ದ್ವಿತೀಯ ಪಿಯು ಮತ್ತು ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶ ಹೆಚ್ಚಳಕ್ಕೆ ಶ್ರಮಿಸಿ: ಜಿ.ಪಂ. ಅಧ್ಯಕ್ಷ ಬಿ.ಎ.ಹರೀಶ್ ಸೂಚನೆ

February 11, 2021

ಮಡಿಕೇರಿ ಫೆ.11 : ಇದೇ ಮೇ ಮತ್ತು ಜೂನ್ ತಿಂಗಳಲ್ಲಿ ದ್ವಿತೀಯ ಪಿಯುಸಿ ಮತ್ತು ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ನಡೆಯಲಿದ್ದು, ಫಲಿತಾಂಶ ಹೆಚ್ಚಳಕ್ಕೆ ಈಗಿನಿಂದಲೇ ಹೆಚ್ಚಿನ ಶ್ರಮ ವಹಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್ ಅವರು ಸೂಚಿಸಿದ್ದಾರೆ.
ನಗರದ ಜಿ.ಪಂ.ಕೆಡಿಪಿ ಸಭಾಂಗಣದಲ್ಲಿ ನಡೆದ ಜಿ.ಪಂ.ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋವಿಡ್-19 ವೈರಸ್‍ನಿಂದಾಗಿ ಪ್ರಸಕ್ತ ವರ್ಷದಲ್ಲಿ ಶಾಲೆಗಳು ಆರಂಭವಾಗದೆ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗಿದೆ. ಸದ್ಯ ಈಗಾಗಲೇ ಎಸ್‍ಎಸ್‍ಎಲ್‍ಸಿ ಮತ್ತು ಪಿಯು ತರಗತಿಗಳು ಆರಂಭವಾಗಿದ್ದು, ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಹೆಚ್ಚಳಕ್ಕೆ ಹೆಚ್ಚಿನ ಮುತುವರ್ಜಿ ವಹಿಸುವಂತೆ ಜಿ.ಪಂ.ಅಧ್ಯಕ್ಷರು ನಿರ್ದೇಶನ ನೀಡಿದರು.
ಖಾಸಗಿ ಶಾಲೆಗಳು ಶುಲ್ಕ ಹೆಚ್ಚಳ ಮಾಡದಂತೆ ಗಮನಹರಿಸಬೇಕು. ಸರ್ಕಾರದ ಮಾರ್ಗದರ್ಶನ ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಬಿ.ಎ.ಹರೀಶ್ ಅವರು ಹೇಳಿದರು.
ಈ ಬಗ್ಗೆ ಮಾಹಿತಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜು ಅವರು ಜನವರಿ, 01 ರಿಂದ ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯು ತರಗತಿಗಳು ಆರಂಭವಾಗಿದೆ. ಫೆಬ್ರವರಿ, 01 ರಿಂದ 9 ನೇ ತರಗತಿ ಆರಂಭವಾಗಿದೆ. ಹಾಗೆಯೇ 6,7 ಮತ್ತು 8 ನೇ ತರಗತಿ ದಿನಬಿಟ್ಟು ದಿನ ವಿದ್ಯಾಗಮನ ಕಾರ್ಯಕ್ರಮ ನಡೆಯುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಆರ್.ಮಂಜುಳಾ ಅವರು ಸರ್ಕಾರಿ ಶಾಲೆಗಳನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು. ಕೋವಿಡ್-19 ನಂತರ ಸರ್ಕಾರಿ ಶಾಲೆಗೆ ಹೆಚ್ಚಿನ ವಿದ್ಯಾರ್ಥಿಗಳು ಸೇರ್ಪಡೆಯಾಗುತ್ತಿದ್ದು, ಕನಿಷ್ಠ ಐದು ಮಕ್ಕಳಿದ್ದರೂ ಸಹ ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು ಎಂದು ಅವರು ಸಲಹೆ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷರಾದ ಲೋಕೇಶ್ ಸಾಗರ್ ಅವರು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆಸಲಾಗುತ್ತಿರುವ ಕಾರ್ಯಕ್ರಮಗಳಿಗೆ ಜಿಲ್ಲಾಡಳಿತ, ಜಿ.ಪಂ., ಸಾರ್ವಜನಿಕ ಶಿಕ್ಷಣ ಇಲಾಖೆ ಹೀಗೆ ಎಲ್ಲರೂ ಕೈಜೋಡಿಸುತ್ತಿದ್ದಾರೆ. ಕನ್ನಡ ಭಾಷಾ ಅಭಿವೃದ್ಧಿ ಸಂಬಂಧಿಸಿದಂತೆ ಕನ್ನಡ ಅಂಕಿಗಳನ್ನು ಕಡ್ಡಾಯವಾಗಿ ಬಳಸುವಂತಾಗಬೇಕು. ಮತ್ತು ತರಗತಿಗಳಲ್ಲಿ ಪ್ರಾಥಮಿಕ ಹಂತದಲ್ಲಿಯೇ ಕನ್ನಡ ಅಂಕಿಗಳನ್ನು ಕಲಿಸಬೇಕು ಎಂದು ಅವರು ಸಲಹೆ ನೀಡಿದರು.
ಜಿ.ಪಂಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಹೊಸಮನೆ ಕವಿತಾ ಪ್ರಭಾಕರ್ ಅವರು ಕಳೆದ ಐದು ವರ್ಷಗಳಿಂದ ಸರ್ಕಾರಿ ಶಾಲೆಯ ಜಾಗಕ್ಕೆ ಆರ್‍ಟಿಸಿ ಮಾಡಿಕೊಳ್ಳುವಂತೆ ತಿಳಿಸುತ್ತಾ ಬರಲಾಗಿದೆ. ಆದರೆ ಈ ಕೆಲಸ ಆಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ ಅವರು ಶಾಲೆಯ ಜಾಗ ಒತ್ತುವರಿಯಾಗಿದ್ದಲ್ಲಿ ಕೂಡಲೇ ತೆರವುಗೊಳಿಸಬೇಕು. ಈ ಬಗ್ಗೆ ಮಾಹಿತಿ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಕ್ಷರ ದಾಸೋಹ ಕಾರ್ಯಕ್ರಮದಡಿ ಮಕ್ಕಳಿಗೆ ಆಹಾರ ಪೂರೈಸಬೇಕು ಎಂದು ಜಿ.ಪಂ.ಅಧ್ಯಕ್ಷರು ಹೇಳಿದರು.
ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣ ಸಂಬಂಧ ಮಾಹಿತಿ ಪಡೆದ ಜಿ.ಪಂ.ಅಧ್ಯಕ್ಷರು ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಬರುತ್ತಿದೆ. ಆದರೂ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ ಎಂದು ಅವರು ಹೇಳಿದರು.
ಕೋವಿಡ್-19 ನಿಯಂತ್ರಣ ಸಂಬಂಧ ಲಸಿಕೆಯನ್ನು ಸರ್ಕಾರದ ನಿರ್ದೇಶನದಂತೆ ಪಡೆಯಬೇಕು. ಇದರಲ್ಲಿ ಶೇ.100 ರಷ್ಟು ಸಾಧನೆ ಮಾಡಬೇಕು ಎಂದು ಜಿ.ಪಂ.ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್ ಅವರು ತಿಳಿಸಿದರು.
ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಅವರು ಕೋವಿಡ್-19 ಎರಡನೇ ಹಂತದ ಲಸಿಕೆ ಅಭಿಯಾನವು ಆರಂಭವಾಗಿದ್ದು, ಕೋವಿಡ್ ಲಸಿಕೆ ಪ್ರಗತಿಯಲ್ಲಿ ಜಿಲ್ಲೆ 7ನೇ ಸ್ಥಾನದಲ್ಲಿದೆ ಎಂದರು.
ಜಿಲ್ಲಾ ಆಯುಷ್ ಅಧಿಕಾರಿ ಶ್ರೀನಿವಾಸ್ ಅವರು ಆಯುಷ್ ಇಲಾಖೆಯಿಂದ ಆಯುಷ್ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಅರಿವು ಮತ್ತು ತರಬೇತಿ ಕಾರ್ಯಕ್ರಮ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ವಸತಿ ಯೋಜನೆ ಸಂಬಂಧಿಸಿದಂತೆ ಮಾಹಿತಿ ನೀಡಿದ ತಾ.ಪಂ.ಇಒ ಲಕ್ಷ್ಮೀ ಅವರು ವಸತಿ ಯೋಜನೆಗೆ ಹಣ ಬಿಡುಗಡೆಯಾಗಿದ್ದು, ಬಾಕಿ ವಸತಿ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ಅವರು ತಿಳಿಸಿದರು.
ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನವಾಗುತ್ತಿದೆ. ಕಸ ವಿಲೇವಾರಿಗೆ ಜಾಗ ಒದಗಿಸಲಾಗಿದೆ. ಯಾವುದಾದರೂ ಗ್ರಾ.ಪಂ.ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಜಾಗ ಬೇಕಿದ್ದಲ್ಲಿ ಒದಗಿಸಲಾಗುವುದು ಎಂದು ಅವರು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಶೇಖರ್ ಅವರು ಈಗಾಗಲೇ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳು ಆರಂಭವಾಗಿದ್ದು, ಹೊಸದಾಗಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶವಿದೆ ಎಂದು ಅವರು ಮಾಹಿತಿ ನೀಡಿದರು.
ಜಿ.ಪಂ.ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗಾಗಿ ಸ್ಮಶಾನಕ್ಕಾಗಿ ಭೂಮಿಗೆ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಇತ್ಯರ್ಥಪಡಿಸಲು ಕ್ರಮವಹಿಸುವಂತೆ ಅವರು ತಿಳಿಸಿದರು.
ಐಟಿಡಿಪಿ ಇಲಾಖಾ ಅಧಿಕಾರಿ ಶಿವಕುಮಾರ್ ಅವರು ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳು ಆರಂಭವಾಗಿದ್ದು, ಶಿಷ್ಯವೇತನಕ್ಕೆ ಕ್ರಮವಹಿಸಲಾಗಿದೆ. ಜಿಲ್ಲೆಯಲ್ಲಿ ಹಾಡಿಗಳು ಸೇರಿದಂತೆ 8,910 ಮನೆಗಳು ನಿರ್ಮಾಣವಾಗಬೇಕಿದೆ. ಆಧಾರ್, ರೇಷನ್ ಕಾರ್ಡ್ ಮತ್ತು ಜಾತಿ ಪ್ರಮಾಣ ಪತ್ರ ಒದಗಿಸಲಾಗುತ್ತಿದೆ. ಜಿಲ್ಲೆಯಲ್ಲಿ 25,822 ಜನರಿಗೆ ಜಾತಿ ಪ್ರಮಾಣ ಪತ್ರ ನೀಡಬೇಕಿದೆ. 14 ಸಾವಿರ ಜನರಿಗೆ ಆಧಾರ್ ಕಾರ್ಡ್ ಮಾಡಿಸಬೇಕಿದೆ ಎಂದು ಅವರು ತಿಳಿಸಿದರು.
ಅರಣ್ಯ ಹಕ್ಕು ಕಾಯ್ದೆಗೆ ಸಂಬಂಧಿಸಿದಂತೆ 405 ಪುನರ್ ಪರಿಶೀಲನೆಗೆ ಬಾಕಿ ಇದ್ದು, 72 ಅರ್ಜಿಗಳು ಇತ್ಯರ್ಥವಾಗಿದೆ. 111 ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಇದೆ ಎಂದು ಶಿವಕುಮಾರ್ ಅವರು ತಿಳಿಸಿದರು.
ಅಬಕಾರಿ ಸಂಬಂಧಿಸಿದಂತೆ ಜಿ.ಪಂ.ಅಧ್ಯಕ್ಷರು ಮಾಹಿತಿ ಪಡೆದರು. ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವರ ವಿರುದ್ಧ ಎಪ್‍ಐಆರ್ ದಾಖಲಿಸಲಾಗಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದರು.
‘ಈ ಸಂದರ್ಭದಲ್ಲಿ ಮಾತನಾಡಿದ ಲೋಕೇಶ್ ಸಾಗರ್ ಅವರು ಕುಶಾಲನಗರದಂತಹ ಹೆದ್ದಾರಿ ಪ್ರದೇಶದಲ್ಲಿ ರಾತ್ರಿ 9 ಗಂಟೆಯ ನಂತರ ಅನ್ನ ಸಿಗುವುದಿಲ್ಲ. ಆದರೆ ಎಣ್ಣೆ ಸಿಗುತ್ತದೆ ಎಂದು ಗಮನ ಸೆಳೆದರು.’
ಜಿ.ಪಂ.ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್ ಅವರು ಪೆಟ್ಟಿಗೆ ಅಂಗಡಿಗಳಲ್ಲಿ ಮದ್ಯ ಮಾರಾಟವಾಗುತ್ತಿದ್ದು, ಇದಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ ನಿಂಗರಾಜು ಅವರು ಅಂಗನವಾಡಿಗಳಿಗೆ ಸಮರ್ಪಕವಾಗಿ ಆಹಾರವನ್ನು ಪೂರೈಸಲಾಗುತ್ತದೆ ಎಂದು ಅವರು ತಿಳಿಸಿದರು.
ಜಿಲ್ಲಾ ವಿಕಲಚೇತನ ಅಧಿಕಾರಿ ಸಂಪತ್ ಕುಮಾರ್ ಅವರು ವಿಕಲಚೇತನರಿಗೆ ತ್ರಿಚಕ್ರ ವಾಹನ ನೀಡುವ ನಿಟ್ಟಿನಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಬಾನಾ ಎಂ.ಶೇಖ್ ಅವರು ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಸದ್ಯ ಆಧಾರ್ ಮತ್ತು ಪಹಣಿ ಜೋಡಣಾ ಕಾರ್ಯ ನಡೆಯುತ್ತಿದ್ದು, ಇದಕ್ಕೆ ಪ್ರತಿಯೊಬ್ಬ ರೈತರು ಕೈಜೋಡಿಸಬೇಕಿದೆ ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಎ.ಭವ್ಯ ಅವರು ಜಿಲ್ಲೆಯಲ್ಲಿ ಪೌತಿಖಾತೆ ಆಂದೋಲನ ಅಷ್ಟಾಗಿ ಯಶಸ್ವಿ ಆಗುತ್ತಿಲ್ಲ. ಆದ್ದರಿಂದ ಆಧಾರ್ ಮತ್ತು ಪಹಣಿ ಜೋಡಣೆ ಜಿಲ್ಲೆಯಲ್ಲಿ ಕಷ್ಟಸಾಧ್ಯವಾಗಲಿದೆ ಎಂದು ಅವರು ಹೇಳಿದರು.
ಒಂದು ಜಿಲ್ಲೆ ಒಂದು ಉತ್ಪನ್ನ ಸಂಬಂಧ ಕೊಡಗು ಜಿಲ್ಲೆಯಲ್ಲಿ ಕಾಫಿ ಬೆಳೆ ಆಯ್ಕೆಯಾಗಿದ್ದು, ಐದು ವರ್ಷದ ಯೋಜನೆಯಾಗಿದೆ. ಇದಕ್ಕೆ ಕೃಷಿಕರು ಸಹಕರಿಸಬೇಕಿದೆ ಎಂದು ಶಬಾನ ಎಂ.ಶೇಖ್ ಅವರು ತಿಳಿಸಿದರು.
ತುಂತುರು ಹನಿ ಯೋಜನೆ ಕಾರ್ಯಕ್ರಮಗಳು, ಟಾರ್ಪಲ್ ಸಮರ್ಪಕವಾಗಿ ವಿತರಿಸಬೇಕು ಎಂದು ಭವ್ಯ ಅವರು ಸಲಹೆ ಮಾಡಿದರು.
ಪಶುಪಾಲನಾ ಇಲಾಖೆ ಉಪ ನಿರ್ದೇಶಕರಾದ ಸುರೇಶ್ ಭಟ್ ಅವರು ರಾಷ್ಟ್ರೀಯ ಜಾನುವಾರು ಮಿಷನ್‍ನಡಿ ಹಂದಿ ಮತ್ತು ಕೋಳಿ ಸಾಕಾಣಿಕೆಗೆ ಅವಕಾಶವಿದೆ ಎಂದು ಅವರು ಹೇಳಿದರು.
ಎ.ಭವ್ಯ ಅವರು ಕೋಳಿ ಮರಿ ಸಾಕಾಣಿಕೆಗೆ ಬೇಡಿಕೆ ಇದ್ದು, ಕೋಳಿ ಮರಿ ವಿತರಣೆಗೆ ಕ್ರಮವಹಿಸಬೇಕು. ಇದರಿಂದ ರೈತರು ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.
ಜಾನುವಾರು ಲಸಿಕಾ ಕಾರ್ಯಕ್ರಮವು ಕಾಲ ಕಾಲಕ್ಕೆ ನೀಡಲಾಗುತ್ತದೆ. ಜಾನುವಾರು ವಿಮಾ ಸೌಲಭ್ಯವಿದ್ದು, ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಪಶುಪಾಲನಾ ಉಪ ನಿರ್ದೇಶಕರು ತಿಳಿಸಿದರು.
ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ಶಶಿಧರ್ ಅವರು ಕಾಳು ಮೆಣಸು ಗಿಡ ವಿತರಣಾ ಕಾರ್ಯಕ್ರಮವಿದ್ದು, ಅಗತ್ಯ ಕ್ರಮವಹಿಸಲಾಗಿದೆ. ಪಾಲಿ ಹೌಸ್ ನಿರ್ಮಾಣಕ್ಕೆ ಶೇ.50 ರಷ್ಟು ಸಹಾಯಧನವಿದೆ. ಜೇನು ಕೃಷಿಯಡಿ ಜೇನು ಪೆಟ್ಟಿಗೆ ವಿತರಣೆ ಮಾಡಲಾಗುತ್ತದೆ ಎಂದರು.
ಹಾಗೆಯೇ ಈ ಬಾರಿ ಫಲಪುಷ್ಪ ಪ್ರದರ್ಶನ ಸದ್ಯಕ್ಕೆ ಇಲ್ಲ. ಪ್ರವಾಸಿಗರಂತೂ ರಾಜಾಸೀಟಿಗೆ ಕೋವಿಡ್ ಪೂರ್ವದಂತೆ ದಿನಕ್ಕೆ 1200 ಜನರು ಆಗಮಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.
ಜಿ.ಪಂ.ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್ ಅವರು ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸುವಂತೆ ಸಲಹೆ ಮಾಡಿದರು.
ಎ.ಭವ್ಯ ಅವರು ಮಾತನಾಡಿ ಕಲಬೆರಕೆ ಜೇನು ಮಾರಾಟವಾಗುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು, ಈ ಸಂಬಂಧ ಗಮನಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಾಮಾಜಿಕ ಅರಣ್ಯದಡಿ ಕೊಡಗು ಜಿಲ್ಲೆಗೆ ಬೇಕಿರುವ ಸಸಿಗಳನ್ನು ರೈತರಿಗೆ ವಿತರಿಸುವಂತೆ ಭವ್ಯ ಅವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಲಹೆ ಮಾಡಿದರು.

ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತು ಜಿಲ್ಲಾ ಅಧ್ಯಕ್ಷರಾದ ಲೋಕೇಶ್ ಸಾಗರ್ ಅವರು ಕೇರಳ ರಾಜ್ಯದಲ್ಲಿ ವರ್ಷವಿಡೀ ಹೈಬ್ರಿಡ್ ಹಲಸು ಬೆಳೆಸಲು ಶ್ರಮಿಸುತ್ತಿದ್ದಾರೆ. ಅದನ್ನು ಕೊಡಗು ಜಿಲ್ಲೆಗೆ ಏಕೆ ಪರಿಚಯಿಸಬಾರದು ಎಂದರು.
ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಕೆ.ಟಿ.ದರ್ಶನ್ ಅವರು ಮೀನು ಮರಿ ವಿತರಿಸಲು ಕ್ರಮವಹಿಸಲಾಗಿದೆ. ಮೀನು ಉತ್ಪಾದನೆಗೆ ಹೆಚ್ಚಿನ ಗಮನಹರಿಸಲಾಗಿದೆ ಎಂದು ಅವರು ಹೇಳಿದರು.
ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎ.ಭವ್ಯ ಅವರು ದಕ್ಷಿಣ ಕೊಡಗಿನ ಬಿರುನಾಣಿ ಸೇರಿದಂತೆ ಹಲವು ಭಾಗಗಳಲ್ಲಿ ಹುಲಿಗಳ ಹಾವಳಿ ಹೆಚ್ಚಾಗಿದ್ದು, ಹುಲಿಗಳನ್ನು ಸೆರೆ ಹಿಡಿಯಬೇಕು. ಕಾಡು ಪ್ರಾಣಿಗಳ ಉಪಟಳ ಕಡಿಮೆ ಮಾಡುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದು ಅವರು ಹೇಳಿದರು.
ಶಾಲೆ ಮತ್ತು ಅಂಗನವಾಡಿಗಳಿಗೆ ಜಲಜೀವನ್ ಮಿಷನ್ ಯೋಜನೆಯಡಿ ಶುದ್ಧ ಕುಡಿಯುವ ನೀರು ಕಲ್ಪಿಸಬೇಕು ಎಂದು ಅವರು ಸೂಚಿಸಿದರು.
ಇದಕ್ಕೆ ಧ್ವನಿಗೂಡಿಸಿದ ಕವಿತಾ ಪ್ರಭಾಕರ್ ಅವರು ಕರಿಕೆ ಭಾಗದ ಹಾಡಿಗಳು ಸೇರಿದಂತೆ ವಿವಿಧ ಕಾಲೋನಿಗಳಿಗೆ ಕುಡಿಯುವ ನೀರು ಒದಗಿಸಲು ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಹಲವು ಬಾರಿ ತಿಳಿಸಿದರೂ ಕಾರ್ಯವಾಗಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದರು.
ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಮದನ್ ಮೋಹನ್ ಅವರು ರಾಜ್ಯ ಹಾಗೂ ಜಿಲ್ಲಾ ಮುಖ್ಯ ರಸ್ತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರಸ್ತೆಗಳನ್ನು ಮಾರ್ಚ್ ಒಳಗೆ ಸರಿಪಡಿಸಲಾಗುವುದು ಎಂದು ಅವರು ತಿಳಿಸಿದರು.
ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಅಶೋಕ್ ಅವರು ಸೌಭಾಗ್ಯ ಯೋಜನೆಯಡಿ ಈಗಾಗಲೇ 3,905 ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. 233 ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದರು.
ಗಂಗಾ ಕಲ್ಯಾಣ ಯೋಜನೆಯಡಿ 32 ಕಾಮಗಾರಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಬಾಕಿ ಇದ್ದು, ಟೆಂಡರ್ ಪ್ರಕ್ರಿಯೆಯಲ್ಲಿದೆ ಎಂದು ಅವರು ತಿಳಿಸಿದರು.
ಜಿ.ಪಂ.ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್ ಅವರು ಗರ್ವಾಲೆ, ಸೂರ್ಲಬ್ಬಿ ಸೇರಿದಂತೆ ಹಲವು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಅವರು ತಿಳಿಸಿದರು.
ಭವ್ಯ ಅವರು ಮಾತನಾಡಿ ಜಿಲ್ಲೆಯಲ್ಲಿ ಹಳೇ ವಿದ್ಯುತ್ ಕಂಬಗಳು ಹಾಗೂ ಟ್ರಾನ್ಸ್‍ಫಾರ್ಮ್‍ಗಳನ್ನು ಬದಲಿಸುವಂತೆ ಸಲಹೆ ಮಾಡಿದರು.
ಆಹಾರ ಇಲಾಖೆ ಉಪ ನಿರ್ದೇಶಕರಾದ ಗೌರವ ಕುಮಾರ್ ಶೆಟ್ಟಿ ಅವರು ಜಿಲ್ಲೆಯಲ್ಲಿ ಈಗಾಗಲೇ 14,200 ಕ್ವಿಂಟಾಲ್ ಭತ್ತ ಸಂಗ್ರಹವಾಗಿದೆ. ಈ ಬಾರಿ 24 ಸಾವಿರ ಕ್ವಿಂಟಾಲ್ ಭತ್ತ ಸಂಗ್ರಹವಾಗುವ ನಿರೀಕ್ಷೆ ಇದೆ. ಹೊಸದಾಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಕೆಎಸ್‍ಆರ್‍ಟಿಸಿ ಬಸ್ ಸಂಪರ್ಕ ಕಲ್ಪಿಸುವ ಸಂಬಂಧ ಜಿ.ಪಂ.ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು ಗಮನ ಸೆಳೆದರು.
ಈ ಬಗ್ಗೆ ಮಾತನಾಡಿದ ಎ.ಭವ್ಯ ಅವರು ಬಿ.ಶೆಟ್ಟಿಗೇರಿ, ಬಿ.ಬಾಡಗ ಗ್ರಾಮಗಳಿಗೆ ಕೆಎಸ್‍ಆರ್‍ಟಿಸಿ ಬಸ್ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.
ಮಡಿಕೇರಿ-ಚೆಟ್ಟಳ್ಳಿ-ಸಿದ್ದಾಪುರ ಮಾರ್ಗ ಬೆಳಗ್ಗೆ 7 ರಿಂದ 9 ಗಂಟೆ ಅವಧಿಯಲ್ಲಿ ಬಸ್ ಇಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ,. ಆದ್ದರಿಂದ ಬಸ್ ಕಲ್ಪಿಸಬೇಕು ಎಂದು ಜಿ.ಪಂ.ಅಧ್ಯಕ್ಷರು ಸೂಚಿಸಿದರು.
ಹಾಗೆಯೇ ಕವಿತಾ ಪ್ರಭಾಕರ್ ಅವರು ನಾಡಿನ ಜೀವನದಿ ಉಗಮಸ್ಥಾನ ತಲಕಾವೇರಿ ಬಸ್ ಸೌಲಭ್ಯ ಇಲ್ಲದೆ ಭಕ್ತಾಧಿಗಳಿಗೆ ತೊಂದರೆಯಾಗಿದೆ ಎಂದು ಅವರು ಗಮನ ಸೆಳೆದರು.
ಈ ಬಗ್ಗೆ ಮಾತನಾಡಿದ ಪ್ರಾದೇಶಿಕ ಸಾರಿಗೆ ಇಲಾಖೆಯ ರೀಟಾ ಅವರು ಲಾಕ್‍ಡೌನ್ ಮೊದಲು ಜಿಲ್ಲೆಯಲ್ಲಿ 149 ಬಸ್‍ಗಳು ಸಂಚರಿಸುತ್ತಿದ್ದವು. ಈಗ 86 ಬಸ್‍ಗಳು ಮಾತ್ರ ಸಂಚರಿಸುತ್ತಿವೆ. ಸದ್ಯ ಕೋವಿಡ್-19 ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆ ಬಸ್‍ಗಳ ಸಂಖ್ಯೆ ಹೆಚ್ಚಳವಾಗಲಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯ ಕೆಲವು ಭಾಗಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಬಾಗಿಲು ಮುಚ್ಚಿವೆ ಎಂದು ಕವಿತಾ ಪ್ರಭಾಕರ್ ಹಾಗೂ ಭವ್ಯ ಅವರು ಗಮನ ಸೆಳೆದರು.
ಕೂಡಿಗೆ ಡೈರಿ ಅಧಿಕಾರಿ ಅವರು ಮಾತನಾಡಿ ಜಿಲ್ಲೆಯಲ್ಲಿ ದಿನಕ್ಕೆ 15,576 ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, 31 ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಒಂದು ಸಂಘದಲ್ಲಿ ಕನಿಷ್ಠ 100 ಮಂದಿ ಸದಸ್ಯತ್ವ ಇರಬೇಕು. 4 ಕಿ.ಮೀ ವ್ಯಾಪ್ತಿ ಒಳಗೆ ಒಂದು ಸಂಘ ರಚಿಸಬಹುದಾಗಿದೆ ಎಂದು ಅವರು ಮಾಹಿತಿ ನೀಡಿದರು.
ಜಿ.ಪಂ.ಯೋಜನಾ ನಿರ್ದೇಶಕರಾದ ರಾಜಗೋಪಾಲ್, ಉಪ ಕಾರ್ಯದರ್ಶಿ ಶ್ರೀಕಂಠಮೂರ್ತಿ, ಮುಖ್ಯ ಲೆಕ್ಕಾಧಿಕಾರಿ ಬಿ.ಬಿ.ಪುಷ್ಪಾವತಿ, ಜಿ.ಪಂ.ಇಇ ಶ್ರೀಕಂಠಯ್ಯ ನಾನಾ ಇಲಾಖೆ ಅಧಿಕಾರಿಗಳು ಇತರರು ಇದ್ದರು.

error: Content is protected !!