ಮಡಿಕೇರಿಯಲ್ಲಿ ಕಾವೇರಿ ವಸ್ತ್ರಸಿರಿ ಕೈಮಗ್ಗ ಉತ್ಪನ್ನಗಳ ಮಾರಾಟ ಮೇಳ ಆರಂಭ

February 12, 2021

ಮಡಿಕೇರಿ ಫೆ.12 : ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಹತ್ತು ದಿನಗಳ ಕಾಲ ಏರ್ಪಡಿಸಿರುವ ಕಾವೇರಿ ವಸ್ತ್ರಸಿರಿ ಜಿಲ್ಲಾ ಮಟ್ಟದ ಕೈಮಗ್ಗ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಜಿ.ಪಂ. ಅಧ್ಯಕ್ಷರಾದ ಬಿ.ಎ.ಹರೀಶ್ ಮತ್ತು ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್ ಅವರು ಶುಕ್ರವಾರ ಚಾಲನೆ ನೀಡಿದರು.
ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ಕೊಡಗು ಜಿಲ್ಲಾ ಪಂಚಾಯತ್ ಇವರ ಸಂಯುಕ್ತಾಶ್ರಯದಲ್ಲಿ ನಗರದ ಗಾಂಧಿ ಮೈದಾನದಲ್ಲಿ ಏರ್ಪಡಿಸಲಾಗಿರುವ ಕಾವೇರಿ ವಸ್ತ್ರ ಸಿರಿ ಜಿಲ್ಲಾ ಮಟ್ಟದ ಕೈಮಗ್ಗ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಜಿ.ಪಂ. ಅಧ್ಯಕ್ಷರು ಗೃಹ ಕೈಗಾರಿಕೆಗಳನ್ನು ಬಲಪಡಿಸಬೇಕು ಎಂದು ಅವರು ಕರೆ ನೀಡಿದರು.
ದೇಶಿಯ ಉತ್ಪನ್ನಗಳನ್ನು ಪ್ರೋತ್ಸಾಹಿಸುವ ಮೂಲಕ ಸ್ವದೇಶಿ ವಸ್ತುಗಳನ್ನು ಬಳಸಬೇಕು. ಆ ನಿಟ್ಟಿನಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶಗಳು ದೊರೆಯಲಿವೆ ಎಂದು ಬಿ.ಎ.ಹರೀಶ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಇತ್ತೀಚಿನ ದಿನಗಳಲ್ಲಿ ಕೈಮಗ್ಗ ಉದ್ಯಮವೂ ಕ್ಷೀಣಿಸುತ್ತಿದ್ದು, ಈ ಉದ್ಯಮವನ್ನು ಉತ್ತೇಜಿಸಲು ಹಾಗೂ ಕೈಮಗ್ಗ ನೇಕಾರರನ್ನು ಪ್ರೋತ್ಸಾಹಿಸಲು ಸರ್ಕಾರ, ಕೈಮಗ್ಗ ಮತ್ತು ಜವಳಿ ಇಲಾಖೆ ಮೂಲಕ ಕೈಮಗ್ಗ ಉತ್ಪನ್ನಗಳ ಮೇಳ ನಡೆಸಲಾಗುತ್ತಿದೆ ಎಂದು ಜಿ.ಪಂ. ಅಧ್ಯಕ್ಷರಾದ ಬಿ.ಎ.ಹರೀಶ್ ಅವರು ಹೇಳಿದರು.
ಜಿ.ಪಂ.ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್ ಅವರು ಮಾತನಾಡಿ ಜಿಲ್ಲೆಯ ಜನತೆ ಈ ಮೇಳದ ಸದುಪಯೋಗವನ್ನು ಪಡೆದುಕೊಳ್ಳಬೇಕು. ಜನಸಾಮಾನ್ಯರು ಇಂತಹ ಮೇಳದಲ್ಲಿ ಭಾಗವಹಿಸಿ ಉತ್ಪನಗಳನ್ನು ಖರಿದಿಸಿದಾಗ ಕೈಮಗ್ಗ ಉತ್ಪನ್ನಗಳಿಗೆ ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಅವರು ಹೇಳಿದರು.
ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕರಾದ ಜಿ.ಎಸ್.ಗುರುಸ್ವಾಮಿ ಅವರು ಮಾತನಾಡಿ ಮೇಳದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ವಿವಿಧ ಕೈಮಗ್ಗ ನೇಕಾರ ಸಹಕಾರ ಸಂಘಗಳು ತಾವು ಉತ್ಪಾದಿಸಿದ ಕೈಮಗ್ಗ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಪ್ರದರ್ಶಿಸಿ ಅತಿ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತದೆ ಎಂದರು.
ಈ ಮೇಳದಲ್ಲಿ ಕೈಮಗ್ಗ ನೇಕಾರರು ತಾವು ಉತ್ಪಾದಿಸಿದ ಪರಿಶುದ್ಧ ರೇಷ್ಮೆ ಸೀರೆಗಳು, ಕಾಟನ್ ಸೀರೆಗಳು, ಕಾಂಚಿಪುರಂ ಸೀರೆಗಳು, ಮೊಣಕಾಲ್ಮೂರು ಸೀರೆಗಳು, ಇಳಕಲ್ ಸೀರೆಗಳು, ಟವಲ್, ಬೆಡ್‍ಶೀಟ್, ಲುಂಗಿ, ಕಂಚಿಕಾಟನ್ ಸೀರೆಗಳು ಮತ್ತಿತರ ನಿತ್ಯ ಬಳಕೆಯ ಗೃಹ ಉಪಯೋಗಿ ವಸ್ತುಗಳನ್ನು ನೇರವಾಗಿ ಮಾರಾಟ ಮಾಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
ಜಿಲ್ಲೆಯ ಗ್ರಾಹಕರು ಕೈಮಗ್ಗ ವಸ್ತುಗಳನ್ನು ಖರೀದಿಸಿ. ಮೇಳದ ಅವಧಿಯಲ್ಲಿ ಗ್ರಾಹಕರು ಕೊಳ್ಳುವ ವಸ್ತುಗಳ ಮೇಲೆ ಸರ್ಕಾರದಿಂದ ವಿಶೇಷ ಶೇ.20 ರಷ್ಟು ರಿಯಾಯಿತಿ ಇದ್ದು, ಜಿಲ್ಲೆಯ ಗ್ರಾಹಕರು ಈ ಅವಕಾಶ ಸದುಪಯೋಗ ಪಡೆದುಕೊಳ್ಳುವಂತೆ ಗುರುಸ್ವಾಮಿ ಅವರು ತಿಳಿಸಿದರು. ನಗರಸಭೆ ಪೌರಾಯುಕ್ತರಾದ ಎಸ್.ವಿ.ರಾಮದಾಸ್, ಇತರರು ಹಾಜರಿದ್ದರು.

error: Content is protected !!