ಕೊಡವ ಮಕ್ಕಡ ಕೂಟದಿಂದ “ನಾಡ ಪೆದ ಆಶಾ” ಮತ್ತು “ಬೈಸಿಕಲ್” ಪುಸ್ತಕ ಲೋಕಾರ್ಪಣೆ

February 9, 2021

ಮಡಿಕೇರಿ ಫೆ.9 : ಕೊಡವ ಮಕ್ಕಡ ಕೂಟದ ವತಿಯಿಂದ ಇಂದು ಎರಡು ಪುಸ್ತಕಗಳನ್ನು ಅನಾವರಣಗೊಳಿಸಲಾಯಿತು. ಕನ್ನಡ ಮತ್ತು ಕೊಡವ ಭಾಷೆಯ ಒಟ್ಟು 17 ಪುಸ್ತಕಗಳನ್ನು ಬರೆದಿರುವ ಹಿರಿಯ ಸಾಹಿತಿ ನಾಗೇಶ್ ಕಾಲೂರು ಅವರು ರಚಿಸಿರುವ 18 ನೇ ಪುಸ್ತಕ “ನಾಡ ಪೆದ ಆಶಾ” ಹಾಗೂ ನಾಲ್ಕು ಪುಸ್ತಕಗಳನ್ನು ಬರೆದಿರುವ ಸಾಹಿತಿ, ನಟ, ನಿರ್ದೇಶಕ, ನಿರ್ಮಾಪಕ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಅವರ 5 ನೇ ಪುಸ್ತಕ “ಬೈಸಿಕಲ್” ಲೋಕಾರ್ಪಣೆಗೊಡಿತು.
ನಗರದ ಪತ್ರಿಕಾ ಭವನದಲ್ಲಿ ನಡೆದ ಪುಸ್ತಕಗಳ ಲೋಕಾರ್ಪಣೆಯ ಸರಳ ಕಾರ್ಯಕ್ರಮದಲ್ಲಿ ಸಾಹಿತಿ ನಾಗೇಶ್ ಕಾಲೂರು ಅವರು ಮಾತನಾಡಿ ಮನುಷ್ಯನ ಜೀವನ ತನ್ನ ಸ್ವಂತಕ್ಕಷ್ಟೇ ಸೀಮಿತವಾಗಬಾರದು, ಬದಲಿಗೆ ಸಮಾಜಕ್ಕೂ ತಮ್ಮದೇ ಆದ ಕೊಡುಗೆ ನೀಡಬೇಕಾಗುತ್ತದೆ. ಈ ಎಳೆಯನ್ನು ಆಧರಿಸಿ “ನಾಡ ಪೆದ ಆಶಾ” ಕಾದಂಬರಿಯನ್ನು ರಚಿಸಲಾಗಿದೆ ಎಂದರು.
ಅಂಗನವಾಡಿ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುವ ರೈತ ಕುಟುಂಬದ ಹೆಣ್ಣೊಬ್ಬಳ ಸಾಮಾಜಿಕ ಜೀವನದ ಮೇಲೆ ಕಾದಂಬರಿ ಬೆಳಕು ಚೆಲ್ಲಿದೆ. ಯೋಧನ ಪತ್ನಿ, ರೈತ ಮಹಿಳೆ ತನ್ನ ಬದುಕಿನಲ್ಲಿ ಅನುಭವಿಸುವ ಸಾಮಾಜಿಕ ಸಂಕಷ್ಟಗಳು ಮತ್ತು ಆಕೆ ಈ ಸಮಾಜಕ್ಕಾಗಿ ತನ್ನದೇ ಆದ ಕೊಡುಗೆಗಳನ್ನು ನೀಡುವ ಕಥಾ ಹಂದರವಿದೆ. ಕಥಾ ನಾಯಕಿಯಾಗಿರುವ ಕಾವೇರಿ ಪಾತ್ರಧಾರಿ ತನ್ನ ನಿಸ್ವಾರ್ಥ ಸೇವೆಯ ಮೂಲಕವೇ ಸಮಾಜದ ಗಮನ ಸೆಳೆದು ಆಶಾ ಎಂದು ಹೆಸರು ಗಳಿಸುತ್ತಾಳೆ. ಗ್ರಾಮೀಣ ಹಿನ್ನೆಲೆಯ ಕಥೆಯನ್ನು ಕೊಡಗಿನ ಸಾಂಸ್ಕøತಿಕ ಚಿತ್ರಣದೊಂದಿಗೆ ರಚಿಸಲಾಗಿದೆ ಎಂದು ನಾಗೇಶ್ ಕಾಲೂರು ತಿಳಿಸಿದರು.
ಚಿತ್ರ ನಿರ್ಮಾಪಕ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ತಮ್ಮ “ಬೈಸಿಕಲ್” ಪುಸ್ತಕದ ಕುರಿತು ಮಾತನಾಡಿ ತಂದೆಯನ್ನು ಕಳೆದುಕೊಂಡ ಬಡ ಕುಟುಂಬದ ಮಕ್ಕಳ ಜೀವನವನ್ನು ಮನೋಜ್ಞವಾಗಿ ಚಿತ್ರಿಸಲಾಗಿದೆ ಎಂದರು.
ಚಿಂದಿ ಆಯುವ ಬೀದಿ ಬದಿಯ ಮಕ್ಕಳು “ಬೈಸಿಕಲ್” ಖರೀದಿಗಾಗಿ ಹಣ ಸಂಗ್ರಹಿಸಲು ಪಡುವ ಕಷ್ಟಗಳನ್ನು ಮತ್ತು ಜೀವನದ ಮೌಲ್ಯಗಳನ್ನು ಕಥೆಯಲ್ಲಿ ವಿವರಿಸಲಾಗಿದೆ ಎಂದರು.
ನಾಟಕ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ನಾನು ಇದೀಗ ಸಾಹಿತ್ಯದೆಡೆಗೂ ಒಲವು ತೋರಿರುವುದಾಗಿ ತಿಳಿಸಿದ ಪ್ರಕಾಶ್ ಕಾರ್ಯಪ್ಪ, ಪುಸ್ತಕ ಹೊರ ತರಲು ಸಹಕರಿಸಿದ ಪ್ರಾಯೋಜಕರು ಮತ್ತು ಕೊಡವ ಮಕ್ಕಡ ಕೂಟಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
“ಬೈಸಿಕಲ್” ಪುಸ್ತಕ ಅನಾವರಣಗೊಳಿಸಿ ಮಾತನಾಡಿದ ಸಮಾಜ ಸೇವಕರು ಹಾಗೂ ಡೆಫೋಡೈಲ್ಸ್ ಇಂಟರ್ ನ್ಯಾಷನಲ್ ಸ್ಕೂಲ್‍ನ ಮಾಲೀಕ ಐಚೆಟ್ಟೀರ ಚಿಣ್ಣಪ್ಪ ಅವರು ಸಾಹಿತಿಗಳಿಗೆ ಪ್ರೋತ್ಸಾಹದ ಅಗತ್ಯವಿದೆ ಎಂದರು. ಒಟ್ಟು 48 ಪುಸ್ತಕಗಳನ್ನು ಹೊರ ತಂದು ದೊಡ್ಡ ಸಾಧನೆ ಮಾಡಿರುವ ಕೊಡವ ಮಕ್ಕಡ ಕೂಟಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಕರೆ ನೀಡಿದರು.
ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ ಕೂಟದ ವತಿಯಿಂದ 47ನೇ ಪುಸ್ತಕವಾಗಿ “ನಾಡ ಪೆದ ಆಶಾ” ಹಾಗೂ 48ನೇ ಪುಸ್ತಕವಾಗಿ “ಬೈಸಿಕಲ್” ಲೋಕಾರ್ಪಣೆಗೊಂಡಿದೆ ಎಂದರು. ಎಲೆ ಮರೆಯ ಕಾಯಿಯಂತ್ತಿರುವ ಸಾಹಿತ್ಯ ಪ್ರತಿಭೆಗಳನ್ನು ಬೆಳಕಿಗೆ ತರುವ ಕಾರ್ಯವನ್ನು ಕೂಟ ಮಾಡಿದೆ. ಸೇನೆ, ಕ್ರೀಡೆ, ಸಾಹಿತ್ಯ ಮತ್ತಿತರ ಕ್ಷೇತ್ರಗಳ ಸಾಧಕರ ಕುರಿತು ಪುಸ್ತಕಗಳು ಹೊರ ಬಂದಿದ್ದು, ಹಲವು ಪುಸ್ತಕಗಳಿಗೆ ಕೊಡವ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳು ಕೂಡ ಲಭಿಸಿದೆ.
ವಿವಿಧ ಗ್ರಂಥಾಲಯಗಳಲ್ಲೂ ಪುಸ್ತುಕಗಳು ಲಭ್ಯವಿದ್ದು, ಪುಸ್ತಕಗಳಲ್ಲಿನ ಮಾಹಿತಿಯಿಂದ ಶೈಕ್ಷಣಿಕ ಕ್ಷೇತ್ರದ ಹಲವರಿಗೆ ಸಹಾಯವಾಗಿದೆ ಎಂದು ತಿಳಿಸಿದರು.
ಸಮಾಜ ಸೇವಕ ನಂದಿನೆರವಂಡ ಪ್ರವೀಣ್ ಪಳಂಗಪ್ಪ ಅವರು “ನಾಡ ಪೆದ ಆಶಾ” ಪುಸ್ತಕವನ್ನು ಲೋಕಾರ್ಪಣೆಗೊಳಿಸಿದರು. ಮತ್ತೊಬ್ಬ ಸಮಾಜ ಸೇವಕ ಪಾಡೆಯಂಡ ದೀಪಕ್ ದೇವಯ್ಯ ಉಪಸ್ಥಿತರಿದ್ದರು.
::: ಕೊಟ್ಟುಕತ್ತಿರ ಪ್ರಕಾಶ್ ಪರಿಚಯ :::
ಚೇರಂಬಾಣೆ ಕೋಪಟ್ಟಿ ಗ್ರಾಮದ ಕೊಟ್ಟುಕತ್ತಿ ಕಾರ್ಯಪ್ಪ ಮತ್ತು ರಾಗಿಣಿ ದಂಪತಿಯರ ಮಗನಾದ ಪ್ರಕಾಶ್ ಕಾರ್ಯಪ್ಪ 1965 ಸೆಪ್ಟೆಂಬರ್ 20 ರಂದು ಜನಿಸಿದರು. ಕಾಲೂರು ಮತ್ತು ಗಾಳಿಬೀಡು ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿ 1983ರಲ್ಲಿ ಭಾರತೀಯ ಸೇನೆಗೆ ಸೇರಿದರು. ಜಮ್ಮು, ಕಾಶ್ಮೀರ, ಪಂಜಾಬ್ ಬ್ಲೂಸ್ಟಾರ್, ಗ್ವಾಲಿಯಾರ್, ಐಪಿಕೆಎಫ್ ಶ್ರೀಲಂಕ ಮತ್ತು ನಾರ್ತ್ ಈಸ್ಟ್ ಸೆಕ್ಟರ್ ಅರುಣಾಚಲ ಪ್ರದೇಶ ಅಸ್ಸಾಂ, ನಾಗಲ್ಯಾಂಡ್ ಗ್ರಿಫ್‍ಲ್ ಡೆಪ್ಯುಟೇಷನ್ ಮತ್ತು ರಾಜಸ್ಥಾನ, ಪಂಜಾಬ್ ಗಡಿಯಲ್ಲಿ ಸೇವೆ ಸಲ್ಲಿಸಿರುವುದಲ್ಲದೆ ಕಾರ್ಗಿಲ್ ಯುದ್ಧದ ಸಂದರ್ಭದಲ್ಲೂ ದೇಶಭಕ್ತಿ ಮೆರೆದಿದ್ದಾರೆ.
17 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಮಾಡಿ, 2000ನೇ ಇಸವಿಯಲ್ಲಿ ನಿವೃತ್ತಿ ಪಡೆದರು. ಇದೀಗ ಬೆಂಗಳೂರಿನ ಸ್ವಸ್ತಿಕ್ ಕನ್‍ಸ್ಟ್ರಕ್ಷನ್ಸ್ ಮತ್ತು ಸ್ವಸ್ತಿಕ್ ಕಾಂಕ್ರೀಟ್ ಪ್ರಾಡಕ್ಟ್ ಎನ್ನುವ ಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಇವರು ಶಿರಂಗಳ್ಳಿ ಗ್ರಾಮದ ಮಂದೆಯಂಡ ಅಯ್ಯಪ್ಪ ಹಾಗೂ ರಾಧಾ ದಂಪತಿಗಳ ಪುತ್ರಿ ಯಶೋಧರನ್ನು ವಿವಾಹವಾದರು. ಇವರಿಗೆ ತೇಜಲ್ ಕಾರ್ಯಪ್ಪ ಮತ್ತು ಶನಲ್ ಕಾರ್ಯಪ್ಪ ಎಂಬ ಇಬ್ಬರು ಪುತ್ರಿಯರಿದ್ದಾರೆ.
ಪ್ರಕಾಶ್ ಗಾಲಿಯಾರ್‍ನಲ್ಲಿ ಆರ್ಮಿ ಯೂನಿಟ್‍ನ ಬಾಜ್ ಥಿಯೇಟರ್ ವರ್ಕ್ ಮಾಡುತ್ತಿರುವಾಗಲೇ ನಾಟಕದ ಹುಚ್ಚನ್ನು ಹಚ್ಚಿಕೊಂಡಿದ್ದರು. ಸೇನಾ ನಿವೃತ್ತಿಯ ನಂತರ ಬೆಂಗಳೂರಿನಲ್ಲಿ ಚಿತ್ರ ನಿರ್ದೇಶಕ ಆಪಾಡಂಡ ಟಿ.ರಘು ಅವರ ಮೂರು ಸೀರಿಯಲ್‍ನಲ್ಲಿ ನಟನೆ ಮಾಡಿದ್ದಾರೆ. ಸುಮಾರು 16 ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೆ ತಮ್ಮದೇ ಸ್ವಂತ ಸ್ವಸ್ತಿಕ್ ಎಂಟರ್‍ಟೈನ್‍ಮೆಂಟ್ ಮತ್ತು ಕೂರ್ಗ್ ಕಾಫಿ ವುಡ್ ಮೂವೀಸ್ ಎನ್ನುವ ಹೋಂ ಪೆÇ್ರಡಕ್ಷನ್ ಸಂಸ್ಥೆಯನ್ನು ಪ್ರಾರಂಭಿಸಿ ಈಗಾಗಲೇ ಕನ್ನಡ ಮತ್ತು ಕೊಡವ ಸಿನಿಮಾ ಸೇರಿದಂತೆ 9 ಚನಲನಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ.
‘ಬಾಕೆಮನೆ-ಕೊಡವ ಚಲನಚಿತ್ರ, ಆಶ್ರಮ ಧಾಮ-ಮಕ್ಕಳ ಚಿತ್ರ, “ಮೇಷ್ಟ್ರೇ ದೇವರು”, ಸ್ಮಶಾನ ಮೌನ”, ಮಕ್ಕಳ ತೀರ್ಪು-ನಿರ್ದೇಶನ, ಕೊಡಗ್‍ರ ಸಿಪಾಯಿ” ಇದರಲ್ಲಿ “ಸ್ಮಶಾನ ಮೌನ”, “ಬಾಕೆಮನೆ”, “ಕೊಡಗ್‍ರ ಸಿಪಾಯಿ” ಎಂಬ ಮೂರು ಸಿನಿಮಾಗಳು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿವೆ.
‘ಆಶ್ರಯಧಾಮ’ 2017ರ ಅತ್ಯುತ್ತಮ ಮಕ್ಕಳ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. ‘ಅಬ್ದುಲ್ಲ’ ಚಲನಚಿತ್ರ ನಿರ್ಮಾಣದ ಪಾಲುದಾರರಾಗಿದ್ದಾರೆ. ದೀಕ್ಷ” ಮಕ್ಕಳ ಕನ್ನಡ ಚಲನಚಿತ್ರ,ಪರ್ಜನ್ಯ ನಿರ್ಮಾಣ ಮತ್ತು ನಿರ್ಮಾಪಕ, ‘ಮಕ್ಕಳ ತೀರ್ಪು’ ಚಿತ್ರ ನಿರ್ದೇಶನ, ಮೂರು ಕೊಡವ ಚಲನಚಿತ್ರಗಳನ್ನು ನಿರ್ಮಾಣ ಮಾಡಿದ ಮೊದಲ ನಿರ್ದೇಶಕ ಮತ್ತು ನಿರ್ಮಾಪಕ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.
ಅಲ್ಲದೆ ‘ಮಕ್ಕಳ ತೀರ್ಪು’ ಎನ್ನುವ ಕನ್ನಡ ಚಿತ್ರವನ್ನು ನಿರ್ದೇಶನ ಮಾಡಿರುವುದು ಇವರ ಹೆಗ್ಗಳಿಕೆಯಾಗಿದೆ. ಪ್ರಸ್ತುತ “ನಾಡ ಪೆದ ಆಶಾ” ಕೊಡವ ಚಿತ್ರದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿ ವರ್ಷಕ್ಕೊಮ್ಮೆ ಕೊಡವ ಚಲನಚಿತ್ರವನ್ನು ತೆರೆಗೆ ತರುವ ಮೂಲಕ ಕೊಡವ ಭಾಷೆಯನ್ನು ದೇಶ ವಿದೇಶಗಳಲ್ಲಿ ಪರಿಚಯಿಸುವ ಇಚ್ಛೆಯನ್ನು ಪ್ರಕಾಶ್ ಹೊಂದಿದ್ದಾರೆ. ಇವರ ನಾಲ್ಕು ಪುಸ್ತಕಗಳು ಈಗಾಗಲೇ ಪ್ರಕಟಗೊಂಡಿದ್ದು, “ಬೈಸಿಕಲ್” ಐದನೇ ಪುಸ್ತಕವಾಗಿದೆ.
::: ನಾಗೇಶ್ ಕಾಲೂರು ಪರಿಚಯ :::
ಕನ್ನಡ ಕೊಡವ ಸೇರಿದಂತೆ ಪರ ಭಾಷೆಯಲ್ಲೂ ಸಾಹಿತ್ಯ ರಚನೆ ಮಾಡುತ್ತಿರುವ ನಾಗೇಶ್ ಕಾಲೂರು ಕತೆ, ಕವನ, ವೈಚಾರಿಕ ಬರವಣಿಗೆ, ನಾಟಕ ಹೀಗೆ ಬೇರೆ ಬೇರೆ ಸಾಹಿತ್ಯ ಪ್ರಕಾರದಲ್ಲಿ ಕೃಷಿ ಮಾಡುತ್ತಿದ್ದಾರೆ.
ಕೊಡವ ಭಾಷೆಯಲ್ಲಿ ಶ್ರೀಭಗವದ್ಗೀತಾ ದರ್ಶನ (ಕಾವ್ಯ), ಕಾವೇರಿ ಸುಪ್ರಭಾತ, ಇಗ್ಗುತ್ತಪ್ಪ ಸುಪ್ರಭಾತ ಸೇರಿದಂತೆ ಹಲವು ಹಾಡುಗಳ ಸಿಡಿ, ಕವನ ಸಂಕಲನ ಬಿಡುಗಡೆಯಾಗಿದೆ. ಮಡಿಕೇರಿ ಆಕಾಶವಾಣಿಯಲ್ಲಿ ಹಲವು ರೆಡಿಯೋ ನಾಟಕ, “ಪಳಮೆ ಪೊಮ್ಮಲೆ’ ಎನ್ನುವ ನಾಟಕ ಸರಣಿ, ಲಘು ಶೈಲಿ ಭಾಷಣ ಪ್ರಸಾರವಾಗಿದೆ.
ಕನ್ನಡದಲ್ಲಿ ಎರಡು ಕವನ ಸಂಕಲನ, ಒಂದು ಕಥಾ ಸಂಕಲನ, ಒಂದು ಲಲಿತ ಪ್ರಬಂಧ ಸಂಕಲನ, ಕೊಡವ ಭಾಷಿಕ ಜನಾಂಗಗಳ ಸಾಂಸ್ಕøತಿಕ ಬದುಕು (ಸಂಶೋಧನಾ ಗ್ರಂಥ), ತಮಷೆ ಬರವಣಿಗೆ, ಲಘು ಶೈಲಿ ಭಾಷಣ, ರೆಡಿಯೋ ನಾಟಕ ಇವುಗಳು ಬೆಳಕಿಗೆ ಬಂದಿದೆ.
14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳ ಅಧ್ಯಕ್ಷತೆ, 5ನೇ ಮಡಿಕೇರಿ ತಾಲ್ಲೂಕು ಸಾಹಿತ್ಯ ಸಮ್ಮೆಳನ ಅಧ್ಯಕ್ಷತೆ ವಹಿಸಿದ್ದ ಇವರು ಮಂಗಳೂರು ವಿಶ್ವವಿದ್ಯಾನಿಲಯ ಕೊಡವ ಅಧ್ಯಯನ ಪೀಠದ ಹಾಲಿ ಸದಸ್ಯರಾಗಿದ್ದಾರೆ.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ, ಮಡಿಕೇರಿ ಆಕಾಶವಾಣಿಯಲ್ಲಿ ಕೊಡವ ವಾರ್ತಾ ವಾಚಕರಾಗಿ, ಕೊಡವ ಪಠ್ಯ ಪುಸ್ತಕ ರಚನೆಕಾರರಾಗಿ, ಭಾಷಾಂತರಕಾರರಾಗಿ, ರೆಡಿಯೋ ಕಾರ್ಯಕ್ರಮ ನಿರೂಪಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ಗೌರವ ಪ್ರಶಸ್ತಿ, ರಾಜ್ಯ ಮಟ್ಟದ ಸಾಹಿತ್ಯ ಪ್ರಶಸ್ತಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸನ್ಮಾನ ಗೌರವ ಪ್ರಶಸ್ತಿ, ಚುಟುಕು ಸಾಹಿತ್ಯ ಪರಿಷತ್ ಗೌರವ ಪ್ರಶಸ್ತಿ, ಜಿಲ್ಲಾಡಳಿತ ಮೂಲಕ ರಾಜ್ಯೋತ್ಸವ ಪುರಸ್ಕಾರ, ವಿವಿಧ ಸಂಘ ಸಂಸ್ಥೆಗಳ ಮೂಲಕ ಸನ್ಮಾನ, ಪುರಸ್ಕಾರ ಪಡೆದಿದ್ದಾರೆ. ಜೀವನದಿ ಕಾವೇರಿ ಕುರಿತು ರಚಿಸಿರುವ ಇವರ ಮಹಾಕಾವ್ಯ ಸಧ್ಯದಲ್ಲೇ ಲೋಕಾರ್ಪಣೆಗೊಳ್ಳಲಿದೆ. “ನಾಡ ಪೆದ ಆಶಾ” ಇದು ಇವರ ಮೊದಲನೇ ಕಾದಂಬರಿಯಾಗಿದೆ.
ಇವರು ಪತ್ನಿ ಶಚಿದೇವಿ, ಪುತ್ರಿ ಪ್ರೀತಿ, ಪುತ್ರ ಸಂತೋಷ್, ಸೊಸೆ ವಿದ್ಯಾಲಕ್ಷ್ಮಿ, ಮೊಮ್ಮಗ ಶ್ರೀವರ್ಧನ್ ಅವರುಗಳ ಜೊತೆ ಕಡಗದಾಳು ಗ್ರಾಮದಲ್ಲಿ ವಾಸವಿದ್ದಾರೆ.

error: Content is protected !!