ಸೋಮವಾರಪೇಟೆ ತಾ.ಪಂ. ಪ್ರಗತಿ ಪರಿಶೀಲನಾ ಸಭೆ : ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಲು ಸೂಚನೆ

February 10, 2021

ಸೋಮವಾರಪೇಟೆ: ಬಹುತೇಕ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ಸಾರ್ವಜನಿಕರ ದೂರವಾಣಿ ಕರೆಯನ್ನು ಸ್ವೀಕರಿಸುವುದಿಲ್ಲ. ಯಾವುದೇ ಸಮಸ್ಯೆಗಳನ್ನು ಪಂಚಾಯಿತಿ ಮಟ್ಟದಲ್ಲಿ ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ಹೆಚ್ಚಿನ ದಿನಗಳಲ್ಲಿ ಕಚೇರಿಯಲ್ಲಿ ಇರುವುದಿಲ್ಲ. ಕಚೇರಿಯಲ್ಲಿ ವಿಚಾರಿಸಿದರೆ, ಅಧಿಕಾರಿಗಳ ಸಭೆಗೆ ಹೋಗಿದ್ದಾರೆ ಎಂದು ಹೇಳುತ್ತಾರೆ. ಈ ಬಗ್ಗೆ ಕ್ರಮಗೈಗೊಳ್ಳಬೇಕೆಂದು ಕಾರ್ಯ ನಿರ್ವಾಹಣಾಧಿಕಾರಿ ಜಯಣ್ಣ ಅವರಿಗೆ ಉಪಾಧ್ಯಕ್ಷರು ಸೂಚಿಸಿದರು.
ತಾ.ಪಂ. ಸಭಾಂಗಣದಲ್ಲಿ ಮಂಗಳವಾರ ತಾಪಂ ಅಧ್ಯಕ್ಷೆ ಪುಷ್ಪರಾಜೇಶ್ ಅಧ್ಯಕ್ಷತೆಯಲ್ಲಿ ನಡೆದ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಪಟ್ಟಣದ ಕೆಲವು ವರ್ತಕರು ಹಾಗೂ ಮೀನುಮಾಂಸ ಮಾರುಕಟ್ಟೆ ವ್ಯಾಪರಸ್ಥರು ತ್ಯಾಜ್ಯಗಳನ್ನು ನೇರವಾಗಿ ಕಕ್ಕೆಹೊಳೆಗೆ ಸುರಿಯುತ್ತಿರುವುದರಿಂದ ನೀರು ಮಲೀನಗೊಂಡಿದ್ದು, ಇದರ ಬಗ್ಗೆ ಬಗ್ಗೆ ಸಂಬಂಧಿಸಿದ ಗ್ರಾ.ಪಂ ಮತ್ತು ಪಟ್ಟಣ ಪಂಚಾಯಿತಿಗೆ ಮಾಹಿತಿ ನೀಡಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ಈ ಭಾಗದಲ್ಲಿ ಸಿ.ಸಿ.ಕ್ಯಾಮೆರಾ ಮತ್ತು ಎಚ್ಚರಿಕೆ ಸೂಚನ ಫಲಕಗಳನ್ನು ಅಳವಡಿಸಬೇಕೆಂದು ಅಭಿಮನ್ಯುಕುಮಾರ್ ಹೇಳಿದರು.
ಪಟ್ಟಣ ಪಂಚಾಯಿತಿ ಮತ್ತು ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರಿ, ಆಡು ಮಾಂಸದ ಅಂಗಡಿಗಳಲ್ಲಿ ಗುಣಮಟ್ಟ ಖಾತ್ರಿಪಡಿಸುವ ಯಾವುದೇ ಸೌಲಭ್ಯಗಳಿಲ್ಲ ಎಂದು ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ.ಅಭಿಮನ್ಯುಕುಮಾರ್ ಆರೋಪಿಸಿದರು.
ಈ ಮಾಂಸದಂಗಡಿಗಳಲ್ಲಿ ವಯಾಸ್ಸಾದ ಮತ್ತು ರೋಗಪೀಡಿತ ಕುರಿಗಳನ್ನು ಮಾಂಸಮಾಡಿ ಮಾರಾಟ ಮಾಡಲಾಗುತ್ತಿದೆ ಎಂಬ ನಿರಂತರವಾಗಿ ದೂರು ಬರುತ್ತಿವೆ. ಪಶುವೈದ್ಯ ಇಲಾಖೆ ವೈದ್ಯರು ಮತ್ತು ಪ.ಪಂನ ಅರೋಗ್ಯಾಧಿಕಾರಿ ಸಮ್ಮುಖದಲ್ಲಿ ಪ್ರತಿದಿನ ಪರೀಕ್ಷಿಸಿ, ಮುದ್ರೆ ಒತ್ತಿದ ನಂತರ ಮಾರಬೇಕೆಂಬ ನಿಯಮವಿದ್ದರೂ, ಕಳೆದ ಮೂರು ವರ್ಷಗಳಿಂದ ನಿಯಮ ಜಾರಿಯಲ್ಲಿ ಇಲ್ಲ ಎಂದು ಅಭಿಮನ್ಯುಕುಮಾರ್ ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ವಿ. ಬಾದಾಮಿ, ಇದಕ್ಕೆ ಬಳಸುವ ಮುದ್ರೆ ಎಲ್ಲಿ ಇದೇ ಎಂದು ನನಗೆ ಗೊತ್ತಿಲ್ಲ. ಕಚೇರಿಯಲ್ಲೂ ಇಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಈ ಜವಾಬ್ದಾರಿಯನ್ನು ವೈದ್ಯರೊಬ್ಬರಿಗೆ ನೀಡಲಾಗಿದೆ. ಅವರಿಂದ ಮಾಹಿತಿ ಪಡೆದು ತಿಳಿಸುತ್ತೇನೆ ಎಂದು ಹೇಳಿದರು.
ಪಟ್ಟಣ ಪಂಚಾಯಿತಿ ಮತ್ತು ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಸಾರ್ವಜನಿಕ ಸ್ಮಶಾನ ಹಾಗು ಕಸವಿಲೇವಾರಿ ಜಾಗದ ಸಮಸ್ಯೆ ತಲೆದೋರಿದ್ದು ಶೀಘ್ರದಲ್ಲಿ ಇದನ್ನು ಪರಿಹರಿಸಿಕೊಳ್ಳಬೇಕೆಂದು ಸಂಬಂಧಿಸಿದ ಅಧಿಕಾರಿಗಳು ಅಧ್ಯಕ್ಷರು ಸೂಚಿಸಿದರು.
ಉದ್ಯೋಗಖಾತ್ರಿ ಯೋಜನೆಯಡಿ ಇಂಗುಗುಂಡಿ ಮತ್ತು ಕೃಷಿಹೊಂಡಗಳು ಸೌಲಭ್ಯದ ಬಗ್ಗೆ ಹಲವಾರು ರೈತರಿಗೆ ಮಾಹಿತಿ ಇಲ್ಲ. ಇದರ ಬಗ್ಗೆ ಮುಂದಿನ ದಿನಗಳಲ್ಲಿ ಸರಿಯಾದ ವಿವರಣೆ ನೀಡಬೇಕೆಂದು ಕೃಷಿ ಇಲಾಖೆಯ ಅಧಿಕಾರಿಗೆ ಸೂಚಿಸಲಾಯಿತು.
ಸೋಮವಾರಪೇಟೆ ವಲಯಾರಣ್ಯ ಕಚೇರಿಯಿಂದ ಅನುಪಾಲನ ವರದಿ ಸಭೆಗೆ ಬಂದಿಲ್ಲ. ಅಧಿಕಾರಿಗಳು ಗೈರುಹಾಜರಾಗಿ ಸಿಬ್ಬಂದಿಗಳನ್ನು ಕಳುಹಿಸಿದ್ದಾರೆ. ಕಾರಣ ಕೇಳಿ ನೋಟಿಸ್ ನೀಡುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ವಿವಿಧ ಇಲಾಖಾಧಿಕಾರಿಗಳು ಮಾಹಿತಿ ನೀಡಿದರು.


error: Content is protected !!