ಕುಶಾಲನಗರದಲ್ಲಿ ಆರಾಧನಾ ಮಹೋತ್ಸವ : ಸಾಹಿತ್ಯಕ್ಕೆ ಸಮಾಜವನ್ನು ಬದಲಾಯಿಸುವ ಶಕ್ತಿ ಇದೆ : ಶ್ರೀಸದಾಶಿವ ಸ್ವಾಮೀಜಿ ಅಭಿಪ್ರಾಯ

February 12, 2021

ಮಡಿಕೇರಿ ಫೆ.12 : ದಾಸ ಸಾಹಿತ್ಯಕ್ಕೆ ಸಮಾಜವನ್ನು ಬದಲಾಯಿಸುವ ದೃಷ್ಠಿಕೋನವಿದೆ ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಶ್ರೀಸದಾಶಿವ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕುಶಾಲನಗರದ ಅಯ್ಯಪ್ಪಸ್ವಾಮಿ ದೇವಾಲಯ ಬಳಿ ಕಾವೇರಿ ಆರತಿ ಕ್ಷೇತ್ರದಲ್ಲಿ ನಡೆದ
ಕರ್ನಾಟಕ ಜಾನಪದ ಪರಿಷತ್ತು ಕುಶಾಲನಗರ ತಾಲೂಕು ಘಟಕ ಮತ್ತು ಕುಶಾಲನಗರ ಮಹಿಳಾ ಭಜನಾ ಮಂಡಳಿ ಸಂಯುಕ್ತಾಶ್ರಯದಲ್ಲಿ ತ್ಯಾಗರಾಜರು ಮತ್ತು ಪುರಂದರದಾಸರ ಆರಾಧನಾ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತ್ಯ ಎಂಬುದು ಧರ್ಮ, ಜಾತಿ, ಲಿಂಗ ಬೇಧವನ್ನು ಮೀರಿದ್ದಾಗಿದೆ. ದಾಸರು, ಶರಣರು ತಮ್ಮ ಕೀರ್ತನೆಗಳು, ವಚನಗಳು, ಜೀವನದ ಮುಖಾಂತರ ಜೀವನದ ಮೌಲ್ಯವನ್ನು ತಿಳಿಸಿಕೊಟ್ಟಿದ್ದು ಪ್ರತಿಯೊಬ್ಬರು ಜೀವನ ಮೌಲ್ಯವನ್ನು ಅರಿತು ನಡೆಯಬೇಕಿದೆ ಎಂದರು. ಪ್ರತಿಯೊಬ್ಬರೂ ಕತ್ತಲಲ್ಲಿ ಬೆಳಕನ್ನು ಹುಡುಕುವ ಕಾಯಕದಲ್ಲಿ ತೊಡಗಬೇಕೆಂದು ಸ್ವಾಮೀಜಿ ಕರೆ ನೀಡಿದರು.
ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡ ಚಿಕ್ಕಅಳುವಾರ ಸ್ನಾತಕೋತ್ತರ ಕೇಂದ್ರದ ಉಪನ್ಯಾಸಕ ಜಮೀರ್ ಅಹಮ್ಮದ್ ಮಾತನಾಡಿ, ದಾಸ ಸಾಹಿತ್ಯದ ಮೌಲ್ಯ ಅನನ್ಯ. ದಾಸರು, ಶರಣರ ಕೀರ್ತನೆಗಳು ಸಾರ್ವಕಾಲಿಕ ಶ್ರೇಷ್ಠ ವಿಚಾರವಾಗಿದೆ. ಕೀರ್ತನೆಗಳು ಮಾನಸಿಕವಾಗಿ, ಶಾರೀರಿಕವಾಗಿ ಹಿತ ಮತ್ತು ಮುದವನ್ನು ಸೃಷ್ಠಿಸುತ್ತವೆ. ಸಮಾಜದ ದೃಷ್ಠಿಕೋನವನ್ನು ಬದಲಾಯಿಸುವ ಶಕ್ತಿ ಕೀರ್ತನೆಗಳು ಮತ್ತು ವಚನಗಳಲ್ಲಿ ಅಡಕವಾಗಿದೆ ಎಂದರು.
ಇದೇ ಸಂದರ್ಭ ಅತಿಥಿಗಳಾಗಿ ಪಾಲ್ಗೊಂಡಿದ್ದ ಸಾಹಿತಿ ಭಾರದ್ವಾಜ್ ಕೆ ಆನಂದತೀರ್ಥ ಕೆ.ಎಸ್.ನಳಿನಿ ಅವರು ಬರೆದ ಕಥಾ ಸಂಕಲನ `ಜೀವನಾಡಿ’ ಬಿಡುಗಡೆಗೊಳಿಸಿ ಮಾತನಾಡಿದರು.
ಕುಶಾಲನಗರ ತಾಲೂಕು ಜಾನಪದ ಪರಿಷತ್ ಅಧ್ಯಕ್ಷರಾದ ಎಂ.ಎನ್.ಚಂದ್ರಮೋಹನ್ ಪ್ರಾಸ್ತಾವಿಕ ನುಡಿಗಳಾಡಿದರು.
ಈ ಸಂದರ್ಭ ಮಹಿಳಾ ಭಜನಾ ಮಂಡಳಿಯ ಹಿರಿಯ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ನಂತರ ಜೀವನದಿ ಕಾವೇರಿಗೆ ವಿಶೇಷ ಆರತಿ ಬೆಳಗಲಾಯಿತು.
ಜಾನಪದ ಪರಿಷತ್ ತಾಲೂಕು ಘಟಕದ ಕಾರ್ಯಾಧ್ಯಕ್ಷರಾದ ಫ್ಯಾನ್ಸಿ ಮುತ್ತಣ್ಣ, ಕಾರ್ಯದರ್ಶಿ ವಿನೋದ್, ವನಿತಾ ಚಂದ್ರಮೋಹನ್, ಬಿ.ಎಸ್.ಪರಮೇಶ್, ಭಜನಾ ಮಂಡಳಿ ಪ್ರಮುಖರಾದ ರಮಾ ವಿಜಯೇಂದ್ರ, ಪದ್ಮಾ ಪುರುಷೋತ್ತಮ್, ನದಿ ಜಾಗೃತಿ ಸಮಿತಿ ಪ್ರಮುಖರಾದ ಡಿ.ಆರ್.ಸೋಮಶೇಖರ್, ಕೆ.ಆರ್.ಶಿವಾನಂದ, ಮಂಡೇಪಂಡ ಬೋಸ್ ಮೊಣ್ಣಪ್ಪ ಮತ್ತಿತರರು ಇದ್ದರು.
ಪರಿಷತ್ ಖಜಾಂಚಿ ಸುನಿತಾ ಲೋಕೇಶ್ ಸ್ವಾಗತಿಸಿ ವಂದಿಸಿದರು.

error: Content is protected !!