ಫೆ.16 ರಂದು ಕೊಡಗು ಪ್ರೆಸ್ ಕ್ಲಬ್ನ 21ನೇ ವಾರ್ಷಿಕೋತ್ಸವ

ಮಡಿಕೇರಿ ಫೆ.12 : ಕೊಡಗು ಪ್ರೆಸ್ ಕ್ಲಬ್ 21ನೇ ವಾರ್ಷಿಕೋತ್ಸವ ಫೆ.16 ರಂದು ಕುಶಾಲನಗರದ ನಿಸರ್ಗ ಟೂರಿಸ್ಟ್ ಸೆಂಟರ್ನಲ್ಲಿ ಆಯೋಜಿಸಲಾಗಿದೆ ಎಂದು ಕ್ಲಬ್ ಪ್ರಧಾನ ಕಾರ್ಯದರ್ಶಿ ಆರ್. ಸುಬ್ರಮಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂದು ಸಂಜೆ 6.30 ಕ್ಕೆ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅಧ್ಯಕ್ಷತೆಯಲ್ಲಿನಡೆಯುವ ಸಭಾ ಕಾರ್ಯಕ್ರಮವನ್ನು ಶಕ್ತಿ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಉದ್ಘಾಟಿಸಲಿದ್ದಾರೆ. ಮುಖ್ಯಅತಿಥಿಯಾಗಿ ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಪಾಲ್ಗೊಳ್ಳಲಿದ್ದಾರೆ. ಕೆ.ಬಿ. ಮಹಾಂತೇಶ್ ಸ್ಮರಣಾರ್ಥ ನೀಡುವ ಅತ್ಯುತ್ತಮ ಪರಿಣಾಮಕಾರಿ ವರದಿ (2019) ಪ್ರಶಸ್ತಿಯನ್ನು ಶಕ್ತಿ ಉಪಸಂಪಾದಕ ಕಾಯಪಂಡ ಶಶಿ ಸೋಮಯ್ಯ ಅವರಿಗೆ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯಿಂದ 5 ಸಾವಿರ ರೂಪಾಯಿ ನೀಡಲಾಗುತ್ತದೆ.
ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ಹಾಗೂ ಪ್ರಶಸ್ತಿಗೆ ಭಾಜನರಾದ 19 ಪತ್ರಕರ್ತರನ್ನು ಸನ್ಮಾನಿಸಲಾಗುತ್ತದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಅತ್ಯುತ್ತಮ ವರದಿಗೆ ಪ್ರಶಸ್ತಿ ಸ್ವೀಕರಿಸಿರುವ ಪುತ್ತರೀರ ಕರುಣ್ ಕಾಳಯ್ಯ, ಕೊಡಗು ಜಿಲ್ಲಾ ಪತ್ರಕರ್ತರ ಸಂಘದಿಂದ ಪ್ರಶಸ್ತಿಗೆ ಭಾಜನರಾಗಿರುವ ಎಚ್.ಕೆ. ಜಗದೀಶ್, ನವೀನ್ ಸುವರ್ಣ, ಎಚ್.ಟಿ. ಅನಿಲ್, ಸುನೀಲ್ ಪೊನ್ನೆಟ್ಟಿ, ಸಣ್ಣುವಂಡ ಕಿಶೋರ್ ನಾಚಪ್ಪ, ಕುಡೆಕಲ್ ಸಂತೋಷ್, ಹಿರಿಕರ ರವಿ, ವಿಘ್ನೇಶ್ ಎಂ. ಭೂತನಕಾಡು, ಆರ್. ಸುಬ್ರಮಣಿ, ಎಂ.ಎನ್. ನಾಸಿರ್, ಕೆ.ಎ. ಆದಿತ್ಯ, ರಜಿತಾ ಕಾರ್ಯಪ್ಪ, ಸತೀಶ್ ನಾರಾಯಣ ಅವರನ್ನು ಸನ್ಮಾನಿಸಲಾಗುತ್ತದೆ.
ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಆಶ್ರಯ ನೀಡಿದ ವಿ.ವಿ. ಅರುಣ್ಕುಮಾರ್, ಕೊಡಗು ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಮಾಧ್ಯಮ ಕ್ಷೇತ್ರದಿಂದ ಸನ್ಮಾನಕ್ಕೆ ಭಾಜನರಾದ ಎಚ್.ಆರ್. ಹರೀಶ್ ಕುಮಾರ್, ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪತ್ರಕರ್ತರಿಗೆ ಹೆಚ್ಚಿನ ಅವಕಾಶ ಕಲ್ಪಿಸಿಕೊಟ್ಟ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ವೀರಶೈವ ಲಿಂಗಾಯಿತ ಸಂಘಟನಾ ವೇದಿಕೆ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್. ಮಹೇಶ್, ಲೈಕ್ ಆ್ಯಪ್ನಲ್ಲಿ ದಾಖಲೆ ನಿರ್ಮಿಸಿರುವ ವಿಶ್ವ ಕುಂಬೂರು ಅವರನ್ನು ಸನ್ಮಾನಿಸಲಾಗುತ್ತದೆ.
ಮಹಾಸಭೆ : ಕೊಡಗು ಪ್ರೆಸ್ ಕ್ಲಬ್ ವಾರ್ಷಿಕ ಮಹಾಸಭೆ ಫೆ.16 ರಂದು ಸಂಜೆ 5 ಗಂಟೆಗೆ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅಧ್ಯಕ್ಷತೆಯಲ್ಲಿ ಕುಶಾಲನಗರದ ನಿಸರ್ಗ ಟೂರಿಸ್ಟ್ ಸೆಂಟರ್ನಲ್ಲಿ ನಡೆಯಲಿದೆ ಎಂದು ಪ್ರಧಾನ ಕಾರ್ಯದರ್ಶಿ ಆರ್. ಸುಬ್ರಮಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
