ಕಾರ್ಯಪ್ಪ ಕಾಲೇಜ್ ಎನ್.ಸಿ.ಸಿ ಅಧಿಕಾರಿ ಮೇ.ಡಾ.ರಾಘವರಿಗೆ ಮುಖ್ಯಮಂತ್ರಿ ಪ್ರಶಂಸಾ ಪ್ರಶಸ್ತಿ

February 14, 2021

ಮಡಿಕೇರಿ ಫೆ.14 : ಯುವ ಜನಾಂಗದಲ್ಲಿ ಶಿಸ್ತು, ರಾಷ್ಟ್ರೀಯ ಐಕ್ಯತಾ ಮನೋಭಾವ, ಸಮಾಜಮುಖಿ ನಾಯಕತ್ವ ಬೆಳೆಸುವ ಮೂಲಕ ಎನ್.ಸಿ.ಸಿಯ ಪ್ರತಿಷ್ಠೆಯನ್ನು ಹೆಚ್ಚಿಸುವಂತಹ ಸೇವೆ ಸಲ್ಲಿಸಿರುವುದನ್ನು ಪರಿಗಣಿಸಿ, ಅತ್ಯುತ್ತಮ ಎನ್‍ಸಿಸಿ ಅಧಿಕಾರಿಗಳಿಗೆ ಕೊಡಮಾಡುವ ಪ್ರತಿಷ್ಟಿತ ಮುಖ್ಯಮಂತ್ರಿ ಪ್ರಶಂಸಾ ಪ್ರಶಸ್ತಿ ಮತ್ತು ಪದಕವನ್ನು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥರಾದ ಮೇಜರ್ ಡಾ. ರಾಘವ. ಬಿ ಇವರಿಗೆ ನೀಡಿ ಗೌರವಿಸಲಾಗಿದೆ.
ಇವರು 2020-21 ನೇ ಸಾಲಿನ ಮುಂಖ್ಯಮಂತ್ರಿ ಪ್ರಶಂಸಾ ಪ್ರಶಸ್ತಿ ಮತ್ತು ಪದಕ ಪಡೆದ ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಕೊಡಗು ಜಿಲ್ಲೆಗಳನ್ನು ಒಳಗೊಂಡ ಮಂಗಳೂರು ವಿಭಾಗದ ಏಕೈಕ ಅಧಿಕಾರಿಯಾಗಿದ್ದಾರೆ.
ಅಭಿನಂದನಾ ಸಮಾರಂಭದಲ್ಲಿ ಎನ್‍ಸಿಸಿ 19ನೇ ಕರ್ನಾಟಕ ಬೆಟಾಲಿಯನ್‍ನ ಕಮಾಂಡಿಂಗ್ ಆಫೀಸರ್ ಕರ್ನಲ್ ಚೇತನ್ ಧಿಮನ್ ಇವರು ಪ್ರಶಸ್ತಿ ಮತ್ತು ಪದಕವನ್ನು ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ನವದೀಪ್ ಸಿಂಗ್ ಬೇಡಿ, ಸುಬೇದಾರ್ ಮೇಜರ್ ಸುನಿಲ್ ಕುಮಾರ್ ಎಂ.ಕೆ ಮತ್ತಿತರರು ಉಪಸ್ಥಿತರಿದ್ದರು.
1996-97 ರ ಶೈಕ್ಷಣಿಕ ವರ್ಷದಿಂದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಎನ್.ಸಿ.ಸಿ ಅಧಿಕಾರಿಯಾಗಿ ಜವಾಬ್ದಾರಿ ವಹಿಸಿಕೊಂಡ ಮೇಜರ್ ಡಾ.ರಾಘವ್. ಬಿ ಇವರು, ತಮ್ಮ ಎರಡು ದಶಕಕ್ಕಿಂತಲೂ ಹೆಚ್ಚಿನ ಸೇವಾವಧಿಯಲ್ಲಿ ಹಲವಾರು ಎನ್.ಸಿ.ಸಿ ಕೆಡೆಟ್‍ಗಳಿಗೆ ಸೂಕ್ತ ತರಬೇತಿ ನೀಡಿ ಭಾರತೀಯ ಸೇನಾಪಡೆಯ ಕಮಿಷನ್ಡ್ ಆಫೀಸರ್ಸ್ ಸೇರಿದಂತೆ ವಿವಿಧ ಹುದ್ದೆಗಳಿಗೆ ನಿಯುಕ್ತಿಗೊಳ್ಳಲು ಮಾರ್ಗದರ್ಶನ ನೀಡಿರುತ್ತಾರೆ.
ಅಲ್ಲದೆ, ಇವರ ತರಬೇತಿ ಹಾಗೂ ಮಾರ್ಗದರ್ಶನದಿಂದಾಗಿ, ಬಹುತೇಕ ಪ್ರತೀ ವರ್ಷವೂ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಕಾಲೇಜಿನಿಂದ ವಿದ್ಯಾರ್ಥಿಗಳು ಆಯ್ಕೆಯಾಗಿ ಕರ್ನಾಟಕ ಗೋವಾ ಡೈರೆಕ್ಟರೇಟನ್ನು ಪ್ರತಿನಿಧಿಸುವ ಮೂಲಕ ರಾಜ್ಯ, ಕೊಡಗು ಜಿಲ್ಲೆ ಹಾಗೂ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಇವರ ಸೇವೆಯನ್ನು ಪರಿಗಣಿಸಿ ಈ ಹಿಂದೆ ರಾಷ್ಟ್ರ, ರಾಜ್ಯಮಟ್ಟದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಇವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿಗಳ ಪರವಾಗಿ ಪ್ರಾಂಶುಪಾಲ ಡಾ.ಚೌರೀರ ಜಗತ್ ತಿಮ್ಮಯ್ಯ ಅವರು ಅಭಿನಂದನೆ ಸಲ್ಲಿಸಿದ್ದಾರೆ.

error: Content is protected !!