ಮಡಿಕೇರಿ ಮಹಿಳಾ ಕಾಲೇಜು ಕಾರ್ಯಕ್ರಮ : ವಿದ್ಯಾರ್ಥಿಗಳು ಸೃಜನಶೀಲತೆಯೊಂದಿಗೆ ಬದುಕು ರೂಪಿಸಿಕೊಳ್ಳಬೇಕು : ಉ.ರಾ.ನಾಗೇಶ್ ಕರೆ

February 12, 2021

ಮಡಿಕೇರಿ ಫೆ.12 : ವಿದ್ಯಾರ್ಥಿ ಬದುಕಿನಲ್ಲಿ ಸ್ಪರ್ಧಿಗಳು ಇದ್ದಲ್ಲಿ ಹೆಚ್ಚಿನ ಯಶಸ್ಸು ಸಾಧಿಸಲು ಸಾಧ್ಯ. ಆ ದಿಸೆಯಲ್ಲಿ ಹೆಚ್ಚು ಹೆಚ್ಚು ಸ್ಪರ್ಧೆ ಎದುರಿಸಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಸಾಹಿತಿ ಹಾಗೂ ಕುಶಾಲನಗರ ಸರ್ಕಾರಿ ಪದವಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಉ.ರಾ.ನಾಗೇಶ್ ಅವರು ಪ್ರತಿಪಾಧಿಸಿದ್ದಾರೆ.
ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವತಿಯಿಂದ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಆವರಣದಲ್ಲಿ ಶುಕ್ರವಾರ ನಡೆದ 2020-21 ನೇ ಸಾಲಿನ ಕಾಲೇಜು ವಿದ್ಯಾರ್ಥಿ ವೇದಿಕೆ, ಸಾಂಸ್ಕøತಿಕ, ಕ್ರೀಡೆ, ಎನ್‍ಎಸ್‍ಎಸ್, ಮತ್ತಿತರ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಹಾಗೂ ಪ್ರಥಮ ಪದವಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿದ್ಯಾರ್ಥಿಗಳು ಭಾಷೆಯಿಂದ ಭಾವನೆ, ಭಾವನೆಯಿಂದ ಚಿಂತನೆ, ಚಿಂತನೆಯಿಂದ ಸೃಜನಶೀಲತೆ ಬೆಳೆಸಿಕೊಳ್ಳಬೇಕು. ಇದರಿಂದ ಬದುಕಿನ ಶಿಕ್ಷಣ ಕಲಿತಂತಾಗುತ್ತದೆ ಎಂದು ಉ.ರಾ.ನಾಗೇಶ್ ಅವರು ನುಡಿದರು.
ತಂತ್ರಜ್ಞಾನ ಯುಗದಲ್ಲಿ ಕಲಿಯುವ ಮತ್ತು ಬೆಳೆಯುವ ಶಿಕ್ಷಣ ಕಾಣಬಹುದಾಗಿದೆ. ಹಾಗೆಯೇ ಎದುರಿಸುವ ಮತ್ತು ಹೆದರಿಸಿಕೊಂಡು ಬದುಕುವ ಜೀವನ ಪದ್ಧತಿಯನ್ನು ಕಾಣುತ್ತೇವೆ ಎಂದು ಅವರು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಪರೀಕ್ಷಾ ಮತ್ತು ಸ್ಪರ್ಧಾತ್ಮಕ ಶಿಕ್ಷಣವನ್ನು ಕಾಣುತ್ತೇವೆ. ಆ ದಿಸೆಯಲ್ಲಿ ಬದುಕನ್ನು ಸೃಷ್ಟಿಸಿಕೊಳ್ಳುವ ಸೃಜನಶೀಲತೆ ಬೆಳೆಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಪಡೆಯುವಂತಾಗಬೇಕು ಎಂದು ಉ.ರಾ.ನಾಗೇಶ್ ಅವರು ತಿಳಿಸಿದರು.
ವಿದ್ಯಾರ್ಥಿಗಳು ವಿಚಾರಗಳನ್ನು ತಿಳಿದುಕೊಳ್ಳಬೇಕು. ಸಾಧಿಸುವ ಛಲ ಇರಬೇಕು. ಗಳಿಕೆ ಬೇಕು ಆದರೆ ಪ್ರಯತ್ನ ಬೇಡವೇ ಎಂದು ಅವರು ಪ್ರಶ್ನಿಸಿದರು.
ಜೀವನದ ಬದುಕಿನಲ್ಲಿ ಪ್ರತಿಯೊಬ್ಬರೂ ಭಾಷೆ, ಬರಹ, ಭಾವನೆ, ಮತ್ತು ಬಣ್ಣ ಈ ನಾಲ್ಕು ಅಂಶಗಳನ್ನು ಅಳವಡಿಸಿಕೊಳ್ಳಬೇಕು. ಬಣ್ಣವು ಭಾವನೆಯನ್ನು, ಭಾಷೆ ಸಂವಹನ, ಬರಹ ತಿಳುವಳಿಕೆ ಮತ್ತು ಭಾವನೆ ಅಭಿವ್ಯಕ್ತಿಯನ್ನು ಸೂಚಿಸುತ್ತದೆ ಎಂದು ಉ.ರಾ.ನಾಗೇಶ್ ಅವರು ವಿವರಿಸಿದರು.
ಹಿಂದೆ ಜ್ಞಾನವಿತ್ತು, ವಿಜ್ಞಾನ ಚಿಗುರುತ್ತಿತ್ತು. ಆದರೆ ಇಂದು ವಿಜ್ಞಾನ ಅಗಾಧವಾಗಿ ಮುಂದುವರಿದಿದೆ. ಆದರೆ ಯಾಂತ್ರೀಕರಣವಾಗಿದೆ ಎಂದು ಅವರು ಬೇಸರ ವ್ಯಕ್ತ ಪಡಿಸಿದರು.
ಪ್ರತಿಯೊಬ್ಬರೂ ಉತ್ತಮ ಜೀವನ ನಡೆಸಬೇಕು. ಪಠ್ಯ ಶಿಕ್ಷಣ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು. ಚೌಕಬಾರ್ ಆಟವನ್ನು ಪಠ್ಯವಾಗಿ ಮಾಡಬೇಕು ಎಂದು ಅವರು ಸಲಹೆ ಮಾಡಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ಕೆ.ಸಿ.ದಯಾನಂದ ಅವರು ಮಾತನಾಡಿ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸವಿದ್ದಲ್ಲಿ ಯಾವುದೇ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು ಎಂದರು.
ಪ್ರತಿಯೊಬ್ಬರೂ ಉನ್ನತ ಶಿಕ್ಷಣ ಪಡೆಯಬೇಕು. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ದುಶ್ಚಟಗಳಿಗೆ ತುತ್ತಾಗಬಾರದು ಎಂದು ಅವರು ಸಲಹೆ ಮಾಡಿದರು. ವಿದ್ಯಾರ್ಥಿ ಜೀವನದಲ್ಲಿ ಜ್ಞಾನಾರ್ಜನೆ ಬೆಳೆಸಿಕೊಳ್ಳಬೇಕು. ‘ಜ್ಞಾನವೇ ಶಕ್ತಿ, ಅಜ್ಞಾನವೇ ದೌರ್ಬಲ್ಯ’ ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.
ಪ್ರತಿಯೊಬ್ಬರಲ್ಲೂ ಪ್ರತಿಭೆ ಇದ್ದು, ಅದನ್ನು ಬಳಸಿಕೊಳ್ಳಬೇಕು. ಸಂಕುಚಿತ/ ಹಿಂಜರಿಕೆ ಮನೋಭಾವದಿಂದ ಹೊರಬರಬೇಕು. ಕಠಿಣ ಶ್ರಮವಿದ್ದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಅದಕ್ಕೆ ಅಬ್ರಾಹಂ ಲಿಂಕನ್ ಅವರೇ ಉದಾಹರಣೆ ಎಂದರು.
ಪ್ರತಿಯೊಬ್ಬ ವಿದ್ಯಾರ್ಥಿ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು. ದೃಢ ವಿಶ್ವಾಸ ಇರಬೇಕು ಎಂದು ದಯಾನಂದ ಅವರು ತಿಳಿಸಿದರು. ವಿದ್ಯಾರ್ಥಿಗಳಲ್ಲಿ ಗುರಿ ಇರಬೇಕು. ಜೊತೆಗೆ ಗುರುಗಳ ಮಾರ್ಗದರ್ಶನವೂ ಅಗತ್ಯ ಎಂದು ಅವರು ತಿಳಿಸಿದರು.
ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಪ್ರೋ.ಡಿ.ಜೆ.ಜವರಪ್ಪ ಅವರು ಮಾತನಾಡಿ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ, ಆತ್ಮವಿಶ್ವಾಸ ಬೆಳೆಸಿಕೊಂಡು ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು. ಸಮಯವನ್ನು ವ್ಯರ್ಥ ಮಾಡದೆ ವಿದ್ಯಾರ್ಜನೆ ಕಡೆ ಗಮನಹರಿಸುವಂತೆ ಸಲಹೆ ಮಾಡಿದರು.
ಸಹಾಯಕ ಪ್ರಾಧ್ಯಾಪಕರಾದ ಕೆ.ಕೆ.ಮಹೇಶ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಸಹಾಯಕ ಪ್ರಾಧ್ಯಾಪಕರಾದ ಕನ್ನಿಕ, ನಿರ್ಮಲ, ಸರಸ್ವತಿ, ಸತೀಶ್, ನಮಿತಾ, ಇತರರು ಇದ್ದರು. ಐಶ್ವರ್ಯ ನಿರೂಪಿಸಿದರು. ಶಾಲಿನಿ ಸ್ವಾಗತಿಸಿದರು. ದಿವ್ಯ ಮತ್ತು ತಂಡದವರು ಪ್ರಾರ್ಥಿಸಿದರು. ಪೂಜಾ ವಂದಿಸಿದರು.

error: Content is protected !!