ಸುಂಟಿಕೊಪ್ಪ ಗ್ರಾ.ಪಂ ಅಧ್ಯಕ್ಷರಾಗಿ ಶಿವಮ್ಮ , ಉಪಾಧ್ಯಕ್ಷರಾಗಿ ಪ್ರಸಾದ್ ಕುಟ್ಟಪ್ಪ ಆಯ್ಕೆ

February 10, 2021

ಸುಂಟಿಕೊಪ್ಪ,ಫೆ.10: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಶಿವಮ್ಮ ಮಹೇಶ್, ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಪ್ರಸಾದ್ ಕುಟ್ಟಪ್ಪ ಆಯ್ಕೆಯಾಗಿದ್ದಾರೆ.
ಗ್ರಾಮ ಪಂಚಾಯಿತಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಶಿವಮ್ಮ ಹಾಗೂ ಬಿಜೆಪಿ ಬೆಂಬಲಿತರಾದ ವಸಂತಿ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಜೆಡಿಎಸ್ ಬೆಂಬಲಿತ ಪ್ರಸಾದ್ ಕುಟ್ಟಪ್ಪ, ಜೆಡಿಎಸ್ ಬೆಂಬಲಿತರಾದ ಜಿನಾಸುದ್ದೀನ್ ಬಿಜೆಪಿ ಬೆಂಬಲಿತ ಬಿ.ಎಂ.ಸುರೇಶ್ ಪುಟ್ಟ ನಾಮಪತ್ರ ಸಲ್ಲಿಸಿದ್ದರು.
ನಾಮಪತ್ರ ಹಿಂಪಡೆಯುವ ಸಂದರ್ಭದಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತರಾದ ಜಿನಾಸುದ್ದೀನ್ ನಾಮಪತ್ರ ವಾಪಾಸ್ಸು ಪಡೆದುಕೊಂಡರು.
ಚುನಾವಣಾಧಿಕಾರಿ ನಿಗಧಿತ ಸಮಯಕ್ಕೆ ಚುನಾವಣಾ ಪ್ರಕ್ರಿಯೆ ಆರಂಭಿಸಿದರು. ಚುನಾವಣಾ ಆಯೋಗದ ನೀತಿ ಸಂಹಿತೆ ಆನ್ವಯ ಗುಪ್ತ ಮತದಾನ ನಡೆಯಿತು. 20 ಸದಸ್ಯರ ಬಲವಿರುವ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಶಿವಮ್ಮ ಮಹೇಶ್ 12 ಮತಗಳು ಪ್ರತಿಸ್ಪರ್ಧಿ ವಸಂತಿಯವರಿಗೆ 8 ಮತಗಳು ಲಭಿಸಿದವು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪ್ರಸಾದ್ ಕುಟ್ಟಪ್ಪ ಅವರಿಗೆ 12 ಮತಗಳು ದೊರೆತಿದ್ದು, ಪ್ರತಿ ಸ್ಪರ್ಧಿ ಬಿ.ಎಂ.ಸುರೇಶ್ ಅವರಿಗೆ 8 ಮತಗಳು ಲಭ್ಯವಾದವು.
ಚುನಾವಣಾಧಿಕಾರಿಗಳು ಅಧ್ಯಕ್ಷರಾಗಿ ಶಿವಮ್ಮ ಉಪಾಧ್ಯಕ್ಷರಾಗಿ ಪ್ರಸಾದ್ ಕುಟ್ಟಪ್ಪ ಅವರನ್ನು ಅಧಿಕೃತವಾಗಿ ಘೋಷಿಸಿದರು.
ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳಿಗೆ ಜಿ.ಪಂ.ಸದಸ್ಯರುಗಳಾದ ಕೆ.ಪಿ.ಚಂದ್ರಕಲಾ, ಪಿ.ಎಂ.ಲತೀಫ್ ಜೆಡಿಎಸ್ ಅಲ್ಪಸಂಖ್ಯಾತ ಜಿಲ್ಲಾಘಟಕದ ಅಧ್ಯಕ್ಷ ಇಸಾಕ್‍ಖಾನ್, ಎಸ್‍ಡಿಪಿಐನ ಲತೀಫ್, ಉಸ್ಮಾನ್, ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಎಂ.ಎ.ಉಸ್ಮಾನ್, ನಗರಾಧ್ಯಕ್ಷ ಕೆ.ಐ.ರಫೀಕ್, ಮತ್ತಿತರರು ಶುಭ ಹಾರೈಸಿದರು.
ಎಸ್‍ಡಿಪಿಐನ ನಿಗೂಢ ನಡೆ: ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಎಸ್‍ಡಿಪಿಐ ಬೆಂಬಲಿತ ಅಭ್ಯರ್ಥಿಯಾಗಿ 4 ಮಂದಿ ಆಯ್ಕೆಯಾಗಿದ್ದು, ಕಳೆದ ಅವಧಿಯಲ್ಲಿ 2 ಮಂದಿ ಚುನಾಯಿತರಾಗಿದ್ದರು. ಕಳೆದ ಬಾರಿ ಕಾಂಗ್ರೆಸ್‍ಗೆ ಬೆಂಬಲ ನೀಡಿ ನಾವು ಕೈ ಸುಟ್ಟುಕೊಂಡಿದ್ದೇವೆ ಈ ಬಾರಿ ಯಾವುದೇ ಪಕ್ಷಕ್ಕೂ ಬೆಂಬಲ ನೀಡುವುದಿಲ್ಲ. ವಿರೋಧ ಪಕ್ಷದಲ್ಲೇ ನಾವು ಕಾರ್ಯನಿರ್ವಹಿಸುತ್ತೇವೆ ಎಂದು ಚುನಾವಣೆಯ ಮುನ್ನ ದಿನದವರೆಗೂ ಘಂಟಘೋಷವಾಗಿ ಹೇಳಿದರು. ಆದರೆ ತಾ.10 ರಂದು ಚುನಾವಣಾ ಕಣದಲ್ಲಿ ಮನೆಯ ಹಿತಶತ್ರುಕ್ಕಿಂತ ಹೊರಗಿನ ಹಿತಶತ್ರುಗಳೆ ಎಂದು ಭಾವಿಸಿ ಕಾಂಗ್ರೆಸ್‍ಗೆ ಬೆಂಬಲ ನೀಡಿದರು.
ಬಿಜೆಪಿಗೆ ಆರಿಯದ ರಣತಂತ್ರ: ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ 6, ಕಾಂಗ್ರೆಸ್ 4,ಎಸ್ ಡಿಪಿಐ 4, ಜೆಡಿಎಸ್ 2, ಪಕ್ಷೇತರ 4 ಸ್ಥಾನಗಳನ್ನು ಪಡೆದುಕೊಂಡಿದ್ದರು. ವನಿತಾ ಮತ್ತು ಪ್ರಸಾದ್ ಕುಟ್ಟಪ್ಪ ಜೆಡಿಎಸ್ ಸೇರ್ಪಡೆಗೊಂಡರು.
6 ಸ್ಥಾನ ಹೊಂದಿದ ಬಿಜೆಪಿ ಶತಾಯಗತಾಯ ಶ್ರಮಿಸಿದ್ದರು. ಹಲವು ಸದಸ್ಯರುಗಳ ಸಂಪರ್ಕವನ್ನು ಹೊಂದಿದರು. ಆದರೆ ಕಾಂಗ್ರೆಸ್ ಎಸ್‍ಡಿಪಿಐ ಅವರ ರಾಜಕೀಯ ತಂತ್ರಗಾರಿಕೆ ಆರಿಯದೆ ಅಧಿಕಾರವನ್ನು ಕಳೆದುಕೊಂಡಿದ್ದಾರೆ.

error: Content is protected !!