ಕಾಡುಕೋಣದ ಮಾಂಸ ಮಾರಾಟ : ಕೊಳಕೇರಿಯಲ್ಲಿ ಓರ್ವನ ಬಂಧನ : ಮೂವರು ಪರಾರಿ

February 10, 2021

ಮಡಿಕೇರಿ ಫೆ.10 : ನಾಪೋಕ್ಲುವಿನಲ್ಲಿ ಕಾಡು ಕೋಣದ ಮಾಂಸವನ್ನು ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಜಿಲ್ಲಾ ಅಪರಾಧ ಪತ್ತೆ ದಳದ ಸಿಬ್ಬಂದಿಗಳು 22 ಕೆ.ಜಿ ಕಾಡುಕೋಣ ಮಾಂಸ ಸಹಿತ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೂವರು ಪ್ರಮುಖ ಆರೋಪಿಗಳು ದಾಳಿಯ ಸಂದರ್ಭ ಪರಾರಿಯಾಗಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ.
ನಾಪೋಕ್ಲು ಕೊಳಕೇರಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಾಡು ಪ್ರಾಣಿಗಳ ಮಾಂಸವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಜಿಲ್ಲಾ ಅಪರಾಧ ಪತ್ತೆ ದಳಕ್ಕೆ ಖಚಿತ ಮಾಹಿತಿ ಲಭಿಸಿತ್ತು. ಅದರಂತೆ ಬುಧವಾರ ಕೊಳಕೇರಿ ಗ್ರಾಮದ ಅಶ್ರಫ್ ಎಂಬಾತನ ಮನೆಯ ಮೇಲೆ ಧಾಳಿ ನಡೆಸಿದ ಸಂದರ್ಭ 22 ಕೆ.ಜಿ 600 ಗ್ರಾಂ ಕಾಡು ಕೋಣದ ಮಾಂಸ ಪತ್ತೆಯಾಗಿತ್ತು. ಮಾಲು ಸಹಿತ ಆರೋಪಿ ಅಶ್ರಫ್‍ನನ್ನು ಪೊಲೀಸರು ವಶಕ್ಕೆ ಪಡೆದರು.
ಈ ಸಂದರ್ಭ ಪ್ರಕರಣದ ಪ್ರಮುಖ ಆರೋಪಿಗಳಾದ ಕೊಳಕೇರಿಯ ಅಬ್ದುಲ್ಲಾ, ಯಾಕುಬ್ ಮತ್ತು ಮೊಹಮದ್ ಅಲಿಯಾಸ್ ಮಮ್ಮು ಎಂಬವರು ಪರಾರಿಯಾಗಿದ್ದಾರೆ. ತಲೆ ಮರೆಸಿಕೊಂಡ ಆರೋಪಿಗಳ ಪತ್ತೆಗಾಗಿ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕ್ಷಮಾ ಮಿಶ್ರ ಮಾರ್ಗದರ್ಶನದಲ್ಲಿ ಅಪರಾಧ ಪತ್ತೆ ದಳದ ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ, ಎಎಸ್‍ಐ ಹಮೀದ್ ಸಿಬ್ಬಂದಿಗಳಾದ ಯೋಗೇಶ್ ಕುಮಾರ್, ನಿರಂಜನ್, ವಸಂತ್, ಶರತ್ ರೈ, ವೆಂಕಟೇಶ್, ಸುರೇಶ್ ಮತ್ತು ಶಶಿ ಕುಮಾರ್ ಅವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!