‘ಜಾತಿವಾರು ಜನಗಣತಿ’ಯ ವರದಿ ಬಹಿರಂಗಕ್ಕೆ ಅಹಿಂದ ಒಕ್ಕೂಟ ಒತ್ತಾಯ

February 10, 2021

ಮಡಿಕೇರಿ ಫೆ.10 : ಕರ್ನಾಟಕದಲ್ಲಿ ಮೀಸಲಾತಿ ಹೋರಾಟದ ಯುಗ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಈಗಾಗಲೇ ನಡೆದಿರುವ ‘ಜಾತಿವಾರು ಜನಗಣತಿ’ಯ ವರದಿಯನ್ನು ಜನರ ಮುಂದಿಡಬೇಕೆಂದು ಅಹಿಂದ ಒಕ್ಕೂಟದ ಸ್ಥಾಪಕಾಧ್ಯಕ್ಷ ಟಿ.ಪಿ.ರಮೇಶ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಹಿಂದುಳಿದ ಸಮುದಾಯಗಳ ಸಂಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಅಹಿಂದ ಒಕ್ಕೂಟವನ್ನು ಪುನಶ್ಚೇತನಗೊಳಿಸಲು ಉದ್ದೇಶಿಸಲಾಗಿದ್ದು, ಇದಕ್ಕೆ ಪೂರಕವಾಗಿ ಇದೇ ಫೆ.13 ರಂದು ನಗರದ ಕೊಹಿನೂರು ರಸ್ತೆಯಲ್ಲಿರುವ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಭಾಂಗಣದಲ್ಲಿ ಒಕ್ಕೂಟ ಸಭೆಯನ್ನು ಕರೆಯಲಾಗಿದೆ. ಅದರಲ್ಲಿ ಸ್ಥಳೀಯ ಸಮಸ್ಯೆಗಳೊಂದಿಗೆ, ಜಾತಿವಾರು ಜನಗಣತಿ ವರದಿ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆಂದು ಸ್ಪಷ್ಟಪಡಿಸಿದರು.
1932ರ ಬಳಿಕ ಜಾತಿ ಜನಗಣತಿ ಕಾರ್ಯ ನಡೆದಿರಲಿಲ್ಲ. 2014 ರಲ್ಲಿ ಈ ಪ್ರಯತ್ನ ರಾಜ್ಯದಲ್ಲಿ ನಡೆಯಿತು. ಇದರ ವರದಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹೊರ ಬರಲಿಲ್ಲ. ಇದೀಗ ಯಡಿಯೂರಪ್ಪ ನೇತೃತ್ವದ ಸರ್ಕಾರ ವರದಿಯನ್ನು ಸ್ವೀಕಾರಕ್ಕೂ ಮುಂದಾಗಿಲ್ಲವೆಂದು ಬೇಸರ ವ್ಯಕ್ತಪಡಿಸಿ, ಇದರಿಂದ ರಾಜ್ಯದ ಜನತೆ ಗೊಂದಲಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆ ಜಾತಿವಾರು ಜನಗಣತಿಯ ವಾಸ್ತವದ ವರದಿಯನ್ನು ಜನರ ಮುಂದಿಡುವಂತೆ ಒತ್ತಾಯಿಸಿದರು.
ಜಾತಿವಾರು ಜನಗಣತಿಯ ಕಾರ್ಯದಲ್ಲಿ ರಾಜ್ಯದ 1.30 ಲಕ್ಷ ಶಿಕ್ಷಕರು ಭಾಗಿಗಳಾಗಿದ್ದರು. ಪ್ರತಿ ವ್ಯಕ್ತಿಯ ಗಣತಿ ಕಾರ್ಯಕ್ಕೆ 6.64 ರೂ. ವೆಚ್ಚವಾಗಿದೆ. ಈ ಗಣತಿ ಕಾರ್ಯಕ್ಕಾಗಿ 208.84 ಕೋಟಿ ರೂ. ಗಳನ್ನು ನಿಗದಿ ಪಡಿಸಲಾಗಿದ್ದು, ಇದರಲ್ಲಿ 197.79 ಕೋಟಿ ಹಣ ಬಿಡುಗಡೆಯಾಗಿ, 158.47 ಕೊಟಿ ಖರ್ಚಾಗಿದೆ. ಇಂತಹ ವರದಿಯನ್ನು ಜನತೆಯ ಮುಂದಿಡುವುದು ಅತ್ಯವಶ್ಯವೆಂದು ಅವರು ಅಭಿಪ್ರಾಯಿಸಿದರು.
ಮೀಸಲಾತಿ ಯುಗ ಆರಂಭ – ಪ್ರಸ್ತುತ ರಾಜ್ಯದಲ್ಲಿ ಮೀಸಲಾತಿಯ ಯುಗ ಆರಂಭವಾಗಿದೆಯೆಂದು ಅಭಿಪ್ರಾಯಿಸಿದ ಟಿ.ಪಿ.ರಮೇಶ್, ಕುರುಬ ಸಮುದಾಯ ತಮ್ಮನ್ನು ಪರಿಶಿಷ್ಟ ಪಂಗಡ(ಎಸ್‍ಟಿ)ಕ್ಕೆ ಒಳಪಡಿಸುವಂತೆ ಆಗ್ರಹಿಸುತ್ತಿದೆಯಾದರೆ, ಮಾದಿಗ ಸಮುದಾಯ ಒಳಮೀಸಲಾತಿಗೆ ಆಗ್ರಹಿಸಿ ಚೈತನ್ಯ ಯಾತ್ರೆಗೆ ಮುಂದಾಗಿದೆ. ಪಂಚಮಸಾಲಿ ಸಮುದಾಯ ಪ್ರವರ್ಗ 2 ಮೀಸಲಾತಿಗೆ ಆಗ್ರಹಿಸಿ ಪಾದಯಾತ್ರೆಯನ್ನು ಆರಂಭಿಸಿದೆ, ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ.7.25ಕ್ಕೆ ಹೆಚ್ಚಿಸಬೇಕೆಂದು ಭಗೀರಥಿ ಸಮಾಜ ಆಗ್ರಹಿಸುತ್ತಿದೆ. ಉಪ್ಪಾರ ಜನಾಂಗ ತಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲಾತಿಗೆ ಸೇರಿಸುವಂತೆ ಒತ್ತಾಯಿಸಿದೆಯಾದರೆ, ವೀರಶೈವ ಲಿಂಗಾಯಿತ ಸಮಾಜವು ಒಳಪಂಗಡಗಳ ಮೀಸಲಾತಿಗೆ ಮುಖ್ಯ ಮಂತ್ರಿಗಳಲ್ಲಿ ಮನವಿ ಮಾಡಿದೆಯೆಂದು ಅವರು ತಿಳಿಸಿದರು.
ಈ ಬೆಳವಣಿಗೆಗಳ ನಡುವೆ ಜಿಲ್ಲೆಯಲ್ಲಿರುವ ಸಣ್ಣ ಸಣ್ಣ ಸಮೂಹ ಮೀಸಲಾತಿಯ ಸೌಲಭ್ಯಗಳಿಂದ ವಂಚಿತವಾಗಿದ್ದು, ಅವುಗಳ ಪರವಾಗಿ ಧ್ವನಿ ಎತ್ತುವ ಪ್ರಯತ್ನ, ಆ ಸಮುದಾಯಗಳ ಸಂಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಅಹಿಂದ ಒಕ್ಕೂಟ ಕಾರ್ಯೋನ್ಮುಖವಾಗಲಿದೆಯೆಂದು ಸ್ಪಷ್ಟಪಡಿಸಿದರು.
ತೈಲ ಬೆಲೆ ಹೆಚ್ಚಳಕ್ಕೆ ಆಕ್ರೋಶ- ಅನಿಯಂತ್ರಿತವಾಗಿ ತೈಲ ಬೆಲೆ ಹೆಚ್ಚಳವಾಗುತ್ತಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಟಿ.ಪಿ. ರಮೇಶ್, ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲದ ಬೆಲೆ ಕುಸಿದಿದ್ದರು ಭಾರತದಲ್ಲಿ ದಿನದಿಂದ ದಿನಕ್ಕೆ ತೈಲ ಬೆಲೆ ಗಗನ ಮುಖವಾಗಿ ಸಾಗುತ್ತಲೆ ಇದೆ. ಇದರೊಂದಿಗೆ ಜನಸಾಮಾನ್ಯರ ನಿತ್ಯ ಬಳಕೆಯ ಅಡುಗೆ ಅನಿಲದ ಸಹಾಯ ಧನವನ್ನು ಕೇಂದ್ರ ಕಡಿತಗೊಳಿಸುವ ಮೂಲಕ ಸಂಕಷ್ಟವನ್ನು ಹುಟ್ಟು ಹಾಕಿದೆ. ಈ ಬಗ್ಗೆ ಜನಜಾಗೃತಿ ಮೂಡಿಸುವ ಪ್ರಯತ್ನವೂ ಅಹಿಂದ ಮಾಡಲಿದೆಯೆಂದರು.
ಒಕ್ಕೂಟದ ಅಧ್ಯಕ್ಷರಾದ ಟಿ.ಎನ್.ಮುದ್ದಯ್ಯ ಮಾತನಾಡಿ, ಜಿಲ್ಲೆಯಲ್ಲಿ ಕಳೆದ 31 ವರ್ಷಗಳಿಂದ ಅಹಿಂದ ಒಕ್ಕೂಟ ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿಸಿ, ಪ್ರಸ್ತುತ ಒಕ್ಕೂಟದ ಅನಿವಾರ್ಯತೆ ಇದ್ದು, ಇದನ್ನು ಪುನಶ್ಚೇತನಗೊಳಿಸುವ ಪ್ರಯತ್ನಕ್ಕೆ ಮುಂದಾಗಿರುವುದಾಗಿ ತಿಳಿಸಿದರು.
ಒಕ್ಕೂಟದ ಕಾರ್ಯಾಧ್ಯಕ್ಷ ಕೆ.ಟಿ.ಬೇಬಿ ಮ್ಯಾಥ್ಯು ಮಾತನಾಡಿ, ಜಿಲ್ಲೆಯ ಬೆಳೆಗಾರರ ಸಮಸ್ಯೆ, ತೈಲ ಬೆಲೆ ಏರಿಕೆ, ಬೆಳೆಗಾರರ ಸಮಸ್ಯೆ, ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಸೇರಿದಂತೆ ವಿವಿಧ ಸಮಸ್ಯೆಗಳ ಸ್ಪಂದನಕ್ಕೆ ಒಕ್ಕೂಟದಿಂದ ಕಾರ್ಯಕ್ರಮ ರೂಪಿಸಲಾಗುತ್ತದೆ. ಜಿಲ್ಲೆಯ ಪ್ರತಿ ಗ್ರಾಪಂ, ಹೋಬಳಿ ಮಟ್ಟದಲ್ಲಿ ಅಹಿಂದ ಒಕ್ಕೂಟವನ್ನು ಆರಂಭಿಸಿ ಹಂತ ಹಂತವಾಗಿ ಕಾರ್ಯಕ್ರಮಗಳನ್ನು ರೂಪಿಸಲಾಗುವುದೆಂದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್, ಕಾರ್ಯದರ್ಶಿ ಆರ್.ಪಿ ಚಂದ್ರಶೇಖರ್ ಉಪಸ್ಥಿತರಿದ್ದರು.

error: Content is protected !!