ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ನೂತನ ಕೊಠಡಿ ಉದ್ಘಾಟನೆ

February 11, 2021

ಮಡಿಕೇರಿ ಫೆ. 11 : ಕೊಡಗು ಟಾಟಾ ಕಾಫಿ ಲಿಮಿಟೆಡ್‍ನ ಸೇವಾ ಸಂಸ್ಥೆ ಕೂರ್ಗ್ ಪೌಂಡೇಶನ್ ವತಿಯಿಂದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಕಟ್ಟಿಸಲಾದ ನೂತನ ಶಾಲಾ ಕೊಠಡಿಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಪಿ. ಸುಬ್ರಹ್ಮಣ್ಯ ಎಡಪಡಿತ್ತಾಯ ಉದ್ಘಾಟಿಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಎಲ್ಲರಿಗೂ ಒಳ್ಳೆಯದಾಗುವಂತಾ ಕೆಲಸಗಳನ್ನು ಮಾಡುವ ಮುಖಾಂತರ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡರೆ ನಮಗೂ ಭವಿಷ್ಯದಲ್ಲಿ ಒಳ್ಳೆಯದಾಗುತ್ತದೆ, ಈ ನಿಟ್ಟಿನಲ್ಲಿ ಶಿಕ್ಷಕ ವೃಂದ, ಸಾರ್ವಜನಿಕರು, ದಾನಿಗಳು ಕೈಜೋಡಿಸಿ ಯುವ ಜನಾಂಗದ ಏಳಿಗೆಗೆ ಶ್ರಮಿಸಬೇಕಾಗಿದೆ, ಆ ಮೂಲಕ ರಾಷ್ಟ್ರವನ್ನು ಕಟ್ಟುವ ಕೆಲಸ ಆಗಬೇಕಿದೆ ಎಂದು ಕರೆ ನೀಡಿದರು. ವಿದ್ಯಾರ್ಥಿಗಳಿಗೆ ನೆರವಾಗುವುದು ಭವಿಷ್ಯದಲ್ಲಿ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದ ಅವರು, ಮಂಗಳೂರು ವಿಶ್ವವಿದ್ಯಾಲಯ ಇದಕ್ಕೆ ಕಟಿಬದ್ಧವಾಗಿದೆ ಎಂದರು.
ವಿದ್ಯಾರ್ಥಿಗಳಲ್ಲಿ ಸರ್ವರಿಗೂ ಉಪಕಾರಿಯಾಗುವಂತಹಾ ಮಾನವೀಯ ಮೌಲ್ಯಯುತ ವ್ಯಕ್ತಿತ್ವ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದ್ದು, ಈ ನಿಟ್ಟಿನಲ್ಲಿ ಶಿಸ್ತು, ಸಮಯಪಾಲನೆ, ಬದ್ಧತೆಯನ್ನು ರೂಢಿಸಿಕೊಳ್ಳುವ ಮೂಲಕ ಸರ್ವರೂ ಶ್ರಮಿಸಬೇಕಿದೆ ಎಂದ ಅವರು, ಜೀವನದಲ್ಲಿ ನಾವು ಎಷ್ಟು ದಿನ ಬದುಕುತ್ತೇವೆ ಎಂಬುದಕ್ಕಿಂತ ಎಷ್ಟೊಂದು ಅರ್ಥಬದ್ಧವಾಗಿ ಬದುಕುತ್ತೇವೆ ಎಂಬುದು ಮುಖ್ಯವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಪ್ರಾಂಶುಪಾಲ ಡಾ. ಚೌರೀರ ಜಗತ್ ತಿಮ್ಮಯ್ಯ, ಜನಸೇವೆಯೇ ಜನಾರ್ಧನ ಸೇವೆಯಾಗಿದ್ದು, ಈ ನಿಟ್ಟಿನಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ದುಬಾರಿ ವೆಚ್ಚದ ಗುಣಮಟ್ಟದ ಕೋರ್ಸುಗಳನ್ನು ಕನಿಷ್ಟ ಶುಲ್ಕದಲ್ಲಿ ಒದಗಿಸುತ್ತಾ ಬರುತ್ತಿದೆ. ಇದೀಗ ಕೊಡಗು ಫೌಂಡೇಶನ್ ಅವರು ಕಟ್ಟಿಸಿಕೊಟ್ಟಿರುವ ಕಟ್ಟಡ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ನಾಂದಿಯಾಡಲು ಸಹಕಾರಿಯಾಗುತ್ತದೆ ಎಂದರು.
ಕೂರ್ಗ್ ಫೌಂಡೇಶನ್ ಟ್ರಸ್ಟಿಗಳಾದ ಗಂಗಾ ಚೆಂಗಪ್ಪ ಅವರು ಮಾತನಾಡಿ, ಕೊಡಗಿನ ಯುವ ಜನಾಂಗದ ಏಳಿಗೆಗಾಗಿ ಸಂಸ್ಥೆ ನಿರಂತರ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು, ಮುಂದಿನ ದಿನಗಳಲ್ಲಿ ಹೀಗೆ ತಮ್ಮ ಸೇವೆ ಮುಂದುವರೆಯುತ್ತದೆ ಎಂದು ಭರವಸೆ ನೀಡಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಡಾ. ಪಾರ್ವತಿ ಅಪ್ಪಯ್ಯ ಅವರು ಮಾತನಾಡಿ, ಇದೀಗ ನಿರ್ಮಾಣವಾಗಿರುವ ಕೊಠಡಿಯು ಗಣಿತ ವಿದ್ಯಾರ್ಥಿಗಳ ಕಲಿಕೆಗೆ ಬಳಸಲಾಗುತ್ತಿದ್ದು, ಗಣಿತದಲ್ಲಿ ಪರಿಣತಿ ಹೊಂದಿದ ವಿದ್ಯಾರ್ಥಿಗಳು ವಿಜ್ಞಾನದ ಇತರ ವಿಷಯಗಳಲ್ಲಿಯೂ ಹೆಚ್ಚು ಪರಿಣಿತಿ ಹೊಂದಿರುತ್ತಾರೆ. ಈ ನಿಟ್ಟಿನಲ್ಲಿ ಇದೀಗ ನಿರ್ಮಾಣವಾಗಿರುವ ಕಟ್ಟಡ ವಿದ್ಯಾರ್ಥಿಗಳ ಶೈಕ್ಷಣಿಕ ಕಲಿಕೆಗೆ ಮತ್ತಷ್ಟು ಅನುಕೂಲವಾಗಲಿದೆ ಎಂದರು.
ವೇದಿಕೆಯಲ್ಲಿ ಟಾಟಾ ಕಾಫಿ ಪ್ರಧಾನ ವ್ಯವಸ್ಥಾಪಕ ರಾಜೀವ್.ಕೆ.ಜಿ, ಟಾಟಾ ಕಾಫಿ ಎಂಜಿನಿಯರಿಂಗ್ ಘಟಕದ ಪ್ರಧಾನ ವ್ಯವಸ್ಥಾಪಕ ಸತೀಶ್ ಮೆನನ್ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ರವಿಶಂಕರ್ ಅವರು ನಿರೂಪಿಸಿದರು. ಇಂಗ್ಲೀಷ್ ವಿಭಾಗದ ಉಪನ್ಯಾಸಕರಾದ ಅಲೋಕ್ ಬಿಜೈ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಬೋಧಕ ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.

250 ವಿದ್ಯಾರ್ಥಿಗಳಿಗೆ ಉಚಿತ ಆಹಾರ ಪೂರೈಕೆ : ಗುಣಮಟ್ಟದ ಶಿಕ್ಷಣದೊಂದಿಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಮಂಗಳೂರು ವಿಶ್ವವಿದ್ಯಾನಿಲಯ ಇದೀಗ 250 ವಿದ್ಯಾರ್ಥಿಗಳಿಗೆ ಉಚಿತ ಆಹಾರ ಪೂರೈಕೆ ಸೇವೆ ಮಾಡುತ್ತಿದೆಯಲ್ಲದೆ, ‘ವಾತ್ಸಲ್ಯ ನಿಧಿ’ ಎಂಬ ಪರಿಕಲ್ಪನೆಯನ್ನು ಹೊರತಂದು ಆ ಮೂಲಕ ಸಾರ್ವಜನಿಕರಲ್ಲಿ ಬೇಡವಾದ ಮಕ್ಕಳ ಆಟಿಕೆಗಳನ್ನು ಸಂಗ್ರಹಿಸಿ ಅದನ್ನು ಮುಕ್ತವಾಗಿ ಇರಿಸಿ ಅಗತ್ಯವಿರುವವರು ಯಾವುದೇ ಅಂಜಿಕೆಯಿಲ್ಲದೆ ತೆಗೆದುಕೊಂಡು ಹೋಗಲು ವೇದಿಕೆ ಕಲ್ಪಿಸಿದೆ. ಇದೇ ರೀತಿಯಲ್ಲಿ ಪುಸ್ತಕ, ಬಟ್ಟೆಗಳನ್ನೂ ಅಗತ್ಯವಿರುವವರು ಉಚಿತವಾಗಿ ಪಡೆದುಕೊಳ್ಳಲು ಪ್ರತ್ಯೇಕ ವ್ಯವಸ್ಥೆಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಮುಂದಾಗಬೇಕಿದೆ.
ಡಾ. ಪಿ. ಸುಬ್ರಹ್ಮಣ್ಯ ಎಡಪಡಿತ್ತಾಯ, ಕುಲಪತಿ, ಮಂಗಳೂರು ವಿಶ್ವವಿದ್ಯಾನಿಲಯ.

error: Content is protected !!