ಕುಶಾಲನಗರ ಪ.ಪಂ ಸಾಮಾನ್ಯ ಸಭೆ : ಅಧಿಕಾರಿಗಳ ನಡುವೆ ಹೊಂದಾಣಿಕೆಯ ಕೊರತೆ : ಸದಸ್ಯರ ಅಸಮಾಧಾನ

February 12, 2021

ಮಡಿಕೇರಿ ಫೆ.12 : ಕುಶಾಲನಗರ ಪಟ್ಟಣ ಪಂಚಾಯ್ತಿ ಸಾಮಾನ್ಯ ಸಭೆ ಪಂಚಾಯ್ತಿ ಅಧ್ಯಕ್ಷ ಜೈವರ್ಧನ್ ಅಧ್ಯಕ್ಷತೆಯಲ್ಲಿ ಪಂಚಾಯ್ತಿ ಸಭಾಂಗಣದಲ್ಲಿ ನಡೆಯಿತು.
ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಅನುಷ್ಠಾನಗೊಳಿಸುವಲ್ಲಿ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ವಿಫಲರಾಗುತ್ತಿರುವ ಬಗ್ಗೆ ಪಂಚಾಯ್ತಿ ಸದಸ್ಯರು ಆಕ್ರೋಷ ವ್ಯಕ್ತಪಡಿಸಿದ್ದಾರೆ. ಪಟ್ಟಣ ಪಂಚಾಯ್ತಿಯ ಬಡಾವಣೆಯೊಂದರಲ್ಲಿ ಅಕ್ರಮವಾಗಿ ದಾಖಲೆಗಳನ್ನು ಸೃಷ್ಠಿಸಿ ನಿವೇಶನಗಳನ್ನು ಮಾರಾಟ ಮಾಡುತ್ತಿದ್ದ ಕಟ್ಟಡದ ಮಾಲೀಕರ ಮೇಲೆ ಕ್ರಿಮಿನಲ್ ಕೇಸ್ ದಾಖಲು ಮಾಡುವ ಬಗ್ಗೆ ಹಿಂದಿನ ಸಭೆಯಲ್ಲಿ ಚರ್ಚೆ ನಡೆದಿತ್ತು. ಪೈಸಾರಿ ಜಾಗಗಳನ್ನು ಸರ್ವೆ ಮಾಡಿ ಹದ್ದುಬಸ್ತು ಗುರುತಿಸುವುದು, ಪಟ್ಟಣದ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ನೋಟಿಸ್ ಜಾರಿ ಮಾಡುವುದು, ಒಳಚರಂಡಿ ಕಾಮಗಾರಿ ವಿಳಂಭ, ಖಾತೆ ಮಾಡುವ ಸಂದರ್ಭ ಅಧಿಕಾರಿಗಳ ನಿರ್ಲಕ್ಷ್ಯ, ಅಕ್ರಮ ದಾಖಲಾತಿ ಸೃಷ್ಠಿ ಈ ಎಲ್ಲಾ ವಿಷಯಗಳ ಬಗ್ಗೆ ಸದಸ್ಯರುಗಳು ಸಭೆಯಲ್ಲಿ ಚರ್ಚೆ ನಡೆಸಿ ಯಾವುದೇ ನಿರ್ಣಯಗಳು ಅನುಷ್ಠಾನಗೊಳ್ಳುತ್ತಿಲ್ಲ. ಅಧಿಕಾರಿಗಳಿಂದ ಕೇವಲ ಹಾರಿಕೆಯ ಉತ್ತರ ಬರುತ್ತಿದೆ ಎಂಬ ಮಾತುಗಳು ಸಭೆಯಲ್ಲಿ ಕೇಳಿಬಂದವು.
ಪಟ್ಟಣ ಪಂಚಾಯ್ತಿಯಲ್ಲಿ ಅಧಿಕಾರಿ, ಸಿಬ್ಬಂದಿಗಳ ನಡುವೆ ಹೊಂದಾಣಿಕೆ ಕೊರತೆ ಅಭಿವೃದ್ಧಿಗೆ ತೊಡಕುಂಟಾಗುತ್ತಿದೆ ಎಂದು ಸದಸ್ಯರುಗಳು ಅಧ್ಯಕ್ಷರ ಗಮನಕ್ಕೆ ತಂದರು. ಕುಶಾಲನಗರ ಪಟ್ಟಣದಲ್ಲಿ ವಾಹನ ಸಂಚಾರ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಹೆದ್ದಾರಿ ರಸ್ತೆಯ ಎರಡೂ ಬದಿಯಲ್ಲಿ ವಾಹನ ನಿಲುಗಡೆಯಿಂದ ಅಪಘಾತಗಳು ಸಂಭವಿಸುತ್ತಿವೆ. ಕುಶಾಲನಗರ ಅರಣ್ಯ ತಪಾಸಣಾ ಗೇಟ್ ಬಳಿ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳು ಬ್ಯಾರಿಕೆಡ್ ರಸ್ತೆಗೆ ಅಡ್ಡ ಹಾಕುವ ಹಿನ್ನಲೆಯಲ್ಲಿ ಸಂಚಾರ ವ್ಯವಸ್ಥೆ ಏರುಪೇರು ಉಂಟಾಗುತ್ತಿದೆ. ಪ್ರಯಾಣಿಕರು ಮತ್ತು ವಾಹನ ಸವಾರರಿಗೆ ನಿತ್ಯ ಸಮಸ್ಯೆ ಉಂಟಾಗುತ್ತಿದ್ದು ಆ ಬಗ್ಗೆ ಗಮನಹರಿಸುವಂತೆ ಸಭೆಯಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರು. ಮಡಿಕೇರಿ-ಕುಶಾಲನಗರ ರಸ್ತೆಯ ತಾವರೆಕೆರೆ ಬಳಿ ವಾಹನ ಸಂಚಾರಕ್ಕೆ ಸಮರ್ಪಕ ವ್ಯವಸ್ಥೆ ಕಲ್ಪಿಸುವಂತೆ ಸದಸ್ಯರು ಕೋರಿದರು. ಪ್ರವಾಸಿ ಮಂದಿರ-ಗಣಪತಿ ದೇವಾಲಯ ರಸ್ತೆಯಲ್ಲಿ ಗೂಡ್ಸ್ ವಾಹನಗಳನ್ನು ತೆರವುಗೊಳಿಸುವುದು, ಮುಖ್ಯರಸ್ತೆಯಿಂದ ಅಯ್ಯಪ್ಪಸ್ವಾಮಿ ರಸ್ತೆಗೆ ಬರುವ ದಾರಿಯಲ್ಲಿ ಆಟೋ ರಿಕ್ಷಾಗಳ ಕಿರಿಕಿರಿಯಿಂದ ಖಾಸಗಿ ಬಸ್‍ಗಳಿಗೆ ಸಂಚಾರಕ್ಕೆ ತೊಡಕುಂಟಾಗುತ್ತಿದೆ ಎಂಬ ವಿಷಯಗಳ ಬಗ್ಗೆ ಚರ್ಚೆಗಳು ನಡೆದವು. ಈ ನಡುವೆ ಬಾಪೂಜಿ ಬಡಾವಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ಬಡಾವಣೆ ಮಾಲೀಕರು ನಕಲಿ ದಾಖಲೆ ಸೃಷ್ಠಿಸಿ ಒಂದೇ ನಿವೇಶನವನ್ನು ಮೂರು ಜನರಿಗೆ ಮಾರಾಟ ಮಾಡಿರುವ ಪ್ರಕರಣದ ಹಿನ್ನಲೆಯಲ್ಲಿ ಬಡಾವಣೆಯ ಮಾಲೀಕರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡುವಂತೆ ಸಭೆ ನಿರ್ಣಯ ಕೈಗೊಂಡಿತು.
ಮಡಿಕೇರಿ ರಸ್ತೆಯಲ್ಲಿ ಬೇಲಿ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಚಾಯ್ತಿ ಇಂಜಿನಿಯರ್ ಶ್ರೀದೇವಿ ಅವರನ್ನು ಸಭೆಯಲ್ಲಿ ಕೆಲ ಸದಸ್ಯರು ತರಾಟೆಗೆ ತೆಗೆದುಕೊಂಡರು. ಇದೇ ಸಂದರ್ಭ ಬಡಾವಣೆಯೊಂದರ ರಸ್ತೆ ಒತ್ತುವರಿ ಪ್ರಕರಣದ ಹಿನ್ನಲೆಯಲ್ಲಿ ಪಂಚಾಯ್ತಿ ಸದಸ್ಯರಾದ ಕೆ.ಜಿ.ಮನು ಮತ್ತು ಪಂಚಾಯ್ತಿ ಕಾನೂನು ಸಲಹೆಗಾರ ಆರ್.ಕೆ.ನಾಗೇಂದ್ರ ನಡುವೆ ಮಾತಿನ ಚಕಮಕಿ ನಡೆದು ಸ್ವಲ್ಪಕಾಲ ಸಭೆಯಲ್ಲಿ ಗೊಂದಲ ಉಂಟಾಯಿತು.
ಪಂಚಾಯ್ತಿ ಉಪಾಧ್ಯಕ್ಷೆ ಸುರಯ್ಯಭಾನು, ಸದಸ್ಯರಾದ ಪ್ರಮೋದ್ ಮುತ್ತಪ್ಪ, ಶೇಖ್ ಖಲೀಮುಲ್ಲಾ, ಡಿ.ಕೆ.ತಿಮ್ಮಪ್ಪ, ಎಂ.ಬಿ.ಸುರೇಶ್, ಅಮೃತ್‍ರಾಜ್, ವಿ.ಎಸ್.ಆನಂದಕುಮಾರ್, ಬಿ.ಎಲ್.ಜಗದೀಶ್, ಕೆ.ಆರ್.ರೇಣುಕಾ, ಎಂ.ವಿ.ನಾರಾಯಣ, ಕೆ.ಜಿ.ಮನು, ಎನ್.ಎನ್.ಶಂಭುಲಿಂಗಪ್ಪ, ಪುಟ್ಟಲಕ್ಷ್ಮಿ, ಜಯಲಕ್ಷ್ಮಮ್ಮ, ಜಯಲಕ್ಷ್ಮಿ, ರೂಪಾ ಉಮಾಶಂಕರ್, ಮುಖ್ಯಾಧಿಕಾರಿ ಸುಜಯ್‍ಕುಮಾರ್ ಇದ್ದರು.

error: Content is protected !!