ಕೊನೆಗೂ ಅಂತಿಮ ಹಂತ ತಲುಪಿದ ಕುಂಡಾಮೇಸ್ತ್ರಿ ಯೋಜನೆ : ಏಪ್ರಿಲ್ ತಿಂಗಳಿನಲ್ಲಿ ಕಾಮಗಾರಿ ಪೂರ್ಣ

February 11, 2021

ಮಡಿಕೇರಿ ಫೆ.11 : ಮಡಿಕೇರಿ ನಗರದ 23 ವಾರ್ಡ್‍ಗಳಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸುವ, ನಗರದ ಜನರ ಹತ್ತು ಹಲವು ವರ್ಷದ ಬೇಡಿಕೆಯಾದ “ಕುಂಡಾ ಮೇಸ್ತ್ರಿ ಕಿರು ಅಣೆಕಟ್ಟು” ಯೋಜನೆ ಅಂತಿಮ ಹಂತದಲ್ಲಿದೆ. ನಗರೋತ್ಥಾನ 3ನೇ ಹಂತದ ಯೋಜನೆಯಡಿಯಲ್ಲಿ ಕರ್ನಾಟಕ ಜಲಮಂಡಳಿ ಈ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಇದೇ ಏಪ್ರಿಲ್ ತಿಂಗಳಿನÀಲ್ಲಿ 87 ದಶಲಕ್ಷ ಲೀಟರ್ ನೀರು ಸಂಗ್ರಹ ಸಾಮಥ್ರ್ಯದ ಈ ಅಣೆಕಟ್ಟು ಉದ್ಘಾಟನೆಗೊಳ್ಳುವ ಸಾಧ್ಯತೆಗಳಿದೆ.
ಪುಷ್ಟುಗಿರಿ ಕಣಿವೆಯ ವಣಚಲು ಮತ್ತು ಕಾಲೂರು ಗ್ರಾಮಗಳ ಕಾಡುಮೇಡುಗಳಿಂದ ನೈಸರ್ಗಿಕವಾಗಿ ಹರಿದು ಬರುವ ಎರಡು ಬೃಹತ್ ತೊರೆಗಳು ಕುಂಡಾಮೇಸ್ತ್ರಿಯಲ್ಲಿ ನದಿಯಾಗಿ ಸಂಗಮವಾಗುತ್ತಿದ್ದು, ಈ ಸ್ಥಳದಲ್ಲೇ ಕಿರು ಅಣೆಕಟ್ಟು ನಿರ್ಮಿಸಲಾಗಿದೆ. ಶಾಶ್ವತ ಕುಡಿಯುವ ನೀರು ಸರಬರಾಜು ಯೋಜನೆಯ ಚೆಕ್ ಡ್ಯಾಮ್ ಕಾಮಗಾರಿ ಪ್ರಗತಿಯಲ್ಲಿದ್ದು, ಏಪ್ರಿಲ್ ಅಂತ್ಯದೊಳಗೆ ಪೂರ್ಣಗೊಳ್ಳುವ ಭರವಸೆಯನ್ನು ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ನೀಡಿದೆ. ಒಟ್ಟು 5.45 ಕೋಟಿ ರೂ. ವೆಚ್ಚದಲ್ಲಿ ಈ ಕಿರು ಅಣೆಕಟ್ಟು ನಿರ್ಮಿಸಲಾಗುತ್ತಿದ್ದು, ವರ್ಷದ ಬೇಸಿಗೆಯ 4 ತಿಂಗಳ ಕಾಲ ಕುಂಡಾಮೇಸ್ತ್ರಿ ಡ್ಯಾಮ್‍ನಿಂದ ನೀರನ್ನು ಪಂಪ್ ಮಾಡಲಾಗುತ್ತದೆ. 40 ಮೀಟರ್ ಉದ್ದ, 9 ಮೀಟರ್ ಎತ್ತರದ ಅಣೆಕಟ್ಟೆಗೆ ನೂತನ ಹೈಡ್ರಾಲಿಕ್ ತಂತ್ರಜ್ಞಾನದ 4 ಗೇಟ್‍ಗಳಿರಲಿದ್ದು, ಮಳೆಗಾಲ ಪ್ರಾರಂಭವಾದಾಗ ಈ ಎಲ್ಲಾ ಗೇಟ್‍ಗಳನ್ನು ಸಂಪೂರ್ಣವಾಗಿ ತೆರೆದಿಡಲಾಗುತ್ತದೆ. ಮಾತ್ರವಲ್ಲದೇ, ತುರ್ತು ಸೇವೆಗಾಗಿ ಮತ್ತೊಂದು ಗೇಟ್ ಕೂಡ ಅಳವಡಿಕೆಯಾಗಲಿದೆ.
ಈಗಾಗಲೇ ಕುಂಡಾಮೇಸ್ತ್ರಿಯಲ್ಲಿ 40 ಅಡಿ ಆಳವಿರುವ ಜಾಕ್‍ವೆಲ್ ಅನ್ನು ನಿರ್ಮಿಸಲಾಗಿದ್ದು, ತಲಾ 300 ಹೆಚ್.ಪಿಯ 3 ಮೋಟಾರ್‍ಗಳನ್ನು ಅಳವಡಿಸಲಾಗಿದೆ. ಈ ಪೈಕಿ 2 ಮೋಟಾರ್‍ಗಳು ಏಕಕಾಲದಲ್ಲಿ ಚಾಲನೆಯಲ್ಲಿದ್ದರೆ, ಮತ್ತೊಂದು ಮೋಟಾರನ್ನು ಹೆಚ್ಚುವರಿಯಾಗಿ ಬಳಸಿಕೊಳ್ಳಲಾಗುತ್ತಿದ್ದು, ಕಳೆದ 3 ವರ್ಷಗಳಿಂದ ಬೇಸಿಗೆ ತಿಂಗಳಲ್ಲಿ ಇಲ್ಲಿಂದಲೇ ನೀರನ್ನು ಪಂಪ್ ಮಾಡಲಾಗುತ್ತಿದೆ. ಮೋಟಾರ್ ಪಂಪ್‍ನ 2 ಪುಟ್‍ವಾಲ್‍ಗಳು ನೀರಿನಲ್ಲಿ ಕನಿಷ್ಟ 7 ಅಡಿಗಳಷ್ಟು ಮುಳುಗಲು ಸಾಧ್ಯವಾಗುವಂತೆ ಕಿರು ಅಣೆಕಟ್ಟು ನಿರ್ಮಿಸಲಾಗಿದೆ.
ನಗರದ ಅಭಿವೃದ್ದಿ ಮತ್ತು ಜನಸಂಖ್ಯೆಯ ಬೆಳವಣಿಗೆಯನ್ನು ಮುಂದಿರಿಸಿಕೊಂಡು ಪ್ರತಿ ಬಡಾವಣೆಗೆ ಶಾಶ್ವತ ಕುಡಿಯುವ ನೀರಿನ ಪೂರೈಕೆಗಾಗಿ ಮತ್ತು ಬಹು ಕೋಟಿ ಯೋಜನೆಯಾದ ಕುಂಡಾಮೇಸ್ತ್ರಿ ನೀರನ್ನು ಮಡಿಕೇರಿ ನಗರದ ಎಲ್ಲಾ ಬಡಾವಣೆಗೆ ಹಂಚಿಕೆ ಮಾಡಲು ಕರ್ನಾಟಕ ಜಲ ಮಂಡಳಿ ಮತ್ತು ನಗರ ಸಭೆ ಯೋಜನೆ ರೂಪಿಸಿದೆ. ನಗರದ ಸುದರ್ಶನ ಅತಿಥಿ ಗೃಹದ ಬಳಿ 7.5 ಲಕ್ಷ ಲೀ. ಮತ್ತು ಉಕ್ಕಡ ಬಳಿ 12.5 ಲಕ್ಷ ಲೀ. ಸಾಮಥ್ರ್ಯದ 2 ಓವರ್ ಹೆಡ್ ಟ್ಯಾಂಕ್‍ಗಳನ್ನು ನಿರ್ಮಿಸಲು ಬಾಕಿ ಇದೆ. ಈ ಓವರ್ ಹೆಡ್ ಟ್ಯಾಂಕ್‍ಗಳಿಗೆ ನೀರನ್ನು ಪಂಪ್ ಮಾಡಲು 2 ನೂತನ ಪಂಪ್ ಹೌಸ್‍ಗಳನ್ನು ಕೂಡ ನಿರ್ಮಿಸಲಾಗುತ್ತದೆ. ಈ ಕಾಮಗಾರಿ ಪೂರ್ಣಗೊಂಡ ಬಳಿಕ ಸ್ಟೋನ್ ಹಿಲ್ ಬಳಿಯಿರುವ ನೀರಿನ ಶುದ್ದೀಕರಣ ಘಟಕದಿಂದ ಎಲ್ಲಾ ಓವರ್ ಹೆಡ್ ಟ್ಯಾಂಕ್‍ಗಳಿಗೆ ನೀರನ್ನು ಪಂಪ್ ಮಾಡಿ ಪ್ರತಿ ಮನೆಗೂ ನೀರನ್ನು ಪೂರೈಕೆ ಮಾಡುವ ಯೋಜನೆಯನ್ನು ರೂಪಿಸಲಾಗುತ್ತಿದೆ. ಈ ಎಲ್ಲಾ ಯೋಜನೆ ಪೂರ್ಣಗೊಂಡ ಬಳಿಕ ಪ್ರಸ್ತುತ ನಗರಕ್ಕೆ ನೀರು ಪೂರೈಕೆ ಮಾಡುತ್ತಿರುವ ಕೆರೆಗಳು ಮತ್ತು ನೀರಿನ ಮೂಲಗಳನ್ನು ಉಪ ಘಟಕಗಳನ್ನಾಗಿ ವಿಂಗಡಿಸಲಾಗುತ್ತದೆ ಎಂಬ ಮಾಹಿತಿ ಲಭಿಸಿದೆ.
“0.5 ಟಿಎಂಸಿ” ನೀರು ಸಂಗ್ರಹ ಸಾಮಥ್ರ್ಯವಿರುವ, ನಗರಕ್ಕೆ ನೀರು ಪೂರೈಸುವ ಪ್ರಮುಖ ಜಲ ಸಂಗ್ರಹಗಾರ ಕೂಟುಹೊಳೆ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಬೇಸಿಗೆಯಲ್ಲಿ ಇಳಿಕೆಯಾಗಲಿದ್ದು, ಈ ಸಂದರ್ಭ ಕುಂಡಾಮೇಸ್ತ್ರಿಯಿಂದ ನೀರನ್ನು ಕೂಡು ಹೊಳೆಗೆ ಪಂಪ್ ಮಾಡಲಾಗುತ್ತದೆ. ಕೂಟುಹೊಳೆಯಲ್ಲಿ ನೀರಿನ ಪ್ರಮಾಣ ಡೆಡ್ ಸ್ಟೋರೇಜ್ ಹಂತಕ್ಕೆ ತಲುಪಿದ ತಕ್ಷಣವೇ ಕುಂಡಾಮೇಸ್ತ್ರಿಯಿಂದ ತಲಾ 300 ಹೆಚ್.ಪಿ.ಯ 2 ಪಂಪಿಂಗ್ ಮೋಟಾರ್ ಸಹಾಯದಿಂದ 2 ಅಡಿ ಅಗಲದ ಪೈಪ್ ಮೂಲಕ ಕೂಟುಹೊಳೆಯಲ್ಲಿ ನಿರ್ಮಿಸಿರುವ ಜಾಕ್‍ವೆಲ್‍ಗೆ ನೀರನ್ನು ಪೂರೈಸಲಾಗುತ್ತದೆ. ಬಳಿಕ ಇಲ್ಲಿಂದ ಪಂಪ್ ಮೂಲಕ ನಗರದ ಸ್ಟೋನ್ ಹಿಲ್ ಬಳಿ ಇರುವ ನೀರು ಶುದ್ದೀಕರಣ ಘಟಕಕ್ಕೆ ಪೂರೈಕೆ ಮಾಡಲಾಗುತ್ತದೆ.
::: 40 ಲಕ್ಷ ಲೀಟರ್‍ಗೆ ಬೇಡಿಕೆ :::
ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಮಡಿಕೇರಿ ನಗರದ ಜನಸಂಖ್ಯೆ 33 ಸಾವಿರವಿದ್ದು, ಪ್ರಸ್ತುತ 40 ಲಕ್ಷ ಲೀಟರ್ ನೀರಿನ ಬೇಡಿಕೆಯಿದೆ. ಈ ಪ್ರಮಾಣದ ನೀರಿನ ಬೇಡಿಕೆಯ ಬಹುಭಾಗವನ್ನು ಕೂಟುಹೊಳೆ ಜಲ ಸಂಗ್ರಹಗಾರ ಪೂರೈಸುತ್ತಿದೆ. ಪಂಪ್ ಕೆರೆ, ರೋಷನಾರ ಕೆರೆ, ಕನ್ನಂಡಬಾಣೆ ಪಂಪ್ ಹೌಸ್, ಉಕ್ಕಡ ಪಂಪ್ ಕೆರೆಗಳು, ಕೆಲವು ತೆರೆದ ಬಾವಿಗಳು, ಬೋರ್ ವೆಲ್‍ಗಳು ಉಳಿದ ಬೇಡಿಕೆಯನ್ನು ಈಡೇರಿಸುತ್ತಿವೆ. 2026ಕ್ಕೆ ನಗರದ ಜನಸಂಖ್ಯೆ ಮತ್ತು ದಿನ ಬಳಕೆ ನೀರಿನ ಬೇಡಿಕೆ ಪ್ರಮಾಣ ಮತ್ತಷ್ಟು ಹೆಚ್ಚಳವಾಗಲಿದ್ದು, ಕುಂಡಾಮೇಸ್ತ್ರಿ ಯೋಜನೆಯ ಮೂಲಕ 90 ಲಕ್ಷ ಲೀ. ನೀರಿನ ಸಂಗ್ರಹವನ್ನು ಮಾಡಿಕೊಳ್ಳಬಹುದು ಎಂದು ಜಲಮಂಡಳಿ ಅಂದಾಜಿಸಿದೆ.
::: ಕಾಮಗಾರಿಗೆ ಅನುಮೋದನೆ :::

ಕುಂಡಾ ಮೇಸ್ತ್ರಿಯಿಂದ ಕೂಟುಹೊಳೆಗೆ ನೀರು ಸರಬರಾಜು ಮಾಡಲು 2010ರಲ್ಲಿ ಆಡಳಿತಾತ್ಮಕ ಅನುಮೋದನೆ ದೊರೆತ್ತಿದ್ದು 2016ರ ಬೇಸಿಗೆಯಿಂದಲೇ ಕುಂಡಾ ಮೇಸ್ತ್ರಿಯಿಂದ ನೀರನ್ನು ಕೂಟುಹೊಳೆಗೆ ಪಂಪ್ ಮಾಡಲಾಗುತ್ತಿದೆ. ಈ ಹಿಂದೆ ಕುಂಡಾ ಮೇಸ್ತ್ರಿಯಲ್ಲಿ ನೀರು ಸಂಗ್ರಹಣೆಗಾಗಿ ತಾತ್ಕಾಲಿಕ ಸ್ಯಾಂಡ್ ಬಂಡ್” ನಿರ್ಮಿಸಲಾಗುತ್ತಿದ್ದು, ಮಳೆ ಬಂದೊಡನೆ ಕೊಚ್ಚಿ ಹೋಗುತ್ತಿದ್ದವು. ಹೀಗಾಗಿ ಕುಂಡಾ ಮೇಸ್ತ್ರಿಯಲ್ಲಿ ನೀರು ಸಂಗ್ರಹಣೆಗೆ ಶಾಶ್ವತ ಪರಿಹಾರದ ಅಗತ್ಯವಿದ್ದ ಕಾರಣ 2019ರ ಮಾರ್ಚ್ ತಿಂಗಳಲ್ಲಿ ಚೆಕ್ ಡ್ಯಾಮ್ ಕಾಮಗಾರಿಗೆ ಹಸಿರು ನಿಶಾನೆ ದೊರೆಯಿತು. 2020 ಜೂನ್ ವೇಳೆಗೆ ಈ ಕಾಮಗಾರಿ ಪೂರ್ಣಗಳ್ಳಬೇಕಿತ್ತಾದರೂ, ಅತಿಯಾದ ಮಳೆ ಮತ್ತು ಕೋವಿಡ್ ಲಾಕ್‍ಡೌನ್ ಯೋಜನೆ ಪೂರ್ಣವಾಗಲು 9 ತಿಂಗಳ ಹೆಚ್ಚುವರಿ ಸಮಯ ತೆಗೆದುಕೊಂಡಿದೆ.

ಮಡಿಕೇರಿ ತಾಲೂಕಿನ ಗಾಳಿಬೀಡು ಸಮೀಪದಲ್ಲಿ ಮಡಿಕೇರಿ ನಗರಕ್ಕೆ ಶಾಶ್ವತ ಕುಡಿಯುವ ನೀರು ಪೂರೈಕೆಗೆ ಒಟ್ಟು ರೂ.30 ಕೋಟಿಯ ಕುಂಡಾಮೇಸ್ತ್ರಿ ಯೋಜನೆಯ ಕೊನೆಯ ಹಂತದಬ್ಯಾರೇಜ್’ ಕಾಮಗಾರಿ ನಡೆಯುತ್ತಿದ್ದು, ಏಪ್ರಿಲ್ ಅಂತ್ಯದೊಳಗೆ ಪೂರ್ಣಗೊಳ್ಳುವ ಗುರಿಯನ್ನು ಇಲಾಖೆ ಇಟ್ಟುಕೊಂಡಿದೆ. ಪ್ರಸ್ತುತ ನಡೆಯುತ್ತಿರುವ ಚೆಕ್ ಡ್ಯಾಮ್ ಕಾಮಗಾರಿಗೆ ರೂ.5.47 ಕೋಟಿ ವೆಚ್ಚವಾಗಲಿದೆ. ಒಟ್ಟು 30 ಕೋಟಿಯಲ್ಲಿ ಸ್ಟೋನ್ ಹಿಲ್‍ನಲ್ಲಿ ನೀರು ಶುದ್ಧೀಕರಣ ಘಟಕ, ಕುಂಡಾ ಮೇಸ್ತ್ರಿಯಲ್ಲಿ ಜ್ಯಾಕ್‍ವೆಲ್, ಪೈಪ್ ಲೈನ್ ಕಾಮಗಾರಿ ಈಗಾಗಲೇ ನಡೆಸಲಾಗಿದೆ. ಉಳಿದ ರೂ. 5.47 ಕೋಟಿ ವೆಚ್ಚದಲಿ ಚೆಕ್ ಡ್ಯಾಮ್ ಕಾರ್ಯ ನಡೆಯುತ್ತಿದೆ.
ಅಜಯ್ ಆರ್.ವಿ.
ಸಹಾಯಕ ಕಾರ್ಯಪಾಲಕ ಅಭಿಯಂತರ
ಕರ್ನಾಟಕ ಜಲ ಮಂಡಳಿ

error: Content is protected !!