ಬೆಳೆಗಾರರ ಸಾಲ ಮನ್ನಾಕ್ಕೆ ಒತ್ತಾಯ : ಮಡಿಕೇರಿಯಲ್ಲಿ ಪ್ರಾಂತ ರೈತ ಸಂಘದಿಂದ ಪ್ರತಿಭಟನೆ

February 9, 2021

ಮಡಿಕೇರಿ ಫೆ.9 : ಅಕಾಲಿಕ ಮಳೆಯಿಂದ ತತ್ತರಿಸಿರುವ ಕೊಡಗಿನ ಸಣ್ಣ, ಮಧ್ಯಮ ಬೆಳೆಗಾರರ ಬೆಳೆ ಸಂಬಂಧಿತ ಸಾಲ ಪೂರ್ಣ ಮನ್ನಾ ಮಾಡಬೇಕು ಮತ್ತು ಶೂನ್ಯ ಬಡ್ಡಿಯಲ್ಲಿ ಸಾಲ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕೊಡಗು ಜಿಲ್ಲಾ ಘಟಕ ನಗರದಲ್ಲಿ ಪ್ರತಿಭಟನೆ ನಡೆಸಿತು.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಸಂಘದ ಪ್ರಮುಖರು ಹಾಗೂ ಪದಾಧಿಕಾರಿಗಳು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿದರು.
ಈ ಸಂದರ್ಭ ಮಾತನಾಡಿದ ಸಂಚಾಲಕ ಡಾ.ಈ.ರಾ.ದುರ್ಗಾಪ್ರಸಾದ್ ಅಕಾಲಿಕ ಮಳೆಯಿಂದಾಗಿ ಭತ್ತ, ಕಾಫಿ, ಕರಿಮೆಣಸು ಎಲ್ಲಾ ಬೆಳೆಗಳಿಗೂ ಅಪಾರ ನಷ್ಟ ಸಂಭವಿಸಿದೆ. ರೈತರು ಬೆಳೆಸಿದ ಅತೀರಾ ಭತ್ತಕ್ಕೆ ಸರಕಾರ ಬೆಂಬಲ ಬೆಲೆ ಘೋಷಿಸದೇ ಇರುವುದರಿಂದ ಕೆಲವರು ಪರಿಸ್ಥಿತಿಯ ದುರ್ಲಾಭ ಪಡೆದುಕೊಳ್ಳಲಾಗುತ್ತಿದ್ದಾರೆ ಎಂದು ಆರೋಪಿಸಿದರು.
ಬೆಳೆದ ಬೆಳೆಗೆ ಬೆಲೆ ಇಲ್ಲದಾಗಿದೆ, ಆದರೆ ನಿತ್ಯೋಪಯೋಗಿ ಸರಕುಗಳ ಬೆಲೆ ಹೆಚ್ಚುತ್ತಲೇ ಇದ್ದು, ರೈತರು ಸಂಕಷ್ಟದ ಪರಿಸ್ಥಿತಿಗೆ ಸಿಲುಕಿದ್ದಾರೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಕೇರಳ ಸರಕಾರ ಕಾಫಿ ಬೆಳೆಗೆ ಘೋಷಿಸಿದ ಮಾದರಿಯಲ್ಲೇ ಕರ್ನಾಟಕ ಸರ್ಕಾರ ಕೂಡ ಬೆಂಬಲ ಬೆಲೆ ಘೋಷಿಸಬೇಕು, ಕಾಫಿ ಮಂಡಳಿಯನ್ನು ಸಶಕ್ತಗೊಳಿಸಬೇಕು, ಸಣ್ಣ ಬೆಳೆಗಾರರ ಜೀವನ ಭದ್ರತೆಗೆ ಸರ್ಕಾರ ಮುಂದಾಗಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನಾಕಾರರು ಒತ್ತಾಯಿಸಿದರು.
ಸಂಘದ ಪ್ರಮುಖ ಸದಸ್ಯ ಕೆ.ಎನ್.ನೌಶೀರ್, ಕೆ.ಎ.ಹಂಸ ಚಾಮಿಯಾಲ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!