ವಿಧಾನ ಪರಿಷತ್ ನಲ್ಲಿ ಗೋಹತ್ಯೆ ನಿಷೇಧ ಮಸೂದೆ ಅಂಗೀಕಾರ
February 9, 2021

ಬೆಂಗಳೂರ: ಕಾಂಗ್ರೆಸ್ ಹಾಗೂ ಜೆಡಿಎಸ್ ನ ತೀವ್ರ ವಿರೋಧದ ನಡುವೆಯೂ ವಿಧಾನಪರಿಷತ್ತಿನಲ್ಲಿ ಗೋಹತ್ಯೆ ನಿಷೇಧ ಮಸೂದೆ ಅಂಗೀಕಾರವಾಗಿದೆ.
ಕರ್ನಾಟಕ ಜಾನುವಾರ ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-2020(ಗೋ ಹತ್ಯೆ ನಿಷೇಧ) ಅನ್ನು ವಿಧಾನ ಇಂದು ಪರಿಷತ್ ನಲ್ಲಿ ಮಂಡಿಸಿದ ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರು, ಅನುಮೋದನೆ ನೀಡಬೇಕು ಎಂದು ಸದನವನ್ನು ಕೋರಿದರು.
ಮಸೂದೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಿಡಿಸಿದರು. ನಾರಾಯಣಸ್ವಾಮಿ, ಆರ್ ಬಿ ತಿಮ್ಮಾಪುರ ಹಾಗೂ ನಸೀರ್ ಅಹ್ಮದ್ ಅವರು ವಿಧೇಯಕದ ಪ್ರತಿ ಎಸೆದು ಆಕ್ರೋಶ ವ್ಯಕ್ತಪಡಿಸಿದರು.
ತೀವ್ರ ಗದ್ದಲದ ನಡುವೆಯೂ ಧ್ವನಿಮತದ ಮೂಲಕ ಮಸೂದೆಯನ್ನು ಅಂಗೀಕರಿಸಲಾಯಿತು.
ಮಸೂದೆ ಕುರಿತು ಮಾತನಾಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು, ರಾಜ್ಯದಲ್ಲಿ ಜಾನುವಾರಗಳ ಹತ್ಯೆ ತಡೆಗಟ್ಟುವುದು ಅನಿವಾರ್ಯ. 1964ರ ಕಾಯ್ದೆಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಲು ಹೊಸ ವಿಧೇಯಕವನ್ನು ಮಂಡಿಸಲಾಗಿದೆ ಎಂದರು.
