ಫೆ. 12 ರಂದು ಕಲ್ಲುಬಾಣೆಯಲ್ಲಿ ಕೆಪಿಎಲ್ ಸೌಹಾರ್ದ ಕ್ರೀಡಾಕೂಟಕ್ಕೆ ಚಾಲನೆ

February 10, 2021

ವಿರಾಜಪೇಟೆ;ಫೆ.10: ಕಲ್ಲುಬಾಣೆ ಯೂತ್ ಅಸೋಸಿಯೇಷನ್ ವತಿಯಿಂದ 7ನೇ ವರ್ಷದ ಕೆಪಿಎಲ್ ಸೌಹಾರ್ದ ಕ್ರೀಡಾಕೂಟಕ್ಕೆ ಫೆ. 12 ರಂದು ಚಾಲನೆ ದೊರೆಯಲಿದೆ ಎಂದು ಕ್ರೀಡಾ ಕೂಟದ ಆಯೋಜಕರು ತಿಳಿಸಿದ್ದಾರೆ.
ಕಲ್ಲುಬಾಣೆಯ ಚಂದಪಂಡ ಕಿರಣ್ ಅವರ ಬಾಣೆಯಲ್ಲಿ ಫೆ.12, 13, 14 ರಂದು ನಡೆಯಲಿರುವ ಫುಟ್‍ಬಾಲ್ ಮತ್ತು ಕ್ರಿಕೆಟ್ ಪಂದ್ಯಾವಳಿಗೆ ಫೆ. 12 ರಂದು ಚಾಲನೆ ದೊರೆಯಲಿದ್ದು, ಅಪರಾಹ್ನ 2 ಗಂಟೆಗೆ ಅತಿಥಿಗಣ್ಯರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
6-10ವರ್ಷದೊಳಗಿನ ಮಕ್ಕಳಿಗೆ ಓಟದ ಸ್ಪರ್ಧೆ, 10 ರಿಂದ 15ವರ್ಷದೊಳಗಿನ ಮಕ್ಕಳಿಗೆ ಕಾಲ್ಚೆಂಡು ಪಂದ್ಯಾಟ ಏರ್ಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸ್ಥಳೀಯ ಸಾಧಕರಿಗೆ ಸನ್ಮಾನ, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದವರಿಗೆ ಅಭಿನಂದನಾ ಕಾರ್ಯಕ್ರಮ ಮತ್ತು ಕಳೆದ ಬಾರಿ 10ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಕಲ್ಲುಬಾಣೆಯೂತ್ ಅಸೋಶಿಯೇಷನ್ ವತಿಯಿಂದ ಕಳೆದ ಹಲವಾರು ವರ್ಷಗಳಿಂದ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗ್ರಾಮದ ಬಡ ನಿರ್ಗತಿಕ ರೋಗಿಗಳಿಗೆ ಚಿಕಿತ್ಸಾ ನೆರವು ನೀಡುವುದು, ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ಹಾಗೂ ಕಲಿಕಾ ಸಾಮಾಗ್ರಿಗಳ ವಿತರಣೆ, ಗ್ರಾಮದ ನೈರ್ಮಲ್ಯ, ಸ್ವಚ್ಚತೆಯನ್ನು ಕಾಪಾಡುವುದು, ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸುವುದು ಮುಂತಾದ ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದೆ.
ಕ್ರೀಡಾಕೂಟದ ಮೂಲಕ ಗ್ರಾಮೀಣ ಯುವ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು, ಹಾಗೂ ಗ್ರಾಮದ ಜನತೆಯಲ್ಲಿ ಕೋಮು ಸೌಹಾರ್ದತೆ ಕಾಪಾಡುವುದು ಈ ಕ್ರೀಡಾಕೂಟದ ಮುಖ್ಯ ಉದ್ದೇಶವಾಗಿದೆ ಎಂದು ಯೂತ್ ಅಸೋಶಿಯೇಷನ್ ಆಡಳಿತ ಮಂಡಳಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

error: Content is protected !!