ಕುಶಾಲನಗರದಲ್ಲಿ ಸರ್ಕಾರಿ ನೌಕರರ ಸಮ್ಮಿಲನ ಸಮಾರಂಭ

February 13, 2021

ಮಡಿಕೇರಿ ಫೆ.13 : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡಗು ಜಿಲ್ಲಾ ಘಟಕದ ಸಹಯೋಗದೊಂದಿಗೆ ಶೈಕ್ಷಣಿಕ ಕಾರ್ಯಾಗಾರ ಹಾಗೂ ನೌಕರರ ಸಮ್ಮಿಲನ ಸಮಾರಂಭ ಕುಶಾಲನಗರದಲ್ಲಿ ನಡೆಯಿತು.
ಕುಶಾಲನಗರ ಜಿಎಂಪಿ ಶಾಲಾ ಮೈದಾನದಲ್ಲಿ ನಡೆದ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ರಾಜ್ಯ ಸರಕಾರಿ ನೌಕರರ ಸಂಘ ತನ್ನ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸುತ್ತಿದೆ. ಸಂಘದ ಸದಸ್ಯರ ಹಿತ ಕಾಪಾಡುವಲ್ಲಿ ಬದ್ಧವಾಗಿದೆ. ಮುಂದಿನ ಏ.1 ರಿಂದ ಸರಕಾರ ನಿಗದಿಪಡಿಸಿದ ಆಸ್ಪತ್ರೆಗಳಲ್ಲಿ ಸರಕಾರಿ ನೌಕರರು ರೂ.50 ಲಕ್ಷದವರೆಗೆ ಉಚಿತ ಆರೋಗ್ಯ ಚಿಕಿತ್ಸೆ ಪಡೆದುಕೊಳ್ಳುವ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಸಂಘಟನೆಗಳು ನಿಂತ ನೀರಾಗಬಾರದು. ಸಂಘಟನೆಯಿಂದ ನಿರಂತರ ಹೋರಾಟದ ಮೂಲಕ ಪ್ರತಿಯೊಬ್ಬರೂ ಕೂಡ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಪ್ರತಿನಿಧಿಗಳು ಸರಕಾರಿ ನೌಕರರ ಮತ್ತು ಶಿಕ್ಷಕರ ಸಮಸ್ಯೆಗಳನ್ನು ಅರಿತು ಕಾರ್ಯನಿರ್ವಹಿಸಬೇಕಿದೆ. ರಾಜ್ಯ ಶಿಕ್ಷಕರ ಹಿತ ಕಾಯುವುದರೊಂದಿಗೆ ಹಂತಹಂತವಾಗಿ ಕಾಲಕಾಲಕ್ಕೆ ಎದುರಾಗುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಸೂಕ್ತ. ಸಂಘಟನೆಗೆ ಮತ್ತೊಂದು ಸಂಘಟನೆ ಪರ್ಯಾಯವಾಗಿ ಸ್ಥಾಪನೆ ಮಾಡುವುದು ಕಾನೂನು ಬಾಹಿರವಾಗಿದೆ. ಈ ನಿಟ್ಟಿನಲ್ಲಿ ಯಾರೂ ಕೂಡ ಚಿಂತನೆ ಹರಿಸಬಾರದು ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ್ ಮಾತನಾಡಿ, ಶಿಕ್ಷಕರ ಕಲ್ಯಾಣಕ್ಕೆ ಸಂಘ ಸದಾ ಸಿದ್ಧವಿದೆ. ರಾಜ್ಯದ ಶಿಕ್ಷಕರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದರು.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶ್ ಗೌಡಪ್ಪ ಪಾಟೀಲ ಮಾತನಾಡಿದರು.
ಕಾರ್ಯಕ್ರಮದಲ್ಲಿ ಇಲಾಖೆಯ ವಾಹನ ಚಾಲಕರ ಸೇವೆ ಪರಿಗಣಿಸಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಕುಶಾಲನಗರ ಸೇತುವೆ ಸಮೀಪದ ಕಾವೇರಿ ಪ್ರತಿಮೆ ಬಳಿಯಿಂದ ರಾಜ್ಯ ಘಟಕದ ಪದಾಧಿಕಾರಿಗಳನ್ನು ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. ವೀರಗಾಸೆ, ಪೂಜಾ ಕುಣಿತ ಸೇರಿದಂತೆ ವಿವಿಧ ಕಲಾತಂಡಗಳು ಮೆರವಣಿಗೆಯ ಮೆರುಗು ನೀಡಿತು.
ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ವಿ.ಎಂ.ನಾರಾಯಣಸ್ವಾಮಿ, ಕಾರ್ಯಾಧ್ಯಕ್ಷ ಗಿರಿಗೌಡ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ, ಉಪಾಧ್ಯಕ್ಷರಾದ ಕೆ.ನಾಗೇಶ್, ಖಜಾಂಚಿ ಸುರೇಶ್ ಶಡಶ್ಯಾಳ, ಸಹಕಾರ್ಯದರ್ಶಿ ಎಚ್.ಎಸ್.ಚೇತನ್, ಸುಮತಿ, ಸಂಘಟನಾ ಕಾರ್ಯದರ್ಶಿ ನಾಗನಗೌಡ, ಪ್ರಮೀಳ ಕಾಮನಹಳ್ಳಿ, ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎನ್.ಮಂಜುನಾಥ್ ಮತ್ತು ಸಂಘಟನೆಯ ಪ್ರಮುಖರು, ಸದಸ್ಯರು ಪಾಲ್ಗೊಂಡಿದ್ದರು.

error: Content is protected !!