
ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಛಿಸುವ ಪ್ರಸ್ತುತ 9 ರಿಂದ 12 (ದ್ವಿತೀಯ ಪಿಯುಸಿ) ನೇ ತರಗತಿಯಲ್ಲಿ ಓದುತ್ತಿರುವ ಅರ್ಹ ವಿದ್ಯಾರ್ಥಿಗಳು ನಿಗದಿತ ಅರ್ಜಿಯನ್ನು ಭರ್ತಿಮಾಡಿ ಫೆ.16 ರೊಳಗೆ ಮಡಿಕೇರಿಯಲ್ಲಿನ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿ( ಡಿಡಿಪಿಐ ಕಚೇರಿ)ಗೆ ಅರ್ಜಿ ಸಲ್ಲಿಸಲು ತಿಳಿಸಿದೆ.
ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗೆ ರೂ. 5 ಸಾವಿರ ನಗದು ಬಹುಮಾನ ಹಾಗೂ ದ್ವಿತೀಯ ಸ್ಥಾನ ಗಳಿಸಿದ ವಿದ್ಯಾರ್ಥಿಗೆ ರೂ.3 ಸಾವಿರ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯುವ ಯುವ ವಿಜ್ಞಾನಿಯು ನಂತರ ರಾಜ್ಯಮಟ್ಟದ ಯುವ ವಿಜ್ಞಾನಿ ಸ್ಪರ್ಧೆಗೆ ಭಾಗವಹಿಸಲು ಅರ್ಹತೆ ಹೊಂದಿರುತ್ತಾನೆ. ಈ ಸ್ಪರ್ಧೆಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಸ್ಪರ್ಧೆಗೆ ತಮ್ಮ ಮಾರ್ಗದರ್ಶಿ ಶಿಕ್ಷಕರೊಂದಿಗೆ ಹಾಜರಾಗಬೇಕು ಎಂದು ಯುವ ವಿಜ್ಞಾನಿ ಸ್ಪರ್ಧೆಯ ಜಿಲ್ಲಾ ಸಂಯೋಜಕರಾದ ಜಿ.ಶ್ರೀಹರ್ಷ ಅವರು ತಿಳಿಸಿದ್ದಾರೆ.
ಡಿಡಿಪಿಐ ಕಚೇರಿಗೆ ಸಲ್ಲಿಸುವ ಅರ್ಜಿಯ ಮತ್ತೊಂದು ಪ್ರತಿಯನ್ನು ಬೆಂಗಳೂರಿನ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೇಂದ್ರ ಕಚೇರಿಗೆ ಸಲ್ಲಿಸಬೇಕು. ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ವಿಜ್ಞಾನದ ಯಾವುದಾದರೂ ಒಂದು ವಿಷಯಕ್ಕೆ ಸಂಬಂಧಿಸಿದಂತೆ ವೈಜ್ಞಾನಿಕ ಯೋಜನಾ ಪ್ರಬಂಧ/ಮಾದರಿಯೊಂದಿಗೆ 8 ನಿಮಿಷಗಳ ಕಾಲ ಪ್ರಬಂಧ ಮಂಡಿಸಬೇಕು.
ಸ್ಪರ್ಧೆಗೆ ಭಾಗವಹಿಸುವ ವಿದ್ಯಾರ್ಥಿಗಳು ಕಳೆದ ಮೂರು ವರ್ಷಗಳಲ್ಲಿ ವಿಜ್ಞಾನ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ವಿವಿಧ ಹಂತದ(ತಾಲ್ಲೂಕು, ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳು) ಸ್ಪರ್ಧೆಗಳಲ್ಲಿ ಭಾಗವಹಿಸಿ ತಾವು ಪಡೆದಿರುವ ಪ್ರಶಸ್ತಿ/ಪ್ರಶಂಸನಾ ಪತ್ರಗಳನ್ನು ನಿಗದಿತ ಅರ್ಜಿಯೊಂದಿಗೆ ಶಾಲಾ-ಕಾಲೇಜಿನ ಮುಖ್ಯಸ್ಥರಿಂದ ದೃಢೀಕರಿಸಿ ಸಲ್ಲಿಸಲು ತಿಳಿಸಲಾಗಿದೆ. ವಿಜ್ಞಾನ ಚಟುವಟಿಕೆಗಳನ್ನು ಹೊರತುಪಡಿಸಿ ಇತರೆ ಸ್ಪರ್ಧೆಗಳನ್ನು ಪರಿಗಣಿಸಲಾಗುವುದಿಲ್ಲ.
ಈ ಸಂಬಂಧ ವಿದ್ಯಾರ್ಥಿಗಳು ಕಳೆದ ಮೂರು ವರ್ಷಗಳಲ್ಲಿ ವಿಜ್ಞಾನ ಸ್ಪರ್ಧೆಗಳಲ್ಲಿ ಭಾಗವಹಿಸಿ ಪಡೆದ ಸ್ಥಾನದ ವಿವರ/ಬಹುಮಾನಗಳನ್ನು ವರ್ಷವಾರು ಸ್ಪರ್ಧೆಗಳ ವಿವರಗಳೊಂದಿಗೆ ಪ್ರತ್ಯೇಕ ಪಟ್ಟಿ ಮಾಡಿ ಸಲ್ಲಿಸಬೇಕು ಎಂದು ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಕಾರ್ಯದರ್ಶಿ ಟಿ.ಜಿ.ಪ್ರೇಮಕುಮಾರ್ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿ ಹಾಗೂ ನಿಗದಿತ ಅರ್ಜಿ ಪಡೆಯಲು ಎಸ್.ಟಿ.ವೆಂಕಟೇಶ್, ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕರು, ಡಿಡಿಪಿಐ ಕಛೇರಿ, ಮಡಿಕೇರಿ (ಮೊ.ನಂ: 94488 73999) ಅಥವಾ ಕಾರ್ಯಕ್ರಮದ ಜಿಲ್ಲಾ ಸಂಯೋಜಕ ಜಿ. ಶ್ರೀಹರ್ಷ (ಮೊ.ನಂ: 94814 31263) ಅವರನ್ನು ಸಂಪರ್ಕಿಸಲು ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಕಾರ್ಯದರ್ಶಿ ಟಿ.ಜಿ.ಪ್ರೇಮಕುಮಾರ್ (9448588352) ತಿಳಿಸಿದ್ದಾರೆ.
ಭರ್ತಿ ಮಾಡಿದ ಅರ್ಜಿಯನ್ನು ಫೆ.16 ರೊಳಗಾಗಿ ಡಿಡಿಪಿಐ ಕಚೇರಿಯಲ್ಲಿ ಸ್ಪರ್ಧಾ ಕಾರ್ಯಕ್ರಮದ ಕಚೇರಿ ನಿರ್ವಾಹಕರಾದ ರೇವಣ್ಣ ಅವರಿಗೆ ಸಲ್ಲಿಸಲು ತಿಳಿಸಿದೆ.

error: Content is protected !!