ಆಧಾರ್-ಪಹಣಿ ಜೋಡಣೆಗೆ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಸಲಹೆ

February 9, 2021

ಮಡಿಕೇರಿ ಫೆ. 9 : ಜಿಲ್ಲೆಯ ರೈತರಿಗೆ ವಿವಿಧ ಇಲಾಖೆಗಳ ಯೋಜನೆಯ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುವಂತೆ ಜಿಲ್ಲೆಯಲ್ಲಿ ಆಧಾರ್-ಪಹಣಿ ಜೋಡಣೆ ಆಂದೋಲನ ಹಮ್ಮಿಕೊಳ್ಳಲಾಗಿದೆ. ಈವರೆಗೆ ಆಧಾರ್ ಜೋಡಣೆ ಮಾಡಿಕೊಳ್ಳದ ರೈತರು ತಕ್ಷಣವೇ ಆಧಾರ್-ಪಹಣಿ ಜೋಡಣೆ ಮಾಡಿಕೊಳ್ಳಲು ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ತಿಳಿಸಿದ್ದಾರೆ.
ರೈತರಿಗೆ ಕೃಷಿ, ತೋಟಗಾರಿಕೆ, ರೇಷ್ಮೆ, ಮುಂತಾದ ಕೃಷಿಗೆ ಸಂಬಂಧಿಸಿದ ಬೆಳೆ ವಿಮೆ ಯೋಜನೆ, ಬೆಳೆ ಹಾನಿಗೆ ಪರಿಹಾರ, ಬೆಳೆ ಸಾಲ ಯೋಜನೆ, ಬೆಂಬಲ ಬೆಲೆ ಯೋಜನೆ ಮುಂತಾದ ಸವಲತ್ತುಗಳನ್ನು ಪಡೆಯಲು ಸರ್ಕಾರ ಹೊರತಂದಿರುವ FRUITS (Farmer Registration and Unified beneficiary  InformaTion System) ಎಂಬ ತಂತ್ರಾಂಶದಲ್ಲಿ ತಮ್ಮ ತಮ್ಮ ಎಲ್ಲಾ ಭೂ ಹಿಡುವಳಿಗಳ ಮಾಹಿತಿಗಳೊಂದಿಗೆ ಮಾಲೀಕರ ಹೆಸರು, ವಿಳಾಸ, ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ ಮತ್ತಿತರ ವಿವರಗಳೊಂದಿಗೆ ನೋಂದಾಯಿಸಿಕೊಳ್ಳುವ ಅಗತ್ಯವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆಗೆ ನಿಗದಿಯಾದ ಒಟ್ಟಾರೆ ತಾಕು 2,59,796 (ಸರ್ವೆ ನಂಬರ್) ಗಳಲ್ಲಿ ಈವರೆಗೆ 46,584 ತಾಕುಗಳಿಗೆ ಆಧಾರ್ ಜೋಡಣೆಯಾಗಿದೆ. ಬಾಕಿ ಉಳಿದ 2,13,212 ತಾಕುಗಳಿಗೆ ಆಧಾರ್ ಜೋಡಣೆ ಬಾಕಿ ಉಳಿದಿದೆ. ನೋಂದಣಿ ಮಾಡದೇ ಇರುವ ರೈತರು ತಮ್ಮ ಸಮೀಪದ ಗ್ರಾಮ ಲೆಕ್ಕಾಧಿಕಾರಿ, ರೈತ ಸಂಪರ್ಕ ಕೇಂದ್ರ, ಸಹಾಯಕ ತೋಟಗಾರಿಕಾ ಇಲಾಖೆಯ ಕಚೇರಿಗೆ ಭೇಟಿ ನೀಡಿ ಪಹಣಿ ಪತ್ರಿಕೆ, ಆಧಾರ್ ಕಾರ್ಡ್ ಪ್ರತಿಯೊಂದಿಗೆ ಒಪ್ಪಿಗೆ ಪತ್ರ, ಬ್ಯಾಂಕ್ ಖಾತೆಯ ವಿವರದ ಪ್ರತಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಪ್ರತಿ (ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ) ರೈತರಿಗೆ ಮಾತ್ರ) ಅರ್ಜಿದಾರರ ಭಾವಚಿತ್ರದೊಂದಿಗೆ ದಾಖಲಾತಿಗಳನ್ನು ಸಲ್ಲಿಸಿ ರೈತರ ಗುರುತಿನ (ಎಫ್‍ಐಡಿ-ಫಾರ್ಮರ್ಸ್‍ಐಡಿ) ಸಂಖ್ಯೆಯನ್ನು ಪಡೆದುಕೊಳ್ಳುವುದು ಅವಶ್ಯಕವಾಗಿದೆ. ಆದ್ದರಿಂದ ಆಧಾರ ಜೋಡಣೆಯಾಗದ ಎಲ್ಲಾ ತಾಕುಗಳನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ದಾಖಲಿಸಿಕೊಳ್ಳುವಂತೆ ಕೃಷಿ ಇಲಾಖೆ ಕೋರಿದೆ.

error: Content is protected !!