ಗಣರಾಜ್ಯೋತ್ಸವ ಸ್ತಬ್ಧಚಿತ್ರ ನಿರ್ಮಾಣದ ಹಿಂದಿನ ಕಥೆ

February 11, 2021

ಸಂಸದೀಯ ವ್ಯವಸ್ಥೆಯನ್ನು ಹೊಂದಿರುವ ನಮ್ಮ ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ ಹಾಗೂ ಪ್ರಜಾಸತ್ತಾತ್ಮಕ ಗಣರಾಜ್ಯ ಎಂದೇ ಬಣ್ಣಿಸುತ್ತಾರೆ.
ಸಂವಿಧಾನ ಶಿಲ್ಪಿ ಡಾ// ಬಿ.ಆರ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚಿತವಾದ ಭಾರತದ ಸಂವಿಧಾನವು ಅಂಗೀಕೃತವಾದದ್ದು, ನವೆಂಬರ್ 26, 1949. ಆದರೆ, ನಮ್ಮ ಸಂವಿಧಾನವು ಅನುಷ್ಠಾನಕ್ಕೆ ಬಂದದ್ದು ಜನವರಿ 26,1950. ಅದಕ್ಕೆ, ಆ ದಿನವನ್ನು ನಾವು ಗಣರಾಜ್ಯೋತ್ಸವ ದಿನಾಚರಣೆ ಎಂದು ಕರೆಯುತ್ತೇವೆ. ದೇಶದಲ್ಲೆಡೆ ಗಣರಾಜ್ಯೋತ್ಸವವನ್ನು ಆಚರಿಸಿ ಹೆಮ್ಮೆ ಪಡುತ್ತೇವೆ.
ಗಣರಾಜ್ಯೋತ್ಸವ ಎಂದರೆ ಭಾರತದ ಜನತೆಗೆ ಸಡಗರವೋ ಸಡಗರ. ಸಂಭ್ರಮವೋ ಸಂಭ್ರಮ. ಹೌದು, ಪ್ರತಿವರ್ಷ ಗಣರಾಜ್ಯೋತ್ಸವದ ದಿನದಂದು ನವದೆಹಲಿಯ ರಾಜಪಥ್‍ನಲ್ಲಿ ಸ್ತಬ್ಧಚಿತ್ರಗಳ ಮೆರವಣಿಗೆ ಅತ್ಯಂತ ಆಕರ್ಷಣೀಯ ಮಾತ್ರವಲ್ಲದೆ, ವಿದ್ಯುನ್ಮಾನ ವಾಹಿನಿಗಳ ಮೂಲಕ ಇಡೀ ಭಾರತ ಮಾತ್ರವಲ್ಲದೆ, ವಿಶ್ವದ ಮೂಲೆಮೂಲೆಗಳಲ್ಲೂ ಕೋಟ್ಯಾಂತರ ಜನರು ಸ್ತಬ್ಧಚಿತ್ರಗಳ ಮೆರವಣಿಗೆಯನ್ನು ಕಣ್ತುಂಬಿಕೊಳ್ಳುತ್ತಾರೆ.

ಸ್ತಬ್ಧ ಚಿತ್ರದ ವಿಷಯ-ವಸ್ತುವನ್ನು ಇಡೀ ದೇಶವೇ ಗಮನಿಸುವುದರಿಂದ ಆ ವಿಷಯ-ವಸ್ತುವಿಗೆ ಸಹಜವಾಗಿ ಪ್ರಾಮುಖ್ಯತೆ ದೊರೆಯುತ್ತದೆ. ಒಂದು ವಸ್ತು ಅಥವಾ ವಿಷಯಕ್ಕೆ ಸಂಬಂಧಿಸಿದಂತೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವಲ್ಲಿ ಸಫಲತೆ ಕಾಣುವ ಸ್ತಬ್ಧಚಿತ್ರವು ಪ್ರಾವಸಿಗರನ್ನು ಆಕರ್ಷಿಸಿ ರಾಜ್ಯ ಪ್ರವಾಸೋದ್ಯಮಕ್ಕೆ ಪುಷ್ಠಿ ನೀಡುತ್ತದೆ ಎಂಬ ಅಂಶ ಸಾಬೀತಾಗಿದೆ. ಈ ಕಾರಣದಿಂದ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಪಾಲ್ಗೊಳ್ಳುವುದು ರಾಜ್ಯ ಸರ್ಕಾರಗಳಿಗೆ ಪ್ರತಿಷ್ಠೆಯ ಪ್ರತೀಕವಾಗಿದೆ.
ಗಣರಾಜ್ಯೋತ್ಸವದ ಸಂದರ್ಭದಲ್ಲಿ ನವದೆಹಲಿಯ ರಾಜಪಥದಲ್ಲಿ ಕೆಲವೇ ನಿಮಿಷಗಳು ರಾರಾಜಿಸುವ ಸ್ತಬ್ಧಚಿತ್ರಗಳ ನಿರ್ಮಾಣದ ಹಿಂದಿನ ಕಥೆಯ ಅನಾವರಣಗೊಳಿಸುವ ಸಣ್ಣ ಪ್ರಯತ್ನವೇ ಈ ಲೇಖನ.
ಆಮಂತ್ರಣ ಎಲ್ಲರಿಗೆ-ಆಯ್ಕೆ ಕೆಲವರಿಗೆ : ಭಾರತದಲ್ಲಿನ ಎಲ್ಲಾ 28 ರಾಜ್ಯಗಳೂ ಹಾಗೂ ಎಂಉ ಕೇಂದ್ರಾಡಳಿತ ಪ್ರದೇಶಗಳಿಗೂ ಗಣರಾಜ್ಯೋತ್ಸವ ದಿನಾಚರಣೆಯ ಸುಸಂದರ್ಭದಲ್ಲಿ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಭಾರತ ಸರ್ಕಾರದ ರಕ್ಷಣಾ ಮಂತ್ರಾಲಯವು ಆಮಂತ್ರಣವನ್ನು ನೀಡುತ್ತದೆಯಾದರೂ, ಐತಿಹಾಸಿಕ ಅಥವಾ ಸಮಕಾಲೀನ ವಿಷಯದ ಮಹತ್ವಮ, ಒಂದು ರಾಜ್ಯದ ಅಥವಾ ಒಂದು ರಾಜ್ಯದಲ್ಲಿನ ಒಂದು ಪ್ರದೇಶದ ಕಲೆ ಮತ್ತು ಸಂಸ್ಕøತಿ ಬಿಂಬಿಸುವ ವಸ್ತು, ಸಂಗೀತ ಮಾಧುರ್ಯದ ಪ್ರಸ್ತುತಿಯನ್ನು ಆಧರಿಸಿ ಕೇವಲ 15 ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ ಸ್ತಬ್ಧಚಿತ್ರಗಳನ್ನು ಆಯ್ಕೆ ಮಾಡುತ್ತದೆ.

ಸ್ತಬ್ಧಚಿತ್ರ ವಿಷಯ ಆಯ್ಕೆ ಹೇಗೆ ? : ಪ್ರತಿ ವರ್ಷ ಆಗಸ್ಟ್ ಮೊದಲ ವಾರದಲ್ಲಿ ಗಣರಾಜ್ಯೋತ್ಸವ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಭಾರತ ಸರ್ಕಾರವು ಎಲ್ಲಾ ರಾಜ್ಯ ಸರ್ಕಾರಗಳಿಗೂ ಆಮಂತ್ರಣವನ್ನು ನೀಡುತ್ತದೆ. ಬಹುತೇಕ ರಾಜ್ಯಗಳಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕೆಲವು ಸ್ತಬ್ಧಚಿತ್ರ ನಿರ್ಮಾಣ ಕಾರ್ಯದಲ್ಲಿ ಅಣಿಯಾಗುತ್ತವೆ.
ಆಯಾ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಸಂಸ್ಕøತಿ ಇಲಾಖೆ, ಕಲಾ ಶಾಲೆಯ ಮುಖ್ಯಸ್ಥರು ಹಾಗೂ ಪ್ರತಿಷ್ಠಿತ ಕಲಾವಿದರೋರ್ವರನ್ನು ಒಳಗೊಂಡ ವಿಷಯ ವಸ್ತುಗಳನ್ನು ಆಯ್ಕೆ ಮಾಡಿ, ಆಗಸ್ಟ್ ಮಾಸಾಂತ್ಯದೊಳಗೆ ರಕ್ಷಣಾ ಮಂತ್ರಾಲಯಕ್ಕೆ ಕಳುಗಿಸುತ್ತದೆ.
ಸಾಮಾನ್ಯವಾಗಿ ಸೆಪ್ಟೆಂಬರ್ ತಿಂಗಳ ಕೊನೆಯ ವಾರದಲ್ಲಿ ಅಥವಾ ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ರಕ್ಷಣಾ ಮಂತ್ರಾಲಯದಲ್ಲಿ ಆಯ್ಕೆ ಪ್ರಕ್ರಿಯೆ ಪ್ರಾರಂಭವಾಗುತ್ತದೆ.
ಸಂಗೀತ, ನೃತ್ಯ ಮತ್ತು ನಾಟಕ ಒಳಗೊಂಡಂತೆ ಕಲೆ ಮತ್ತು ಸಂಸ್ಕøತಿ ಅರಿತಿರುವ, ಭೌಗೋಳಿಕ ಇತಿಹಾಸ ಮತ್ತು ಪರಂಪರೆಯ ಹಿನ್ನೆಲೆಯನ್ನು ಸಂಪೂರ್ಣವಾಗಿ ಬಲ್ಲ, ಸೇನಾ ಶಿಸ್ತು ಮತ್ತು ಶಿಷ್ಠಾಚಾರ, ಭದ್ರತೆ ಮತ್ತು ರಕ್ಷಣೆಯ ವಿಚಾರವನ್ನು ಸಮಗ್ರವಾಗಿ ತಿಳಿದಿರುವ ವಿಷಯ ತಜ್ಞರನ್ನು ಒಳಗೊಂಡ ಆಯ್ಕೆ ಸಮಿತಿಯು ರಾಜ್ಯ ಸರ್ಕಾರಗಳಿಂದ ಸ್ವೀಕೃತವಾಗುವ ಎಲ್ಲಾ ವಸ್ತು ವಿಷಯಗಳನ್ನು ಆಯಾ ಕಲಾ ನಿರ್ದೇಶಕರ ಸಮ್ಮುಖದಲ್ಲಿಯೇ ವಿಶ್ಲೇಷಿಸಿ ವಿಮರ್ಶಿಸುತ್ತದೆ. ಆ ವರ್ಷದ ಗಣರಾಜ್ಯೋತ್ಸವಕ್ಕೆ ಸೂಕ್ತವಾದ ವಸ್ತು ವಿಷಯದ ಆಯ್ಕೆ ಮಾಡುತ್ತದೆ.

ವಿನ್ಯಾಸ ಮೊದಲು : ಇಲ್ಲಿಂದ ಆಯ್ಕೆ ಪ್ರಕ್ರಿಯೆ ಗಂಭೀರ ಸ್ವರೂಪ ಪಡೆಯುತ್ತದೆ. ವಸ್ತು ವಿಷಯಕ್ಕೆ ಅನುಗುಣವಾಗಿ ಮೊದಲ ವಿನ್ಯಾಸವನ್ನು ರೂಪಿಸಿ ಸಲ್ಲಿಸಲು ಸಮಿತಿಯು ಸೂಚಿಸುತ್ತದೆ. ವಿನ್ಯಾಸವು ಸೂಕ್ತವಾಗಿ ಕಾಣದಿದ್ದಲ್ಲಿ ತಜ್ಞರ ಸಮಿತಿಯು ರಾಜ್ಯಗಳಿಗೆ ಮತ್ತೊಂದು ಅವಕಾಶ ನೀಡುತ್ತದೆ. ಆಗಲೂ ವಿನ್ಯಾಸದಲ್ಲಿ ಸುಧಾರಣೆ ಕಂಡುಬಾರದಿದ್ದಲ್ಲಿ ಆ ರಾಜ್ಯದ ಅವಕಾಶ ಅಲ್ಲೇ ಕೈ ತಪ್ಪಿಹೋಗುತ್ತದೆ.

ಕೀಲಿ ಮಾದರಿ ಮತ್ತು ಸಂಗೀತ : ವಿನ್ಯಾಸದಲ್ಲಿ ವಿಜಯಿಯಾದ ರಾಜ್ಯಗಳು ನಂತರ ಕೀಲಿ ಮಾದರಿ (ಕಿ ಮಾಡೆಲ್) ಸಿದ್ಧಪಡಿಸಿ ಸಮಿತಿಯ ಮುಂದೆ ಹಾಜರು ಪಡಿಸಬೇಕಾಗುತ್ತದೆ. ಕೀಲಿ ಮಾದರಿಯಲ್ಲಿ ಆಯ್ಕೆಯಾದ ಸ್ತಬ್ಧಚಿತ್ರವು ಮೂಲ ವಿನ್ಯಾಸವನ್ನು ಹೋಲುತ್ತದೆಯೇ ? ಎಂಬ ಅಂಶವನ್ನು ಮೊದಲು ಸಮಿತಿಯು ಪರಿಶೀಲಿಸುತ್ತದೆ.
ಕೀಲಿ ಮಾದರಿ ತೃಪ್ತಿಕರವಾಗಿದ್ದರೆ ಸ್ತಬ್ಧಚಿತ್ರವು ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗುತ್ತದೆ. ಇಲ್ಲವಾದಲ್ಲಿ, ಆಯ್ಕೆ ಪ್ರಕ್ರಿಯೆಯಿಂದ ಹೊರಬೀಳುತ್ತದೆ.
ಕೀಲಿ ಮಾದರಿಯು ಆಯ್ಕೆಗೋಂಡ ಕೂಡಲೇ ವಸ್ತು ವಿಷಯಕ್ಕೆ ಹೊಂದುವ 65 ಸೆಕೆಂಡುಗಳಿಗೆ ಸೀಮಿತಗೊಂಡ ಸಂಗೀತವನ್ನು ರಾಜ್ಯಗಳು ಪ್ರಸ್ತುತ ಪಡಿಸಬೇಕಾಗುತ್ತದೆ. ಈ ಹಂತದಲ್ಲಿ ಸಂಗೀತ ಸಂಯೋಜಕ ಪಾತ್ರ ಮಹತ್ವ ಪಡೆದುಕೊಳ್ಳುತ್ತದೆ. ಗಣ್ಯಾತಿಗಣ್ಯರ ಮುಂದೆ ಸಾದರಪಡಿಸುವ ಸಂಗೀರವು ಕೇಳುಗರಿಗೆ ಇಂಪನ್ನೀಯಬೇಕು ಹಾಗೂ ಚಪ್ಪಾಳೆ ಗಳಿಸಲು ಮುದ ನೀಡುವಂತೆ ಇರಬೇಕು ಎಂಬುದು ಸಮಿತಿಯ ಸದಾಶಯವಾಗಿದೆ.

ಸೂಚನೆ – ಮಾರ್ಗದರ್ಶನ : ಕೀಲಿ ಮಾದರಿಯಲ್ಲಿ ಆಯ್ಕೆಗೊಂಡ ಸ್ತಬ್ಧಚಿತ್ರಗಳನ್ನು ನೈಸರ್ಗಿಕವಾಗಿ ಮನಮೋಹಕವಾಗಿ ರೂಪಿಸುವುದು ಹೇಗೆ ? ಎಂಬ ಬಗ್ಗೆ ರಾಜ್ಯದ ಅಧಿಕಾರಿಗಳ ಸಮ್ಮುಖದಲ್ಲಿ ಕಲಾ ನಿರ್ದೇಶಕರಿಗೆ ಸೂಚನೆ ನೀಡುವ ತಜ್ಞರ ಸಮಿತಿಯು ಬಣ್ಣ ಮತ್ತು ಗಾತ್ರಗಳಲ್ಲಿ ಅವಶ್ಯಕ ಮಾರ್ಪಾಡು ಮಾಡಲು ತಿಳಿಸಿ ಸ್ತಬ್ಧಚಿತ್ರವನ್ನು ಆಕರ್ಷಣೀಯವಾಗಿಸಲು ಸಲಹೆ ನೀಡುತ್ತದೆ. ಅಂತಯೇ ಸಂಗೀತವನ್ನೂ ಮತ್ತಷ್ಟು ಉತ್ತಮೀಕರಿಸುವುದು ಹೇಗೆ ? ಎಂಬ ಬಗ್ಗೆಯೂ ಸಮಿತಿಯು ಬೆಳಕು ಚೆಲ್ಲಿ ರಾಜ್ಯಗಳಿಗೆ ಮಾರ್ಗದರ್ಶನ ಮಾಡುತ್ತದೆ.
ಒಮ್ಮೆ ಕೀಲಿ ಮಾದರಿಯ ವಿನ್ಯಾಸವನ್ನು ಸಮಿತಿಯು ಅನುಮೋದಿಸಿದಲ್ಲಿ ಅದುವೇ ಅಂತಿಮ. ಮತ್ತೆ ಬದಲಾವಣೆಗಳಿಗೆ ಅವಕಾಶ ಇರುವುದಿಲ್ಲ. ನಂತರ, ರೂಪುಗೊಳ್ಳುವ ಸ್ತಬ್ಧಚಿತ್ರವು ಎಲ್ಲಾ ರೀತಿಯಲ್ಲೂ ಅನುಮೋದಿತ ಕೀಲಿ ಮಾದರಿಯಂತೆಯೇ ಮೈದೇಳಬೇಕಾಗುತ್ತದೆ. ಅದೇ ರೀತಿ, ಒಮ್ಮೆ ಅಂಗೀಕೃತವಾದ ಸಂಗೀರವನ್ನು ಯಾವುದೇ ಕಾರಣಕ್ಕೂ ಬದಲಾಯಿಸುವಂತಿಲ್ಲ. ಗೀತರಚನೆ, ರಾಗ, ತಾಳ, ಮಾಧುರ್ಯ, ಗಾಯನ ಎಲ್ಲವೂ ತಜ್ಷರ ಸಮಿತಿಯು ಅಂಗೀಕರಿಸಿದಂತೆಯೇ ಇರಬೇಕು.

ಕೀಲಿ ಮಾದರಿಯೇ ಅಳತೆಗೋಲು : ಸ್ತಬ್ಧಚಿತ್ರ ರೂಪಿಸಲು ಕೀಲಿ ಮಾದರಿಯೇ ಅಳತೆಗೋಲು ಅಥವಾ ಮಾಪನ ಎಂದು ಬಣ್ಣಿಸಬಹುದು. ಸಾಮಾನ್ಯವಾಗಿ 45 ಅಡಿ ಉದ್ದ, 16 ಅಡಿ ಎತ್ತರ ಹಾಗೂ 15 ಅಡಿ ಅಗಲದ ಸ್ತಬ್ಧ ಚಿತ್ರವು ನಿರ್ಮಾಣವಾಗುತ್ತದೆ.

ಒಂದು ಸ್ತಬ್ಧಚಿತ್ರ ನಿರ್ಮಾಣದ ಹಿಂದೆ ನೂರು ಜನ : ಓರ್ವ ಕಲಾ ನಿರ್ದೇಶಕರು, ಹತ್ತಾರು ಕಲಾ ವಿನ್ಯಾಸಗಾರರು, ಕುಸುರಿ ಕಲೆಯಲ್ಲಿ ತೊಡಗುವ ಇಪ್ಪತ್ತಕ್ಕೂ ಹೆಚ್ಚು ಕುಶಲಕರ್ಮಿಗಳು, ಇಪ್ಪತ್ತಕ್ಕೂ ಹೆಚ್ಚು ಕಲಾಕಾರರು ಹಾಗೂ ಚಿತ್ರಕಲಾಕಾರರು. ಬಡಗಿಗಳು, ವಿದ್ಯುತ್ ಕಾರ್ಮಿಕರು, ಹತ್ತಕ್ಕೂ ಹೆಚ್ಚು ನಾಟಕ ಮತ್ತು ನೃತ್ಯ ಕಲಾವಿದರು, ಪ್ರಸಾದನಕಾರರು, ಸಂಗೀತ ಸಂಯೋಜಕರು ಹಾಗೂ ವಾದ್ಯಗೋಷ್ಠಿಯ ತಂಡ, ಸರ್ಕಾರದ ಅಧಿಕಾರಿಗಳು ಮತ್ತು ಸಿಬ್ಬಂದಿ ಹೀಗೆ ಒಂದು ನೂರಕ್ಕೂ ಹೆಚ್ಚು ಜನರ ಶ್ರಮ ಹಾಗೂ ಐವತ್ತಕ್ಕೂ ಹೆಚ್ಚು ದಿನಗಳ ಪರಿಶ್ರಮ ಒಂದು ಸ್ತಬ್ಧಚಿತ್ರದ ನಿರ್ಮಾಣದ ಹಿಂದೆ ಇದೆ ಎಂದರೆ ತಾವೂ ಕೂಡ ಅಚ್ಚರಿಗೆ ಒಳಗಾಗಿ ಬಹುಶಃ ಒಂದು ನಿಮಿಷ ಸ್ತಬ್ಧವಾಗುವಿರಿ. ಆದರೆ, ಇದು ನೂರಕ್ಕೆ ನೂರು ಸತ್ಯ.
ಅಲ್ಲದೇ, ಸ್ತಬ್ಧಚಿತ್ರ ಚಲಿಸುವಾಗ ನೋಡುಗರ ಕಣ್ಣಿಗೆ ಕಾಣದ ಓರ್ವ ಟ್ರಾಕ್ಟರ್ ಚಾಲಕ ಹಾಗೂ ಟ್ರಾಕ್ಟರ್ ಹಿಂಭಾಗದ ಟ್ರೇಲರ್‍ನ ಅಡಿಯಲ್ಲಿ ಕುಳಿತು ಸ್ತಬ್ಧಚಿತ್ರಕ್ಕೆ ಪೂರಕವಾಗಿ ಸಕಾಲದಲ್ಲಿ ಬೆಳಕು ಹೊರಹೊಮ್ಮಿಸಲು ಹಾಗೂ ಸಂಗೀತವನ್ನು ಮೊಳಗಿಸಲು ಓರ್ವ ಬೆಳಕು ಮತ್ತು ಓರ್ವ ಧ್ವನಿ ನಿಯಂತ್ರಕರೂ ಒಳಗೊಂಡಂತೆ ನಾಲ್ವರು ತಂತ್ರಜ್ಞರು ಕಾರ್ಯ ನಿರ್ವಹಿಸುತ್ತರುತ್ತಾರೆ.
ಟ್ರಾಕ್ಟರ್‍ನ ಜೊತೆಯಲ್ಲಿಯೇ ಶಿಸ್ತಿನ ನಡೆಯಿಂದ ಹೆಜ್ಜೆ ಹಾಕುತ್ತಾ ಮುನ್ನಡೆಯುವ ಸೈನಿಕನ ಹೆಜ್ಜೆಗಳನ್ನು ಸಣ್ಣ ಕಿಂಡಿಯಿಂದ ಕಂಡು ಟ್ರಾಕ್ಟರ್‍ನ ಚಾಲಕ ವಾಹನವನ್ನು ಚಲಿಸುತ್ತಾನೆ ಎಂಬ ಸತ್ಯವನ್ನು ಅರಿತರೆ ಯಾರಿಗೆ ಆಗಲಿ ಸೋಜಿಗ ಮಾತ್ರವಲ್ಲ, ರೋಮಾಂಚನವೂ ಉಂಟಾಗುತ್ತದೆ ಅಲ್ಲವೇ.

ವಿಜಯನಗರ – ವಿಜಯದ ನಗರ : ಕರ್ನಾಟಕ ರಾಜ್ಯದ ಈ ಬಾರಿಯ ಸ್ತಬ್ದ ಚಿತ್ರದ ವಿಷಯ ” ವಿಜಯನಗರ : ವಿಜಯದ ನಗರ “. ಸಂಗಮ ವಂಶದ ಹರಿಹರ-1 ಮತ್ತು ಬುಕ್ಕರಾಯ-1 ಸೋದರರಿಂದ ತುಂಗಭದ್ರಾ ನದಿಯ ದಡದಲ್ಲಿ ಸ್ಥಾಪಿತವಾದ ವಿಜಯನಗರ ಸಾಮ್ರಾಜ್ಯದ ಗತ ವೈಭವವನ್ನು ಸಾರುವ ಈ ಸ್ತಬ್ಧಚಿತ್ರವು ಜನಸಾಮಾನ್ಯರಿಂದ ಹಿಡಿದು ಗಣ್ಯಾತಿಗಣ್ಯರ ಮೆಚ್ಚುಗೆಗೆ ಪಾತ್ರವಾದದ್ದು ಕನ್ನಡಿಗರೆಲ್ಲರಿಗೂ ಅಭಿಮಾನದ ಸಂಗತಿ.

ವಿಜಯನಗರದ ರಾಜಧಾನಿ ಹಂಪಿಯ ಕೇಂದ್ರ ಬಿಂದು ಉಗ್ರ ನರಸಿಂಹ, ಭಗವಾನ್ ಹನುಮನ ಜನ್ಮಸ್ಥಳ ಎಂದು ಹೇಳಲಾಗುವ ಅಂಜನಾದ್ರಿ ಬೆಟ್ಟದ ಮೇಲೆ ವೀರ ಹನುಮನ ಮೂರ್ತಿ, ವಿಜಯನಗರದ ಸಾಮ್ರಾಟ ಶ್ರೀ ಕೃಷ್ಣದೇವರಾಯನ ಪಟ್ಟಾಭಿಷೇಕ ಸಮಾರಂಭ, ವಿಜಯನಗರದ ವಿಶೇಷ ಸಂಗೀತ ಸ್ಥಂಬಗಳು ಹಾಗೂ ಹಜಾರ ರಾಮ ದೇವಾಲಯದಲ್ಲಿನ ರಾಮಾಯಣದ ಕಥಾನಕವನ್ನು ತಿಳಿಸುವ ಭಿತ್ತಿಚಿತ್ರಗಳು ಈ ಬಾರಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಸ್ತುತಪಡಿಸಿದ ಸ್ತಬ್ಧಚಿತ್ರದ ವಿಶೇಷತೆಗಳು,

ಸ್ತಬ್ಧಚಿತ್ರದ ಬಹುಭಾಗ ಬೆಂಗಳೂರಿನ ಹೊರವಲಯದ ಹೆಸರುಘಟ್ಟದಲ್ಲಿ ತಯಾರಾಗಿ 14-ಚಕ್ರಗಳ ಎರಡು ಬೃಹತ್ ವಾಹನಗಳಲ್ಲಿ ನವದೆಹಲಿಯ ರಕ್ಷಣಾ ಮಂತ್ರಾಲಯದ ಸ್ವಾಮ್ಯದ ರಾಷ್ಟ್ರೀಯ ರಂಗಶಾಲಾ ಶಿಬಿರದಲ್ಲಿ ಮೂರ್ತರೂಪ ಪಡೆದುಕೊಂಡವು.

ಸುಪ್ರಸಿದ್ಧ ಕಲಾ ನಿರ್ದೆಶಕ ಶಶಿಧರ ಅಡಪ ಮತ್ತು ಅವರ ಅಸಂಖ್ಯ ಬಳಗದ ಪರಿಶ್ರಮದ ಕೊಡುಗೆ, ಹೆಸರಾಂತ ಸಂಗೀತ ನಿರ್ದೇಶಕ ಪ್ರವೀಣ್ ಡಿ ರಾವ್ ಅವರ ರಾಗ ಸಂಯೋಜನೆ, ಶಿವಮೊಗ್ಗ ರಂಗಾಯಣದ ನಿರ್ದೇಶಕ ಹಾಗೂ ರಂಗತಜ್ಞ ಸಂದೀಪ್ ಜವಳಿ ಅವರ ಗರಡಿಯಲ್ಲಿ ಬೆಳೆದ 12 ರಂಗಕಲಾವಿದರು, ಹೆಜ್ಜೆಹೆಜ್ಜೆಗೂ ಪೆÇ್ರೀತ್ಸಾಹದ ಧಾರೆ ಎರೆದು ಮಾರ್ಗದರ್ಶನ ಮಾಡಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಡಾ. ಪಿ.ಎಸ್. ಹರ್ಷ ಅವರು ಸ್ತಬ್ಧಚಿತ್ರ ನಿರ್ಮಾಣದ ಯಶೋಗಾಥೆಯ ತೆರೆಮರೆಯ ನಾಯಕರು.
ಇದು ನಮ್ಮ ಸ್ತಬ್ಧಚಿತ್ರ ನಿರ್ಮಾಣದ ಹಿಂದಿನ ಕಥೆ. ಕೆಲವು ನಿಮಿಷಗಳು ತಾವು ನೋಡುವ ಸ್ತಬ್ಧಚಿತ್ರದ ನಿರ್ಮಾಣದಲ್ಲಿ ಹಲವರ ಶ್ರಮ ಹಾಗೂ ಹಲವು ತಿಂಗಳುಗಳ ಪರಿಶ್ರಮವಿದೆ ಎಂಬುದನ್ನು ತಮಗೆ ಪರಿಚಯಿಸಲು ಪ್ರಯತ್ನಿಸಿದ ನಾನೂ ಕೂಡಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಈ ಬಾರಿಯ ಸ್ತಬ್ಧಚಿತ್ರ ನಿರ್ಮಾಣದಲ್ಲಿ ಅಳಿಲು ಸೇವೆ ಮಾಡುವ ಅವಕಾಶ ಪಡೆದಿದ್ದೆ ಎಂಬುದು ಸಂತೃಪ್ತಿ ಮಾತ್ರವಲ್ಲ, ನನ್ನಲ್ಲಿ ಧನ್ಯತಾಭಾವ ಮೂಡಿಸಿದೆ.
ಬರಹ : ಡಿ.ಪಿ. ಮುರುಳೀಧರ್
ಕೃಪೆ : ವಾರ್ತಾ ಜನಪದ

error: Content is protected !!