ಗಣರಾಜ್ಯೋತ್ಸವ ಪರೇಡ್‍ನಲ್ಲಿ ಭಾಗವಹಿಸಿದ್ದ ಕಾರ್ಯಪ್ಪ ಕಾಲೇಜಿನ ಎನ್‍ಸಿಸಿ ಕೆಡೆಟ್‍ಗಳಿಗೆ ಸನ್ಮಾನ

February 11, 2021

ಮಡಿಕೇರಿ ಫೆ. 11 : ಯಾವುದೇ ಕೆಲಸವನ್ನು ಶ್ರದ್ಧಾ ಭಕ್ತಿಯಿಂದ ಮಾಡಿದರೆ ಅದುವೇ ದೇಶ ಪ್ರೇಮ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಪಿ. ಸುಬ್ರಹ್ಮಣ್ಯ ಎಡಪಡಿತಾಯ ಅಭಿಪ್ರಾಯಪಟ್ಟರು.
ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಭಾಗವಹಿಸಿದ್ದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಎನ್.ಸಿ.ಸಿ ಕೆಡೆಟ್‍ಗಳಾದ ದ್ವಿತೀಯ ಬಿಬಿಎ ವಿದ್ಯಾರ್ಥಿ ಇಂದ್ರಜಿತ್.ಎಂ, ದ್ವಿತೀಯ ಬಿಎಸ್ಸಿ ವಿದ್ಯಾರ್ಥಿನಿ ಯಶಸ್ವಿ. ಸಿ.ಟಿ ಅವರನ್ನು ಅಭಿನಂದಿಸಿ ಮಾತನಾಡಿದ ಅವರು, ಸೇನೆಯಲ್ಲಿ ಸೇವೆಸಲ್ಲಿಸುವುದು, ಸಕ್ರೀಯ ರಾಜಕಾರಣದಲ್ಲಿ ತೊಡಗಿಕೊಳ್ಳುವುದು ಮಾತ್ರ ದೇಶ ಸೇವೆಯಲ್ಲ, ಬದಲಾಗಿ ಯಾವುದೇ ಕೆಲಸವನ್ನು ಆಯಾ ಕೆಲಸದ ವೃತ್ತಿಪರತೆಗೆ ಅನುಗುಣವಾಗಿ ಭಕ್ತಿಯಿಂದ ಶ್ರದ್ಧೆಯಿಂದ ನಿರ್ವಹಿಸಿದರೆ ಸಾಕು, ಅದು ಕೂಡ ದೇಶಪ್ರೇಮ ಎಂದು ಕಿವಿಮಾತು ಹೇಳಿದರು.
ಎನ್.ಸಿ.ಸಿ ಎಂದರೆ ಅಲ್ಲಿ ಐಕ್ಯತೆ ಮತ್ತು ಶಿಸ್ತು ಇರುತ್ತದೆ. ಇದರೊಂದಿಗೆ ವರ್ತನೆ ಕೂಡ ಮುಖ್ಯ ಎಂದ ಅವರು, ನಾವು ಎಲ್ಲೆಲ್ಲಿ ಹೇಗೆ ವರ್ತಿಸುತ್ತೇವೆ ಎಂಬುದರ ಕಡೆ ಕೂಡ ಹೆಚ್ಚು ಗಮನ ಹೊಂದಿರಬೇಕು. ನಮ್ಮ ಭಾವನೆ, ಆಲೋಚನೆ, ವರ್ತನೆ, ನೈತಿಕ ಪ್ರಜ್ಞೆಗಳೆಲ್ಲವೂ ನಮ್ಮ ವ್ಯಕ್ತಿತ್ವ ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಅದನ್ನು ನಾವೇ ರೂಢಿಸಿಕೊಳ್ಳಬೇಕೇ ಹೊರತು ಅದನ್ನು ಬೇರೆಯವರು ನಮ್ಮ ಮೇಲೆ ಹೇರಿ ಕಲಿಸಿಕೊಡಲಾಗುವುದಿಲ್ಲ. ನಾವು ಸಕಾರಾತ್ಮಕ ಆಲೋಚನೆಗಳನ್ನು ಮುಂದಿಟ್ಟುಕೊಂಡು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರೆ, ಭವಿಷ್ಯದಲ್ಲಿ ಆಗುವುದೆಲ್ಲವೂ ಒಳ್ಳೆಯದೇ ಆಗುತ್ತದೆ. ಹಾಗೊಂದು ವೇಳೆ ಸೋಲನುಭವಿಸಿದರೆ ಅದನ್ನೇ ಮೆಟ್ಟಿಲನ್ನಾಗಿಸಿ ಸೋಲೇ ಗೆಲುವಿನ ಸೋಪಾನವೆಂದು ಮುನ್ನಡೆಯಬೇಕು ಎಂದು ಎನ್.ಸಿ.ಸಿ ಕೆಡೆಟ್‍ಗಳನ್ನು ಉತ್ತೇಜಿಸಿದರು.
ಗಣರಾಜ್ಯೋತ್ಸವ ಪರೇಡ್‍ನಲ್ಲಿ ಭಾಗವಹಿಸಿದ್ದ ಕೆಡೆಟ್‍ಗಳು ತಮ್ಮ ಅನುಭವ ಹಂಚಿಕೊಂಡರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಚೌರೀರ ಜಗತ್ ತಿಮ್ಮಯ್ಯ, ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಡಾ. ಪಾರ್ವತಿ ಅಪ್ಪಯ್ಯ, ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರು ಹಾಗೂ ಎನ್.ಸಿ.ಸಿ ಅಧಿಕಾರಿ ಮೇಜರ್ ಡಾ. ರಾಘವ್. ಬಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ದ್ವಿತೀಯ ಬಿಸಿಎ ವಿದ್ಯಾರ್ಥಿನಿ ಸ್ಪಂದನ. ಪಿ.ಎ ನಿರೂಪಿಸಿದರು. ಪ್ರಥಮ ಬಿಎಸ್ಸಿ ವಿದ್ಯಾರ್ಥಿನಿ ನಯನ ವಂದಿಸಿದರು. ಕಾರ್ಯಕ್ರಮದಲ್ಲಿ ಎನ್.ಸಿ.ಸಿ ಕೆಡೆಟ್‍ಗಳು, ಬೋಧಕ ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.

error: Content is protected !!