ಕೇಂದ್ರದ ಬಜೆಟ್ ದೇಶದ ಅಭಿವೃದ್ಧಿಗೆ ಪೂರಕವಾಗಿದೆ : ಕೊಡಗು ಬಿಜೆಪಿ ಸಮರ್ಥನೆ

February 13, 2021

ಮಡಿಕೇರಿ ಫೆ.13 : ಕೇಂದ್ರ ಸರ್ಕಾರ ಮಂಡಿಸಿರುವ ಬಡ್ಜೆಟ್ ದೇಶದ ಅಭಿವೃದ್ಧಿಗೆ ಪೂರಕವಾಗಿದ್ದು, 2025 ರ ವೇಳೆಗೆ ದೇಶ 5 ಟ್ರಿಲಿಯನ್ ಆರ್ಥಿಕ ವ್ಯವಸ್ಥೆಯತ್ತ ಮುನ್ನಡೆಯಲಿದೆಯೆಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೊಂದು ಐತಿಹಾಸಿಕ ಬಡ್ಜೆಟ್ ಆಗಿದ್ದು, ಕೃಷಿ ಉತ್ಪಾದನಾ ಪ್ರಮಾಣ ಮತ್ತು ಮೂಲ ಸೌಕರ್ಯ ಹೆಚ್ಚಳ, ಆರೋಗ್ಯ ಕ್ಷೇತ್ರದಲ್ಲಿ ಸೌಲಭ್ಯ ವೃದ್ಧಿಗೆ ಹೆಚ್ಚು ಪೂರಕವಾಗಿದೆ ಎಂದರು. ಅಂತರಾಷ್ಟ್ರೀಯ ಹಣಕಾಸು ನೀತಿಯು ಭಾರತದ ಅತೀ ವೇಗದ ಅಭಿವೃದ್ಧಿ ಬಗ್ಗೆ ವಿಶ್ವಾಸವನ್ನು ವ್ಯಕ್ತಪಡಿಸಿದ್ದು, ಇದೇ ಕಾರಣಕ್ಕೆ ಮೂಲಭೂತ ಸೌಲಭ್ಯಕ್ಕಾಗಿ 1 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಮುಂದಿನ 5 ವರ್ಷಗಳಲ್ಲಿ ಈ ಯೋಜನೆಗಾಗಿ 100 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ಆರೋಗ್ಯ ಕ್ಷೇತ್ರಕ್ಕೆ ಕಳೆದ ವರ್ಷ 94 ಸಾವಿರ ಕೋಟಿ ರೂ.ಗಳನ್ನು ಮೀಸಲಿಡಲಾಗಿತ್ತು. ಆದರೆ, ಈ ಬಾರಿ 2.23 ಲಕ್ಷ ಕೋಟಿಗೆ ಏರಿಕೆ ಮಾಡಲಾಗಿದೆಯೆಂದರು.
ಇದೊಂದು ರೈತರ ಕಲ್ಯಾಣಕ್ಕಾಗಿ ಬದ್ಧವಾಗಿರುವ ಬಡ್ಜೆಟ್ ಆಗಿದ್ದು, ಕೃಷಿ ಸಾಲ ವಿತರಣೆಯ ಗುರಿ 16.5 ಲಕ್ಷ ಕೋಟಿ ರೂ. ಆಗಿದೆ. ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡಲಾಗಿದ್ದು, ಕೋವಿಡ್ ಲಸಿಕಾ ಅಭಿಯಾನಕ್ಕೆ 35 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. 112 ಜಿಲ್ಲೆಗಳಲ್ಲಿ ಶುದ್ಧ ನೀರು ಮತ್ತು ಮಿಷನ್ ಪೋಷಣ್-2 ಯೋಜನೆ ಜಾರಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ 24,435 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ದೇಶಾದ್ಯಂತ ಎಲ್ಲಾ ಗ್ರಾಮೀಣ ಮನೆಗಳಿಗೆ 2020ರ ಒಳಗೆ 2.87 ಲಕ್ಷ ಕೋಟಿ ವೆಚ್ಚದಲ್ಲಿ ಕೊಳವೆ ನೀರು ಪೂರೈಕೆಯಾಗಲಿದೆ. ಒಳನಾಡು ಸಾರಿಗೆ ಮತ್ತು ಬಂದರು ಕ್ಷೇತ್ರದಲ್ಲಿ ಹೊಸದಾಗಿ 1.5 ಲಕ್ಷ ಉದ್ಯೋಗ ಸೃಷ್ಟಿಸುವ ಸಂಕಲ್ಪ ಹೊಂದಲಾಗಿದೆ. ರಾಷ್ಟ್ರೀಯ ಎಕ್ಸ್‍ಪ್ರೆಸ್ ಹೆದ್ದಾರಿಗೆ 1.18 ಲಕ್ಷ ಕೋಟಿ ರೂ. ನಿಗದಿ ಪಡಿಸಲಾಗಿದೆ. ಮೇಕ್ ಇನ್ ಇಂಡಿಯಾ ಯೋಜನೆಯಡಿ 2030ರ ವೇಳೆಗೆ ಭವಿಷ್ಯದ ರೈಲ್ವೆ ವ್ಯವಸ್ಥೆಯನ್ನು ಸುಸಜ್ಜಿತಗೊಳಿಸಲಾಗುತ್ತಿದೆ. ಮುಂದಿನ ಮೂರು ವರ್ಷಗಳಲ್ಲಿ ಸುಮಾರು 100 ಜಿಲ್ಲೆಗಳಲ್ಲಿ ಅನಿಲ ವಿತರಣಾ ಜಾಲದ ವ್ಯವಸ್ಥೆ ಮಾಡಲಾಗುತ್ತದೆಂದು ತಿಳಿಸಿದರು.
ಸರ್ವರಿಗೂ ತಲೆಯ ಮೇಲೊಂದು ಸೂರು ಯೋಜನೆಯಡಿ ವಲಸೆ ಕಾರ್ಮಿಕರಿಗೆ ಮಹಾ ನಗರದಲ್ಲಿ ಉಳಿದು ಕೊಳ್ಳಲು ಕೈಗೆಟಕುವ ದರದಲ್ಲಿ ಬಾಡಿಗೆ ಮನೆಗಳ ಸಮುಚ್ಛಯ ನಿರ್ಮಾಣ ಮಾಡಲಾಗುತ್ತಿದೆ. ಕರ್ನಾಟಕ ರಾಜ್ಯದಲ್ಲಿ 1197 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ 10,904 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಬೆಂಗಳೂರು ಮೆಟ್ರೋ ನಿರ್ಮಾಣ ಕಾಮಗಾರಿಗೆ 14,788 ಕೋಟಿ ರೂ. ಮತ್ತು ಉತ್ತರ ಕರ್ನಾಟಕದಲ್ಲಿ 13 ಹೆದ್ದಾರಿಗಳ ನಿರ್ಮಾಣಕ್ಕಾಗಿ 21 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಇಷ್ಟೆಲ್ಲ ಬೃಹತ್ ಯೋಜನೆಗಳ ನಡುವೆಯೂ ಆದಾಯ ತೆರಿಗೆ ಮಿತಿಯಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲಾಗಿದೆ. ತೆರಿಗೆ ಮೌಲ್ಯ ಮಾಪನದ ಮರು ನಿಷ್ಕರ್ಷೆಗೆ ಸಮಯದ ನಿಗದಿಯನ್ನು 6 ವರ್ಷದಿಂದ 3 ವರ್ಷಕ್ಕೆ ಇಳಿಸಲಾಗಿದೆ ಎಂದು ರಾಬಿನ್ ದೇವಯ್ಯ ಮಾಹಿತಿ ನೀಡಿದರು.
ಬಿಜೆಪಿ ರೈತ ಮೋರ್ಚಾದ ರಾಜ್ಯ ಕಾರ್ಯದರ್ಶಿ ಡಾ.ಬಿ.ಸಿ.ನವೀನ್ ಕುಮಾರ್ ಮಾತನಾಡಿ, ಕೇಂದ್ರದ ಬಜೆಟ್‍ನಲ್ಲಿ ಶೇ.50 ರಷ್ಟು ಅನುದಾನವನ್ನು ಕೃಷಿ ಕ್ಷೇತ್ರಕ್ಕಾಗಿ ಮೀಸಲಿಟ್ಟಿರುವುದು ಹೆಗ್ಗಳಿಕೆಯಾಗಿದೆ ಎಂದರು. ಕೇಂದ್ರ ಸರ್ಕಾರ ಬಜೆಟ್ ಮಂಡಿಸುವ ಸಂದರ್ಭ ದೇಶದ ಸಮಸ್ತ ವ್ಯವಸ್ಥೆಗಳಿಗೆ ಆದ್ಯತೆ ನೀಡಿ ಹಣಕಾಸು ಹಂಚಿಕೆ ಮಾಡಬೇಕಾಗುತ್ತದೆ. ಕಾಫಿ ಸೇರಿದಂತೆ ವಾಣಿಜ್ಯ ಬೆಳೆಗಳ ಆಮದು ಮತ್ತು ರಫ್ತಿನ ಬಗ್ಗೆ ಇತರ ರಾಷ್ಟ್ರಗಳೊಂದಿಗೂ ಚರ್ಚಿಸುವ ಅಗತ್ಯವಿರುವುದರಿಂದ ಈ ಬಜೆಟ್‍ನಲ್ಲಿ ಕಾಫಿ ಬಗ್ಗೆ ಪ್ರಸ್ತಾಪಿಸಿಲ್ಲವೆಂದು ಅವರು ಸ್ಪಷ್ಟಪಡಿಸಿದರು.
::: ರಾಜ್ಯ ಬಜೆಟ್‍ನಲ್ಲಿ ನಿರೀಕ್ಷೆ :::
ಕೊಡಗಿನ ಬೆಳೆಗಾರರ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆಯುವುದಕ್ಕಾಗಿ ಹಲವು ಬಾರಿ ನಿಯೋಗವನ್ನು ಕರೆದೊಯ್ಯಲಾಗಿದೆ. ಬೆಳೆಗಾರರ ನೆರವಿಗೆ ಬರುವಂತಹ ಅಂಶಗಳನ್ನು ಮುಂದಿನ ರಾಜ್ಯದ ಬಜೆಟ್‍ನಲ್ಲಿ ನಿರೀಕ್ಷಿಸಲಾಗಿದೆ ಎಂದರು.
ಜನ ಸೆಸ್ ಮತ್ತು ತೆರಿಗೆ ಪದ್ಧತಿಯ ವ್ಯತ್ಯಾಸಗಳನ್ನು ಅರಿತುಕೊಳ್ಳಬೇಕಾಗಿದ್ದು, ಸೆಸ್‍ನ್ನು ರೈತರು ಮತ್ತು ಬಡ ವರ್ಗಕ್ಕೆ ಮೀಸಲಿಡಲಾಗುತ್ತಿದೆಯೆಂದು ಸ್ಪಷ್ಟಪÀಡಿಸಿದರು.
::: ಬಡವರಿಗೆ ಬಿಪಿಎಲ್ ಇದೆ :::
ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡ ನವೀನ್ ಕುಮಾರ್, ದುಬಾರಿ ಬೆಲೆಯ ವಸ್ತುಗಳನ್ನು ಖರೀದಿಸಲಾಗದ ಬಡವರಿಗಾಗಿ ಬಿಪಿಎಲ್ ಪಡಿತರ ಚೀಟಿ ಮೂಲಕ ದಿನಸಿ ಸಾಮಗ್ರಿಗಳನ್ನು ನೀಡಲಾಗುತ್ತಿದೆ ಎಂದರು.
ಆರ್ಥಿಕ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಗೋಪಾಲಕೃಷ್ಣ ಮಾತನಾಡಿ, ದೇಶದಲ್ಲಿ ದಿಢೀರ್ ಆಗಿ ಅಗತ್ಯ ವಸ್ತುಗಳ ಬೇಡಿಕೆ ಹೆಚ್ಚಾದ ಕಾರಣ ಅಗತ್ಯ ವಸ್ತುಗಳ ಬೆಲೆಯು ಏರಿಕೆಯಾಗಿದೆಯೆಂದು ಸಮರ್ಥಿಸಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ವಕ್ತಾರರಾದ ಮಹೇಶ್ ಜೈನಿ, ಸುವಿನ್ ಗಣಪತಿ ಹಾಗೂ ಮಡಿಕೇರಿ ನಗರಾಧ್ಯಕ್ಷ ಮನು ಮಂಜುನಾಥ್ ಉಪಸ್ಥಿತರಿದ್ದರು.

error: Content is protected !!