ಸರ್ಕಾರ ಬೆಳೆಗಾರರ ನೆರವಿಗೆ ಬರಲಿ : ಮಡಿಕೇರಿ ಮಹಿಳಾ ಕಾಂಗ್ರೆಸ್ ಒತ್ತಾಯ

February 14, 2021

ಮಡಿಕೇರಿ ಫೆ.14 : ಕಾಫಿ ಖರೀದಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವುದು, ವಿಶೇಷ ಪ್ಯಾಕೇಜ್ ಘೋಷಿಸುವುದು ಮತ್ತು ಗೊಬ್ಬರದ ಮೇಲಿನ ಸಹಾಯಧನವನ್ನು ಹೆಚ್ಚಿಸುವ ಮೂಲಕ ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರ ನೆರವಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬರಬೇಕೆಂದು ಮಡಿಕೇರಿ ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹೊಟ್ಟೆಯಂಡ ಪಾರ್ವತಿ ಫ್ಯಾನ್ಸಿ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೋಟ್ಯಾಂತರ ರೂಪಾಯಿ ವಿದೇಶಿ ವಿನಿಮಯ ತಂದು ಕೊಡುವ ಕಾಫಿಯನ್ನು ಬೆಳೆಯುವ ಬೆಳೆಗಾರರ ನಿರೀಕ್ಷೆಗಳು ಕೇಂದ್ರದ ಬಜೆಟ್‍ನಲ್ಲಿ ಹುಸಿಯಾಗಿದೆ ಎಂದು ಟೀಕಿಸಿದ್ದಾರೆ. ಮುಂಬರುವ ರಾಜ್ಯ ಬಜೆಟ್‍ನಲ್ಲಾದರೂ ಬೆಳೆಗಾರರ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಅಗತ್ಯ ನೆರವು ಘೋಷಿಸಬೇಕೆಂದು ಆಗ್ರಹಿಸಿದ್ದಾರೆ.
ರೊಬಸ್ಟಾ ಕಾಫಿ ಬೆಲೆ 25 ವರ್ಷದ ಹಿಂದಿನ ಮಟ್ಟಕ್ಕೆ ಕುಸಿದಿದ್ದು, ತೋಟಗಳ ನಿರ್ವಹಣೆ ಬಗ್ಗೆ ಬೆಳೆಗಾರರು ತೀವ್ರ ಚಿಂತಿತರಾಗಿದ್ದಾರೆ. 50 ಕೆ.ಜಿ. ರೊಬಸ್ಟಾ ಚೆರ್ರಿ ಚೀಲ ಒಂದಕ್ಕೆ 2900 ರಿಂದ 3100 ರೂ. ವರೆಗೆ ಮಾತ್ರ ದೊರೆಯುತ್ತಿದೆ. ಬೆಳೆಗಾರರ ಪಾಲಿಗೆ ಈ ಮೊತ್ತ ಅತ್ಯಲ್ಪವಾಗಿದೆ. ವರ್ಷವಿಡೀ ಕೆಲಸ ನಡೆಯುವ ಕಾಫಿ ತೋಟದಲ್ಲಿ ಎಕರೆಗೆ ರೂ.60 ಸಾವಿರ ದಿಂದ 1 ಲಕ್ಷದ ವರೆಗೆ ಖರ್ಚಾಗುತ್ತಿದೆ.
ಕನಿಷ್ಠ ಕೆಲಸ ಮಾಡಿಸಿದರೂ ಎಕರೆಗೆ 60 ಸಾವಿರ ಖರ್ಚು ಇದ್ದು, ಎಕರೆಗೆ 20 ಚೀಲ ಕಾಫಿ ಇಳುವರಿ ಬಂದರೆ ಯಾವುದೇ ಲಾಭ ಇಲ್ಲದೆ ತೋಟ ನಡೆಸಬೇಕಾಗುತ್ತದೆ. ಕುಸಿದಿರುವ ಕನಿಷ್ಠ ಬೆಲೆಯಿಂದ ಬೆಳೆಗಾರರು ಕಂಗಾಲಾಗಿದ್ದು, ಭತ್ತದಂತೆ ಕಾಫಿ ಬೆಳೆಯ ಮೇಲೂ ಆಸಕ್ತಿ ಕಡಿಮೆಯಾಗುವ ಆತಂಕವಿದೆ ಎಂದು ಪಾರ್ವತಿ ಫ್ಯಾನ್ಸಿ ತಿಳಿಸಿದ್ದಾರೆ.
ಪ್ರಾಕೃತಿಕ ವಿಕೋಪ, ಅಕಾಲಿಕ ಮಳೆ, ವನ್ಯಜೀವಿಗಳ ದಾಳಿ, ದುಬಾರಿ ನಿರ್ವಹಣಾ ವೆಚ್ಚ, ಕುಸಿದ ಬೆಳೆಯ ಬೆಲೆ ಹೀಗೆ ಅನೇಕ ಸಮಸ್ಯೆಗಳ ನಡುವೆ ಕಾಫಿ ಬೆಳೆಗಾರ ಸಂಕಷ್ಟಕ್ಕೆ ಸಿಲುಕಿದ್ದಾನೆ. ದೇಶದ ಆರ್ಥಿಕ ಕ್ಷೇತ್ರಕ್ಕೆ ಕಾಫಿ ಸಾಕಷ್ಟು ಬಲ ತುಂಬುತ್ತಿದ್ದರೂ ಬೆಳೆಯುವ ಬೆಳೆಗಾರನ ನೆರವಿಗೆ ಕೇಂದ್ರ ಸರ್ಕಾರ ಬಾರದಿರುವುದು ವಿಷಾದಕರವೆಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಶಾಸಕರು ಹಾಗೂ ಸಂಸದರು ಪ್ರತಿನಿಧಿಸುತ್ತಿರುವ ಪಕ್ಷವೇ ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದು, ಬೆಳೆಗಾರರ ಬಗ್ಗೆ ಇವರುಗಳು ತಮ್ಮ ಬದ್ಧತೆಯನ್ನು ಪ್ರದರ್ಶಿಸಬೇಕಾಗಿದೆ ಎಂದು ಪಾರ್ವತಿ ಫ್ಯಾನ್ಸಿ ಹೇಳಿದ್ದಾರೆ.
ಕೇಂದ್ರದ ಬಜೆಟ್‍ನಿಂದ ನಿರಾಶೆ ಅನುಭವಿಸಿರುವ ಬೆಳೆಗಾರರು ರಾಜ್ಯ ಬಜೆಟ್‍ನಲ್ಲಿ ಹಲವು ನಿರೀಕ್ಷೆಗಳನ್ನಿರಿಸಿದ್ದಾರೆ. ಇದು ಹುಸಿಯಾಗದಂತೆ ಜಿಲ್ಲೆಯ ಜನಪ್ರತಿನಿಧಿಗಳು ನೋಡಿಕೊಳ್ಳಬೇಕು ಮತ್ತು ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಅವರು ಒತ್ತಾಯಿಸಿದ್ದಾರೆ.

error: Content is protected !!