“ನಾಡಪೆದ ಆಶಾ” ಕೊಡವ ಚಿತ್ರದ ಪೋಸ್ಟರ್ ಅನಾವರಣ : ಫೆ.15 ರಿಂದ ಚಿತ್ರೀಕರಣ ಆರಂಭ : ಮಹಿಳಾ ಪ್ರಧಾನ ಕಥಾವಸ್ತುವಿಗೆ ಎಂಎಲ್‍ಸಿ ವೀಣಾಅಚ್ಚಯ್ಯ ಮೆಚ್ಚುಗೆ

February 12, 2021

ಮಡಿಕೇರಿ ಫೆ.12 : ಸೇನೆ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತಗಳಲ್ಲಿ ಕೊಡಗಿನ ಪ್ರತಿಭೆಗಳು ವಿಶ್ವದ ಗಮನ ಸೆಳೆದಂತೆ ಚಲನಚಿತ್ರ ರಂಗದಲ್ಲೂ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಬೆಳ್ಳಿತೆರೆ ಮತ್ತು ಕಿರುತೆರೆಯಲ್ಲಿ ಅನೇಕ ಪ್ರತಿಭೆಗಳು ಖ್ಯಾತಿಯನ್ನು ಗಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೊಡವ ಚಲನಚಿತ್ರ ನಿರ್ಮಾಣದ ಬಗ್ಗೆಯೂ ಆಸಕ್ತಿ ಹೆಚ್ಚಾಗುತ್ತಿದೆ. ಯಶಸ್ವೀ 110ಕ್ಕೂ ಹೆಚ್ಚು ಪ್ರದರ್ಶನ ಕಂಡ ಕೊಡವ ಭಾಷೆಯ “ಕೊಡಗ್‍ರ ಸಿಪಾಯಿ” ಚಲನಚಿತ್ರ ತಂಡದಿಂದ ಮತ್ತೊಂದು ವಿಭಿನ್ನ ಕಥಾ ಹಂದರದ ಸಾಮಾಜಿಕ ಕಳಕಳಿಯ ಸಿನಿಮಾ ತೆರೆಗೆ ಬರುತ್ತಿದೆ.
ಹಿರಿಯ ಸಾಹಿತಿ ನಾಗೇಶ್ ಕಾಲೂರು ಅವರು ಬರೆದಿರುವ, ಕೊಡವ ಮಕ್ಕಡ ಕೂಟ ಪ್ರಕಟಿಸಿರುವ “ನಾಡಪೆದ ಆಶಾ” ಕಾದಂಬರಿ ಚಲನಚಿತ್ರವಾಗುತ್ತಿದ್ದು, ನಿರ್ದೇಶಕ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ನಿರ್ದೇಶಿಸುತ್ತಿದ್ದಾರೆ. ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ನಾಯಕ ನಟನಾಗಿ ಹಾಗೂ ಪ್ರಮುಖ ಪಾತ್ರದಲ್ಲಿ ರಂಗ ಕಲಾವಿದೆ ಅಡ್ಡಂಡ ಅನಿತಾ ಕಾರ್ಯಪ್ಪ ಅವರು ಅಭಿನಯಿಸುತ್ತಿರುವ ಈ ಕೊಡವ ಚಲನಚಿತ್ರದ ಚಿತ್ರೀಕರಣಕ್ಕೆ ಫೆ.15 ರಂದು ಚಾಲನೆ ನೀಡಲಾಗುತ್ತಿದೆ.
ಚಿತ್ರದ ಪೋಸ್ಟರ್ ನ್ನು ವಿಧಾನ ಪರಿಷತ್ ಸದಸ್ಯರಾದ ಶಾಂತೆಯಂಡ ವೀಣಾ ಅಚ್ಚಯ್ಯ ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ಅನಾವರಣಗೊಳಿಸಿದರು. ನಂತರ ಮಾತನಾಡಿದ ಅವರು ಇಂದು ಹೆಣ್ಣು ತನ್ನ ಕುಟುಂಬ ಮಾತ್ರವಲ್ಲದೆ ಸಾಮಾಜಿಕ ಸೇವೆಯಲ್ಲೂ ತೊಡಗಿಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರುತ್ತಿರುವುದು ಹೆಮ್ಮೆಯ ವಿಚಾರವೆಂದರು.
ಯಶಸ್ವೀ ಜೀವನಕ್ಕಾಗಿ ಮನೆಯ ಕಷ್ಟಗಳನ್ನು ಎದುರಿಸಿಕೊಂಡು ಹಲವು ಅಡೆತಡೆಗಳ ನಡುವೆ ಸಮಾಜಿಕ ಮತ್ತು ರಾಜಕೀಯವಾಗಿಯೂ ಮಹಿಳೆ ಬೆಳವಣಿಗೆಯನ್ನು ಕಾಣುತ್ತಿದ್ದಾಳೆ. ಮಹಿಳಾ ಪ್ರಧಾನ ಕಥಾವಸ್ತು ಇರುವ “ನಾಡಪೆದ ಆಶಾ” ಚಲನಚಿತ್ರಕ್ಕೆ ಎಲ್ಲರ ಪ್ರೋತ್ಸಾಹದ ಅಗತ್ಯವಿದೆ ಎಂದರು.
ಚಿತ್ರದ ನಿರ್ದೇಶಕ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಮಾತನಾಡಿ ಚಲನಚಿತ್ರ ವೀಕ್ಷಣೆಯೊಂದಿಗೆ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು. ಒಂದು ಪುಸ್ತಕಕ್ಕೆ ಸಾವಿರ ಕಥೆಗಳನ್ನು ಹೇಳುವ ಶಕ್ತಿ ಇರುತ್ತದೆ. ಹಿರಿಯ ಸಾಹಿತಿ ನಾಗೇಶ್ ಕಾಲೂರು ಅವರು ರಚಿಸಿರುವ ಹೆಣ್ಣೊಬ್ಬಳ ಸಾಮಾಜಿಕ ಕಳಕಳಿಯ “ನಾಡಪೆದ ಆಶಾ” ಕಾದಂಬರಿಯಲ್ಲಿ ಇದೇ ಸತ್ವವಿದ್ದು, “ಕೊಡಗರ್ ಸಿಪಾಯಿ”ಯಂತೆ ಈ ಚಿತ್ರ ಕೂಡ 100 ದಿನ ಪ್ರದರ್ಶನಗೊಳ್ಳುವ ವಿಶ್ವಾಸವಿದೆ ಎಂದರು. ವರ್ಷಕ್ಕೊಂದು ಕೊಡವ ಸಿನಿಮಾವನ್ನು ನಿರ್ದೇಶಿಸುವ ಮೂಲಕ ಭಾಷೆಯ ಬೆಳವಣಿಗೆಗೆ ಪ್ರೋತ್ಸಾಹ ನೀಡುವುದಾಗಿ ಪ್ರಕಾಶ್ ಕಾರ್ಯಪ್ಪ ತಿಳಿಸಿದರು.
ಫೆ.15 ರಂದು ಬೆಳಗ್ಗೆ 10.30 ಗಂಟೆಗೆ ಮೂರ್ನಾಡುವಿನ ಕೋಡಂಬೂರು ಗ್ರಾಮದ ಶ್ರೀಭದ್ರಕಾಳಿ ದೇವಾಲಯದ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಸದಸ್ಯರಾದ ಮಂಡೇಪಂಡ ಸುನಿಲ್ ಸುಬ್ರಮಣಿ ಹಾಗೂ ರಂಗಾಯಣದ ನಿರ್ದೇಶಕ, ಕೊಡಗಿನ ಖ್ಯಾತ ರಂಗ ಕರ್ಮಿ, ಸಾಹಿತಿ, ಅಡ್ಡಂಡ ಕಾರ್ಯಪ್ಪ ಅವರು ಚಾಲನೆ ನೀಡಲಿದ್ದಾರೆ.
“VK3 PICTURES” ಸಂಸ್ಥೆಯ ಮುಖ್ಯಸ್ಥರು ಹಾಗೂ ನಿರ್ಮಾಪಕಿ ಈರಮಂಡ ಹರಿಣಿ ವಿಜಯ್ ಉತ್ತಯ್ಯ ಹಾಗೂ ಈರಮಂಡ ಪೊನ್ನಮ್ಮ ಉತ್ತಯ್ಯ, ನಾಡ ಪೆದ ಆಶಾ ಕಾದಂಬರಿ ರಚನೆಕಾರ ಹಿರಿಯ ಸಾಹಿತಿ ನಾಗೇಶ್ ಕಾಲೂರು, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಹಾಗೂ ಚಿತ್ರದ ಕಾರ್ಯಕಾರಿ ನಿರ್ಮಾಪಕ ಬೊಳ್ಳಜಿರ ಬಿ.ಅಯ್ಯಪ್ಪ, ಕೋಡಂಬೂರು ಶ್ರೀಭದ್ರಕಾಳಿ ದೇವಾಲಯದ ಅಧ್ಯಕ್ಷ ಹಾಗೂ ಗ್ರಾ.ಪಂ ಸದಸ್ಯ ಮೂಡೇರ ಅಶೋಕ್ ಅಯ್ಯಪ್ಪ, ಕೊಯವ ಸಮಾಜದ ಅಧ್ಯಕ್ಷ ಜಿಲ್ಲಂಡ ದಾದು ಮಾದಪ್ಪ, ಸಮಾಜದ ಉಪಾಧ್ಯಕ್ಷ ಹಾಗೂ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಮೇಚಿರ ಸುಭಾಷ್ ನಾಣಯ್ಯ ಹಾಗೂ ಚಿತ್ರದಲ್ಲಿ ಅಭಿನಯಿಸುತ್ತಿರುವ ಎಲ್ಲಾ ಕಲಾವಿದರುಗಳು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಾಶ್ ಕಾರ್ಯಪ್ಪ ಮಾಹಿತಿ ನೀಡಿದರು.
“VK3 PICTURES” ಸಂಸ್ಥೆಯ ಪ್ರಮುಖರಾದ ಈರಮಂಡ ಪೊನ್ನಮ್ಮ ಉತ್ತಯ್ಯ ಮಾತನಾಡಿ ಕಳೆದ 5 ವರ್ಷಗಳಿಂದ ಸಿನಿಮಾ ನಿರ್ಮಾಣ ಮಾಡಬೇಕೆನ್ನುವ ಕನಸು ಈಗ ನನಸಾಗುತ್ತಿದ್ದು, ಖ್ಯಾತ ನಿರ್ದೇಶಕ ಎ.ಟಿ.ರಘು ಅವರ ಕೊಡವ ಧಾರಾವಾಹಿ ಹಾಗೂ ಕನ್ನಡದ ಮೂರು ಸಿನಿಮಾಗಳಲ್ಲಿ ನಟನೆ ಮಾಡಿರುವ ತಮ್ಮ ಸೊಸೆಯೇ ಚಿತ್ರ ನಿರ್ಮಿಸುತ್ತಿರುವುದು ಹರ್ಷದಾಯಕವೆಂದರು. ಹೊಣ್ಣೊಬ್ಬಳ ಜೀವನದ ಕಷ್ಟಸುಖಗಳನ್ನು ತೆರೆಯ ಮೇಲೆ ಮನೋಜ್ಞವಾಗಿ ಬಿಂಬಿಸಲಾಗುವುದು ಎಂದು ತಿಳಿಸಿದರು.
“ನಾಡಪೆದ ಆಶಾ” ಚಿತ್ರ ನಿರ್ಮಾಪಕರಾದ ಈರಮಂಡ ಹರಿಣಿ ವಿಜಯ್ ಉತ್ತಯ್ಯ ಅವರು ಮಾತನಾಡಿ ಮಹಿಳಾ ಪ್ರಧಾನವಾದ ವಿಭಿನ್ನ ಕಥಾವಸ್ತುವಿನ ಚಿತ್ರ ನಿರ್ಮಿಸುತ್ತಿರುವುದು ಹೆಮ್ಮೆ ಎನಿಸಿದೆ ಎಂದರು. ಮುಂದಿನ ದಿನಗಳಲ್ಲಿ ತಮ್ಮ ಸಂಸ್ಥೆಯ ಮೂಲಕ ಮತ್ತಷ್ಟು ಸಿನಿಮಾ ಹಾಗೂ ಆಲ್ಬಂಗಳನ್ನು ಹೊರ ತರುವುದಾಗಿ ಹೇಳಿದರು.
ಸಾಹಿತಿ ಕಾಲೂರು ನಾಗೇಶ್ ಅವರು ಮಾತನಾಡಿ ತಮ್ಮ ಮೊದಲ ಕಾದಂಬರಿಯೇ ಚಲಚಿತ್ರವಾಗುತ್ತಿರುವುದು ಸಂತಸ ತಂದಿದೆ ಎಂದರು. ಕಾವೇರಿ ಹೆಸರಿನ ಪಾತ್ರವನ್ನು ಪ್ರಮುಖವಾಗಿಸಿಕೊಂಡು ಗ್ರಾಮೀಣ ಮಹಿಳೆಯ ಕಷ್ಟಸುಖಗಳನ್ನು ಪ್ರತಿಬಿಂಬಿಸುವ ಪ್ರಯತ್ನ ಮಾಡಲಾಗಿದೆ. ಅಂಗನವಾಡಿ ಕಾರ್ಯಕರ್ತೆಯೊಬ್ಬಳು ಸಾಮಾಜಿಕ ಕಳಕಳಿಯ ಮೂಲಕ ಗ್ರಾಮಕ್ಕೆ ಕೀರ್ತಿ ತರುವ ಕಥಾ ವಸ್ತು ಕಾದಂಬರಿಯಲ್ಲಿದೆ ಎಂದರು.
ಚಿತ್ರದ ನಾಯಕ ನಟ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಮಾತನಾಡಿ ಯೋಧನ ಪಾತ್ರ ದೊರೆತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. “ನಾಡಪೆದ ಆಶಾ” ಚಿತ್ರ ಯಶಸ್ವಿ ಪ್ರದರ್ಶನ ಕಾಣಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚಿತ್ರಕಥೆ ಮತ್ತು ಸಂಭಾಷಣೆ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ, ಸಂಗೀತ ವಿಠಲ್ ರಂಗಧೋಳ್, ಛಾಯಗ್ರಾಹಕರಾಗಿ ಪ್ರದೀಪ್ ಆರ್ಯನ್, ಸಾಹಿತ್ಯ ಆಪಾಡಂಡ ಜಗ್ಗ ಮೊಣ್ಣಪ್ಪ, ಕಾರ್ಯಕಾರಿ ನಿರ್ಮಾಪಕರಾಗಿ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ, ಸಹ ನಿರ್ದೇಶಕರಾಗಿ ನಾಗರಾಜು ನೀಲ್ ಹಾಗೂ ಇತಿಹಾಸ್ ಶಂಕರ್, ಸಂಕಲನ ಆನಂದ್ ಅನಿ, ವರ್ಣಸಂಸ್ಕರಣರಾಗಿ ನಿಖಿಲ್ ಕಾರ್ಯಪ್ಪ, vfx ಸುಶ್ರುತ್ ಭಟ್ ಕಾರ್ಯನಿರ್ವಹಿಸುತ್ತಿದ್ದಾರೆ.
ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ, ವಾಂಚಿರ ವಿಠಲ್ ನಾಣಯ್ಯ, ತಾತಂಡ ಪ್ರಭಾ ನಾಣಯ್ಯ, ಚೆರುವಲಂಡ ಸುಜುಲ ನಾಣಯ್ಯ, ಬೊಳ್ಳಜಿರ ಬಿ.ಅಯ್ಯಪ್ಪ, ನೆಲ್ಲಚಂಡ ರಿಷಿ ಪೂವಮ್ಮ, ಅಜ್ಜಿಕುಟ್ಟಿರ ಸುಬ್ಬಯ್ಯ, ತೇಲಪಂಡ ಪವನ್ ತಮ್ಮಯ್ಯ, ಕೊಟ್ಟುಕತ್ತಿರ ಆರ್ಯ ದೇವಯ್ಯ, ಬೊಳ್ಳಜಿರ ಯಮುನಾ ಅಯ್ಯಪ್ಪ, ಈರಮಂಡ ಕೇಸರಿ ಬೋಜಮ್ಮ, ವಿಜಯ್, ಹರಿಣಿ, ಕುಶಿ ಕಾವೇರಮ್ಮ ನಟಿಸುತ್ತಿದ್ದಾರೆ. ಸುಮಾರು 50 ಕ್ಕೂ ಹೆಚ್ಚು ನಟರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಹೊಸ ಪ್ರತಿಭೆಗಳಿಗೂ ಅವಕಾಶ ಕಲ್ಪಿಸಲಾಗಿದೆ ಎಂದು ಚಿತ್ರ ತಂಡ ತಿಳಿಸಿದೆ.

error: Content is protected !!