ತೈಲೋತ್ಪನ್ನಗಳ ಬೆಲೆ ಏರಿಕೆಗೆ ಖಂಡನೆ : ವಿರಾಜಪೇಟೆಯಲ್ಲಿ ಆಟೋ ಚಾಲಕರ ಪ್ರತಿಭಟನೆ

ಮಡಿಕೇರಿ ಫೆ.9 : ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆ ಏರಿಕೆ ಕ್ರಮವನ್ನು ಖಂಡಿಸಿ ವಿರಾಜಪೇಟೆ ನಗರ ಆಟೋ ಮಾಲೀಕರು ಮತ್ತು ಮಾಲೀಕರ ಸಂಘ ಪ್ರತಿಭಟನೆ ನಡೆಸಿತು.
ಪಟ್ಟಣದ ಗಡಿಯಾರ ಕಂಬದ ಬಳಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಚಾಲಕರು ತಕ್ಷಣ ಬೆಲೆ ಏರಿಕೆಯನ್ನು ನಿಯಂತ್ರಿಸುವಂತೆ ಒತ್ತಾಯಿಸಿದರು.
ಈ ಸಂದರ್ಭ ಮಾತನಾಡಿದ ಸಂಘದ ಅಧ್ಯಕ್ಷ ಎಂ.ಎಂ.ಶಶಿಧರನ್, ತೈಲ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗಿದೆ. ಇಂದು ಲೀಟರ್ ಒಂದಕ್ಕೆ 90 ರೂ. ಗಡಿದಾಟಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ನಿತ್ಯೋಪಯೋಗಿ ವಸ್ತುಗಳು ದುಬಾರಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಾಹನ ತೆರಿಗೆ, ವಿಮೆ ಹೆಚ್ಚಳ, ದುಬಾರಿಯಾದ ಬಿಡಿಭಾಗಗಳು, ಕೋವಿಡ್ ಹಿನ್ನೆಲೆಯಲ್ಲಿ ಬಾಡಿಗೆಯಲ್ಲಿ ಇಳಿಮುಖಗೊಂಡಿರುವುದರಿಂದ ಆಟೋ ಚಾಲಕರ ಬದುಕು ದುಸ್ತರವಾಗಿದೆ ಎಂದು ತಿಳಿಸಿದ ಅವರು ಆಟೋ ದರ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದರು. ಆರ್ಟಿಎ ಸಭೆ ನಡೆಸಿ ಜಿಲ್ಲೆಗೆ ಅನ್ವಯವಾಗುವಂತೆ ದರ ಪರಿಷ್ಕರಣೆ ಮಾಡಬೇಕು. ತಪ್ಪಿದಲ್ಲಿ ಫೆ.25 ರಂದು ಸಂಘದ ವತಿಯಿಂದಲೇ ದರ ನಿಗದಿಪಡಿಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತಾಲ್ಲೂಕು ಕಛೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಚಾಲಕರು ಶಿರಸ್ತೇದಾರ್ ಅವರಿಗೆ ಬೇಡಿಕೆಗಳ ಮನವಿ ಸಲ್ಲಿಸಿದರು. ಪ್ರತಿಭಟನೆ ಸಂದರ್ಭ ಉಪಾಧ್ಯಕ್ಷ ಎ.ಅರ್ ಚಂದ್ರು ರಾವ್, ಸಹ ಕಾರ್ಯದರ್ಶಿ ವಿವೇಕ್, ಖಜಾಂಚಿ ಸತೀಶ್, ಪ್ರಮುಖರಾದ ಶ್ರೀಧರ್, ರಫೀಖ್ ಬಾಬಾ ಮತ್ತು ನಗರದ ವಿವಿಧ ಆಟೋ ನಿಲ್ದಾಣಗಳ ಸಂಘದ ಸದಸ್ಯರು ಹಾಗೂ ನೂರಕ್ಕೂ ಅಧಿಕ ಮಂದಿ ಅಟೋ ಚಾಲಕರು ಹಾಜರಿದ್ದರು.

