ಫೆ.13 ರಂದು ಕುಶಾಲನಗರದಲ್ಲಿ ‘ಸಮಸ್ತ ಸರ್ಕಾರಿ ನೌಕರರ ಸಮ್ಮಿಲನ’

February 10, 2021

ಮಡಿಕೇರಿ ಫೆ.10 : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮತ್ತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ವತಿಯಿಂದ ಫೆ.13 ರಂದು ‘ಸಮಸ್ತ ಸರ್ಕಾರಿ ನೌಕರರ ಸಮ್ಮಿಲನ’ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಬಿ. ರವಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಶಾಲನಗರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸಮಾವೇಶ ಆಯೋಜಿಸಲಾಗಿದ್ದು, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಕ್ಷರಿ ಮತ್ತು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಅವರು ಪಾಲ್ಗೊಳ್ಳಲಿದ್ದಾರೆ.ಅಲ್ಲದೇ ಉಭಯ ಸಂಘಗಳ ರಾಜ್ಯ ಪದಾಧಿಕಾರಿಗಳು ಆಗಮಿಸಲಿದ್ದು, ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಮಸ್ಯೆಗಳಾದ ಜ್ಯೋತಿ ಸಂಜೀವಿನಿ ಯೋಜನೆ, ವೈದ್ಯಕೀಯ ಬಿಲ್ಲಿನ ಮರುಪಡೆಯುವಿಕೆ, ನೌಕರರ ಬಡ್ತಿಗೆ ಸಂಬಂಧಿಸಿದ ವಿಷಯಗಳು, ಸಿ ಮತ್ತು ಆರ್ ತಿದ್ದುಪಡಿ, ನೌಕರರ ಆರ್ಥಿಕ ಸೌಲಭ್ಯಗಳು, ವರ್ಗಾವಣೆ, ಎನ್.ಪಿ.ಎಸ್. ರದ್ಧತಿ ಸೇರಿದಂತೆ ಸರ್ಕಾರಿ ನೌಕರರ ಸಮಸ್ಯೆಗಳ ಬಗ್ಗೆ ವಿಸ್ತøತ ಚರ್ಚೆಗಳು ನಡೆಸಲಾಗುವುದು ಎಂದರು.
ಅಂದು ಬೆಳಗ್ಗೆ 10.30ಕ್ಕೆ ಕುಶಾಲನಗರ ಕಾವೇರಿ ಮಾತೆಯ ಪ್ರತಿಮೆ ಬಳಿ ಗಣ್ಯರನ್ನು ಸ್ವಾಗತಿಸಿ ಮೆರವಣಿಗೆ ಮೂಲಕ ವೇದಿಕೆಗೆ ಕರೆದೊಯ್ಯಲಾಗುವುದು. ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಎನ್.ಸಿ. ಕುಮಾರ್, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಹೆಚ್.ಎನ್. ಮಂಜುನಾಥ್, ಉಪಾಧ್ಯಕ್ಷೆ ಡಿ.ಕೆ. ರೇಖಾ ಕುಮಾರಿ, ವಿರಾಜಪೇಟೆ ತಾಲ್ಲೂಕು ಅಧ್ಯಕ್ಷ ಇ.ಸುರೇಂದ್ರ, ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ಟಿ.ಕೆ. ಬಸವರಾಜು ಉಪಸ್ಥಿತರಿದ್ದರು.

error: Content is protected !!