ಕೊಡಗಿನ ಶಾಸಕರಿಗೆ ಸಚಿವ ಸ್ಥಾನ ನೀಡಲು ಕರ್ನಾಟಕ ಪ್ರಜಾ ಪಾರ್ಟಿ ಒತ್ತಾಯ

February 13, 2021

ಮಡಿಕೇರಿ ಫೆ.13 : ಬಿಜೆಪಿ ಸರ್ಕಾರಕ್ಕೆ ಕೊಡಗಿನ ಬಗ್ಗೆ ನೈಜ ಕಾಳಜಿ ಇದ್ದರೆ ಇಲ್ಲಿನ ಇಬ್ಬರು ಶಾಸಕರಲ್ಲಿ ಒಬ್ಬರಿಗೆ ಸಚಿವ ಸ್ಥಾನ ನೀಡಲಿ ಎಂದು ಕರ್ನಾಟಕ ಪ್ರಜಾ ಪಾರ್ಟಿ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಬಿ.ಶಿವಣ್ಣ, ಯಾವುದೇ ಆರೋಪಗಳಿಲ್ಲದ ಇಬ್ಬರು ಶಾಸಕರಿಗೆ ಸಚಿವ ಸ್ಥಾನ ನೀಡದೆ ಬಿಜೆಪಿ ಸರ್ಕಾರ ಕೊಡಗು ಜಿಲ್ಲೆಯನ್ನು ಸಂಪÀÇರ್ಣ ನಿರ್ಲಕ್ಷಿಸಿದೆ ಎಂದು ಆರೋಪಿಸಿದರು.
ಕೊಡಗಿನ ಜನ ಹೇಗಿದ್ದರು ಬಿಜೆಪಿಗೆ ಮತ ನೀಡುತ್ತಾರೆ ಎನ್ನುವ ಅತಿಯಾದ ವಿಶ್ವಾಸವನ್ನು ಬಿಜೆಪಿ ಹೊಂದಿದೆ. ಆದರೆ, ಜನರು ಮೂರ್ಖರಲ್ಲ. ಮುಂದೆ ಆ ಪಕ್ಷಕ್ಕೆ ಸರಿಯಾದ ಪಾಠವನ್ನು ಕಲಿಸಲಿದ್ದಾರೆ ಎಂದರು.ಮೈಸೂರು ಮತ್ತು ಕೊಡಗು ಕ್ಷೇತ್ರವನ್ನು ಪ್ರತಿನಿಧಿಸುವ ಸಂಸದರು ಭಾಷಣದಲ್ಲಿ ಮಾತ್ರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಸಂಸದರು ಮೊದಲು ತಮ್ಮ ಕ್ಷೇತ್ರದ ದುಸ್ಥಿತಿಯನ್ನು ನೋಡಲಿ ಎಂದು ಅವರು ಒತ್ತಾಯಿಸಿದರು.
ಬೂಟಾಟಿಕೆಯ ಮಾತುಗಳಿಗೆ ಜನರು ಮರುಳಾಗುವುದಿಲ್ಲವೆಂದು ತಿಳಿಸಿದ ಅವರು, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯವಾಗಿ ಕರ್ನಾಟಕ ಪ್ರಜಾ ಪಾರ್ಟಿಯನ್ನು ಜನ ಬೆಂಬಲಿಸಿದರೆ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದಾಗಿ ತಿಳಿಸಿದರು.
ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಸ್ವಾಗತಿಸುವುದಾಗಿ ತಿಳಿಸಿದ ಶಿವಣ್ಣ, ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ರೈತರಿಗೆ ಮಾರಕವಾಗಿದೆಯೆಂದು ಟೀಕಿಸಿದರು. ತಮ್ಮ ಪಕ್ಷ ರೈತರಿಗೆ ಬೆಂಬಲವಾಗಿ ನಿಲ್ಲಲಿದ್ದು, ಕೇಂದ್ರ ಸರ್ಕಾರ ತಕ್ಷಣ ವಿವಾದಿತ ಕಾಯ್ದೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು. ರೈತರ ಹೋರಾಟವನ್ನು ಹತ್ತಿಕ್ಕಲು ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆಯೇ ಎನ್ನುವ ಸಂಶಯ ಮೂಡಿದೆಯೆಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಂಬರುವ ಜಿಲ್ಲಾ ಪಂಚಾಯ್ತಿ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಯಲ್ಲಿ ಕರ್ನಾಟಕ ಪ್ರಜಾ ಪಾರ್ಟಿ ಮೂಲಕ ಸ್ಪರ್ಧಿಸಲು ಆಕಾಂಕ್ಷೆ ಹೊಂದಿರುವ ಅಭ್ಯರ್ಥಿಗಳು ಜಿಲ್ಲಾ ಸಂಚಾಲಕ ಅಜ್ಜಮಕ್ಕಡ ವಿನಯ್ ಸುಬ್ಬಯ್ಯ ಅವರ ಮೊ. 9741139077 ನ್ನು ಸಂಪರ್ಕಿಸಬಹುದೆಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಕೆ.ಜೆ. ಯೋಗೇಶ್, ಮೈಸೂರು ಪ್ರಧಾನ ಕಾರ್ಯದರ್ಶಿ ಎಂ. ಚಂದ್ರಶೇಖರ್, ನಗರಾಧ್ಯಕ್ಷ ಉಮೇಶ್ ಪಿ., ಜಂಟಿ ಕಾರ್ಯದರ್ಶಿ ಬಿ.ಆರ್. ಲೋಕೇಶ್ ಹಾಗೂ ಕೊಡಗು ಸಂಚಾಲಕ ಅಜ್ಜಮಕ್ಕಡ ವಿನಯ್ ಸುಬ್ಬಯ್ಯ ಉಪಸ್ಥಿತರಿದ್ದರು.

error: Content is protected !!