ಕೊಡವ ಹಾಕಿ ಹಬ್ಬಕ್ಕೆ 5 ಕೋಟಿ ರೂ. : ಬಜೆಟ್‍ನಲ್ಲಿ ಮೀಸಲಿಡಲು ಒತ್ತಾಯ

February 12, 2021

ಮಡಿಕೇರಿ ಫೆ.12 : ಕೊಡವ ಹಾಕಿ ಹಬ್ಬ, ಕೊಡವ ಸಂಸ್ಕøತಿ, ಕೊಡವ ಪರಂಪರೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರತಿವರ್ಷ ನಡೆಯುವ ಕೊಡವ ಕೌಟುಂಬಿಕ ಹಾಕಿ ಉತ್ಸವಕ್ಕೆ ರಾಜ್ಯ ಸರ್ಕಾರದ ಬಜೆಟ್‍ನಲ್ಲಿ ಕನಿಷ್ಠ 5 ಕೋಟಿ ರೂಪಾಯಿಗಳನ್ನು ಪ್ರತಿವರ್ಷ ಮೀಸಲಿಡಬೇಕೆಂದು ಸರ್ಕಾರದ ಗಮನ ಸೆಳೆಯುವಂತೆ ಒತ್ತಾಯಿಸಿ ನಾಪೋಕ್ಲು ಕೊಡವ ಸಮಾಜ ಹಾಗೂ ವಿವಿಧ ಕೊಡವ ಕುಟುಂಬಗಳು ಜಿಲ್ಲೆಯ ಶಾಸಕರುಗಳನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿವೆ.
ಕೊಡವ ಕೌಟುಂಬಿಕ ಹಾಕಿ ಹಬ್ಬ ವಿಶ್ವ ದಾಖಲೆಯನ್ನು ಬರೆದಿದೆ. ಪ್ರಪಂಚದಾದ್ಯಂತ ಕ್ರೀಡಾಭಿಮಾನಿಗಳ ಗಮನ ಸೆಳೆದಿರುವ ಈ ಕ್ರೀಡಾಕೂಟ ದೇಶಕ್ಕೆ ಅನೇಕ ಮಂದಿ ಕ್ರೀಡಾಪಟುಗಳನ್ನು ಕೊಡುಗೆಯಾಗಿ ನೀಡಿದೆ.
ಹಾಕಿ ರಾಷ್ಟ್ರೀಯ ಕ್ರೀಡೆಯಾಗಿದ್ದು, ಕೊಡವ ಕುಟುಂಬಗಳ ನಡುವೆ ನಡೆಯುತ್ತಿರುವ ಅಂತರ್ ಕುಟುಂಬ ಹಾಕಿ ಹಬ್ಬ ಹಾಕಿ ಕ್ರೀಡೆಗೆ ಪ್ರೋತ್ಸಾಹ ನೀಡುವಲ್ಲಿ ಯಶಸ್ವಿಯಾಗಿದೆ. 2018 ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ನಡೆದ ಕುಲ್ಲೇಟಿರ ಹಾಕಿ ಹಬ್ಬದಲ್ಲಿ 334 ತಂಡಗಳು ಭಾಗವಹಿಸಿದ್ದು, ಇದು ಸರ್ವಕಾಲಿಕ ದಾಖಲೆಯಾಗಿದೆ.
ಈ ಪುಟ್ಟ ಜಿಲ್ಲೆಯಿಂದ ಸುಮಾರು 500 ಕ್ಕೂ ಹೆಚ್ಚು ಮಂದಿ ರಾಜ್ಯ ಮತ್ತು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ 100 ಕ್ಕೂ ಹೆಚ್ಚು ಮಂದಿ ಪುರುಷ ಹಾಗೂ ಮಹಿಳಾ ಹಾಕಿ ಪಟುಗಳು ಹೊರ ಹೊಮ್ಮಿದ್ದಾರೆ.
ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿಯು ಈಗಾಗಲೇ ಲಿಮ್ಕಾ ಬುಕ್ ಆಫ್ ರೆಕಾಡ್ರ್ಸ್‍ನಲ್ಲಿ ದಾಖಲಾಗಿದ್ದು, ಗಿನ್ನಿಸ್ ಬುಕ್ ಆಫ್ ರೆಕಾಡ್ರ್ಸ್‍ನಲ್ಲಿ ದಾಖಲಾಗಬೇಕಾಗಿದೆ. ಕಳೆದ 21 ವರ್ಷಗಳಿಂದ ಕೊಡಗಿನಲ್ಲಿ ನಡೆಯುತ್ತಿರುವ ಕೊಡವ ಹಾಕಿ ಹಬ್ಬದಲ್ಲಿ ಪ್ರತಿವರ್ಷ 6 ಸಾವಿರಕ್ಕೂ ಅಧಿಕ ಆಟಗಾರರು ಪಾಲ್ಗೊಳ್ಳುತ್ತಿದ್ದು, ಈ ಆಟಗಾರರಲ್ಲಿ ಪ್ರತಿಭಾವಂತರು ಈಗಾಗಲೇ ರಾಜ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಆಟವಾಡಿ ರಾಜ್ಯಕ್ಕೆ ಹಾಗೂ ದೇಶಕ್ಕೆ ಕೀರ್ತಿ ತಂದಿದ್ದಾರೆ. ಈ ಕ್ರೀಡಾಪಟುಗಳು ದೇಶದ ಕ್ರೀಡಾ ಕ್ಷೇತ್ರಕ್ಕೆ ದೊಡ್ಡ ಆಸ್ತಿಯಾಗಿದ್ದಾರೆ.
ಸುಮಾರು ಒಂದು ತಿಂಗಳ ಕಾಲ ನಡೆಯುವ ಕೊಡವ ಹಾಕಿ ಹಬ್ಬಕ್ಕೆ ಕೋಟ್ಯಾಂತರ ರೂಪಾಯಿ ಖರ್ಚಾಗುತ್ತಿದೆ. ಆದ್ದರಿಂದ ಕೊಡವ ಹಾಕಿ ಹಬ್ಬ, ಕೊಡವ ಸಂಸ್ಕøತಿ, ಪರಂಪರೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರತಿವರ್ಷದ ರಾಜ್ಯ ಸರ್ಕಾರದ ಪ್ರತಿವರ್ಷದ ಬಜೆಟ್‍ನಲ್ಲಿ ಕನಿಷ್ಠ 5 ಕೋಟಿ ರೂಪಾಯಿಗಳನ್ನು ಮೀಸಲಿಡುವ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕೆಂದು ಪ್ರಮುಖರು ಶಾಸಕರಲ್ಲಿ ಮನವಿ ಮಾಡಿಕೊಂಡರು.
ನಾಪೋಕ್ಲು ಗ್ರಾಮದಲ್ಲಿ ಅತೀ ಹೆಚ್ಚು ಬಾರಿ ಕೊಡವ ಹಾಕಿ ಹಬ್ಬ ನಡೆದಿದೆ. ಮುಂದೆ ನಾಲ್ಕು ವರ್ಷಗಳ ಕಾಲ ಇಲ್ಲಿಯೇ ಹಾಕಿ ಉತ್ಸವ ನಡೆಯಲಿದ್ದು, ಗ್ರಾಮದಲ್ಲಿ ಒಂದು ಉತ್ತಮವಾದ ಬೃಹತ್ ಕ್ರೀಡಾಂಗಣ ನಿರ್ಮಿಸಲು ಕೂಡ ಈ ವರ್ಷದ ಬಜೆಟ್‍ನಲ್ಲಿ ಹಣ ಮೀಸಲಿಡಬೇಕೆಂದು ಕೋರಿಕೊಂಡರು.
ಮನವಿಗೆ ಸ್ಪಂದಿಸಿದ ಶಾಸಕರುಗಳಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರುಗಳಾದ ಸುನಿಲ್ ಸುಬ್ರಮಣಿ ಹಾಗೂ ಶಾಂತೆಯಂಡ ವೀಣಾಅಚ್ಚಯ್ಯ ಅವರುಗಳು ಹಾಕಿ ಉತ್ಸವಕ್ಕೆ ಬಜೆಟ್‍ನಲ್ಲಿ ಹಣ ಮೀಸಲಿಡುವಂತೆ ಮುಖ್ಯಮಂತ್ರಿಗಳ ಗಮನ ಸೆಳೆಯುವುದಾಗಿ ಭರವಸೆ ನೀಡಿದರು. ಅಲ್ಲದೆ ಕೊಡಗಿನಿಂದ ನಿಯೋಗ ತೆರಳುವ ಬಗ್ಗೆಯೂ ತಿಳಿಸಿದರು.
::: ಹಣ ಬಿಡುಗಡೆಗೆ ಮನವಿ :::
ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ಕೊಡವ ಹಾಕಿ ಹಬ್ಬಕ್ಕೆ ಪ್ರತಿವರ್ಷ ಸರ್ಕಾರದ ಮೂಲಕ 40 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದ್ದರು. 2018 ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ನಡೆದ ಕುಲ್ಲೇಟಿರ ಹಾಕಿ ಹಬ್ಬಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಬರಬೇಕಾಗಿರುವ 40 ಲಕ್ಷ ರೂ. ಇಲ್ಲಿಯವರೆಗೆ ಬಿಡುಗಡೆಯಾಗಿಲ್ಲ. ಹಲವು ಬಾರಿ ಸರ್ಕಾರದ ಗಮನ ಸೆಳೆದು ಮನವಿಗಳನ್ನು ಸಲ್ಲಿಸಿದ್ದರೂ ಸ್ಪಂದನೆ ದೊರೆತ್ತಿಲ್ಲ. ಆದ್ದರಿಂದ ತಕ್ಷಣ ಈ ಹಣವನ್ನು ಸರ್ಕಾರದಿಂದ ಬಿಡುಗಡೆ ಮಾಡಿಸುವಂತೆ ಇದೇ ಸಂದರ್ಭ ಎಲ್ಲಾ ಶಾಸಕರಲ್ಲಿ ಪ್ರಮುಖರು ಮನವಿ ಮಾಡಿಕೊಂಡರು. ಈ ಮನವಿಗೆ ಸ್ಪಂದಿಸಿದ ಶಾಸಕರುಗಳು ಹಣ ಬಿಡುಗಡೆ ಮಾಡಿಸುವ ಬಗ್ಗೆ ಭರವಸೆ ನೀಡಿದರು.
ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನುಮುತ್ತಪ್ಪ, ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ, ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ತೇಲಪಂಡ ಶಿವಕುಮಾರ್ ನಾಣಯ್ಯ, ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ, ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಕುಂಡ್ಯೋಳಂಡ ಬಿಪಿನ್, ಪುಟ್ಟಿಚಂಡ ಡಾನ್, ಕುಲ್ಲೇಟಿರ ಬಿನ್ನಿ ಬೋಪಣ್ಣ ಹಾಗೂ ಮುಂದಿನ ವರ್ಷಗಳಲ್ಲಿ ನಾಪೋಕ್ಲುವಿನಲ್ಲಿ ಕೊಡವ ಕೌಟುಂಬಿಕ ಹಾಕಿ ಉತ್ಸವವನ್ನು ನಡೆಸುವ ಅಪ್ಪಚೆಟ್ಟೋಳಂಡ ಮತ್ತು ಕುಂಡ್ಯೋಳಂಡ ಕುಟುಂಬದ ಪ್ರಮುಖರು ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.

error: Content is protected !!