ಮಡಿಕೇರಿಯಲ್ಲಿ ಅಮ್ಮನ ಜನ್ಮದಿನದ ಸಂಭ್ರಮದಲ್ಲಿ ಆಧುನಿಕ ಶ್ರವಣಕುಮಾರ

February 13, 2021

ಮಡಿಕೇರಿ ಫೆ.13 : ತಂದೆ ಕೊಡಿಸಿದ್ದ ಸ್ಕೂಟರ್‍ನಲ್ಲಿ ತಾಯಿಯನ್ನು ಭಾರತದ ಎಲ್ಲಾ ತೀರ್ಥ ಕ್ಷೇತ್ರಗಳ ದರ್ಶನ ಮಾಡಿಸಿದ್ದ ಆಧುನಿಕ ಶ್ರವಣ ಕುಮಾರ ಎಂದೇ ಖ್ಯಾತವಾಗಿರುವ ಮೈಸೂರಿನ ಕೃಷ್ಣಕುಮಾರ್ ಅವರು ಮಡಿಕೇರಿಯಲ್ಲಿ ತಮ್ಮ ತಾಯಿ ಚೂಡಾ ರತ್ನ ಅವರ 71ನೇ ಹುಟ್ಟು ಹಬ್ಬವನ್ನು ಆಚರಿಸಿದರು. ಮಡಿಕೇರಿಯಲ್ಲಿ ತಂಗಿದ್ದ ಹೋಂ ಸ್ಟೇಯಲ್ಲಿ ಅಲ್ಲಿನ ಸಿಬ್ಬಂದಿಗಳ ಜೊತೆಯಲ್ಲಿ ತಾಯಿಗೆ ಸಿಹಿ ತಿನ್ನಿಸಿ ಆಶೀರ್ವಾದ ಪಡೆದರು. ಬಳಿಕ ತಾಯಿಗೆ ಹೊಸ ಸೀರೆ ಮತ್ತು ವಸ್ತ್ರಗಳನ್ನು ಉಡುಗೊರೆಯಾಗಿ ನೀಡಿ ಸಂಭ್ರಮಿಸಿದರು.
ಬಳಿಕ ಮಾತನಾಡಿದ ‘ಆಧುನಿಕ ಶ್ರವಣ ಕುಮಾರ’ ಕೃಷ್ಣ ಕುಮಾರ್ 2018ರ ಜನವರಿ 16ರಂದು ಮಾತೃ ಸೇವಾ ಸಂಕಲ್ಪ ಯಾತ್ರೆಯ ಮೂಲಕ ತಾಯಿಯನ್ನು ಸ್ಕೂಟರ್‍ನಲ್ಲಿ ಕೂರಿಸಿಕೊಂಡು ಸಮಗ್ರ ಭಾರತದ ತೀರ್ಥ ಕ್ಷೇತ್ರಗಳನ್ನು ತೋರಿಸಿದ್ದೇನೆ. ಕನ್ಯಾಕುಮಾರಿಯಿಂದ ಕಾಶ್ಮೀರ ಹಾಗೂ ದ್ವಾರಕದಿಂದ ಪರಶುರಾಮ್ ಕುಂಡ್‍ವರೆಗಿನ ಎಲ್ಲಾ ತೀರ್ಥ ಕ್ಷೇತ್ರಗಳ ದರ್ಶನ ಮಾಡಿಸಿದ್ದಲ್ಲದೇ, ತಾಯಿಯ ಅಭಿಲಾಷೆಯಂತೆ ಅಲ್ಲಿನ ತೀರ್ಥವನ್ನು ಕುಡಿಸಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದರು. ಭಾರತ ಮಾತ್ರವಲ್ಲದೇ ನೇಪಾಳ, ಮಯನ್ಮಾರ್, ಭೂತಾನ್‍ಗೂ ತೆರಳಿ ಕಳೆದ 2 ತಿಂಗಳ ಹಿಂದೆಯಷ್ಟೇ ಮೈಸೂರಿಗೆ ಆಗಮಿಸಿದ್ದೇವೆ ಎಂದು ಮಾಹಿತಿ ನೀಡಿದರು. ಕಳೆದ 12 ದಿನದಿಂದ ಕೊಡಗು ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಇಲ್ಲಿನ ತೀರ್ಥ ಕ್ಷೇತ್ರಗಳಿಗೂ ತೆರಳಿ ದರ್ಶನ ಮಾಡಿದ್ದೇವೆ. ಕೊಡಗಿನ ಸೌಂದರ್ಯ, ಇಲ್ಲಿನ ಜನರ ಸಜ್ಜನಿಕೆ, ಆತಿಥ್ಯ ಮನಸಿಗೆ ಮುದ ನೀಡಿದ್ದು, ಕೊಡಗಿನ ಜನರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಪ್ರತಿಯೊಬ್ಬರು ಕೂಡ ತಮ್ಮ ತಂದೆ ತಾಯಿಯ ಸೇವೆ ಮಾಡಬೇಕು. ತಮಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ತಂದೆ ತಾಯಿಯನ್ನು ಕಾಯಾ, ವಾಚಾ ಮನಸ್ಸಿನಿಂದ ಖುಷಿಯಾಗಿರುವಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ. ವೃದ್ದಾಪ್ಯದಲ್ಲಿ ಅವರ ಮನೋಭಿಲಾಷೆಯಂತೆ ಸೇವೆ ಮಾಡಬೇಕು. ಪ್ರತಿ ಮನೆಯಲ್ಲಿಯೂ ಶ್ರವಣ ಕುಮಾರರು ಹುಟ್ಟಬೇಕು ಎಂದು ಕೃಷ್ಣಕುಮಾರ್ ಅಭಿಮತ ವ್ಯಕ್ತಪಡಿಸಿದರು.
ಚೂಡಾ ರತ್ನ ಅವರು ಮಾತನಾಡಿ, ಮಗ ಕೃಷ್ಣಕುಮಾರ್ ಸಮಗ್ರ ಭಾರತದ ಎಲ್ಲಾ ತೀರ್ಥ ಕ್ಷೇತ್ರಗಳ ದರ್ಶನ ಮಾಡಿಸಿದ್ದಾನೆ. ನನಗೆ ಇಂತಹ ಮಗ ಸಿಕ್ಕಿರುವುದು ನನ್ನ ಸೌಭಾಗ್ಯ ಎಂದು ಹರ್ಷ ವ್ಯಕ್ತಪಡಿಸಿದರು. ಉತ್ತಮ ಜೀವನದ ಆದರ್ಶಗಳನ್ನು ತಿಳಿದುಕೊಂಡು ಸನ್ಮಾರ್ಗದಲ್ಲಿ ನಡೆಯುವ ಕೃಷ್ಣ ಕುಮಾರ್ ತನ್ನ ಬೇಕು ಬೇಡಿಕೆಗಳನ್ನು ಪೂರೈಸಿರುವುದಾಗಿ ಚೂಡಾರತ್ನ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

error: Content is protected !!