ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ : ಫೆ.18 ರಂದು ಮಡಿಕೇರಿಯಲ್ಲಿ ಅಹಿಂದ ಪ್ರತಿಭಟನೆ

February 15, 2021

ಮಡಿಕೇರಿ ಫೆ.15 : ರಾಜ್ಯದಲ್ಲಿ ಶಾಶ್ವತ ಆಯೋಗ ನಡೆಸಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಗಣತಿಯ ವರದಿಯನ್ನು ತಕ್ಷಣ ಬಿಡುಗಡೆ ಮಾಡಬೇಕು ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕೆಂದು ಒತ್ತಾಯಿಸಿ ಕೊಡಗು ಜಿಲ್ಲಾ ಅಹಿಂದ ಒಕ್ಕೂಟದ ವತಿಯಿಂದ ಫೆ.18 ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದೆಂದು ಒಕ್ಕೂಟದ ಸ್ಥಾಪಕ ಅಧ್ಯಕ್ಷ ಟಿ.ಪಿ.ರಮೇಶ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗಣತಿಯ ವರದಿಯನ್ನು ಬಿಡುಗಡೆ ಮಾಡದಿದ್ದರೆ ವಿವಿಧÀ ಜನಾಂಗಗಳ ಸ್ಥಿತಿಗತಿ ಹೇಗಿದೆ ಎನ್ನುವುದು ತಿಳಿಯುವುದಿಲ್ಲವೆಂದು ಅಭಿಪ್ರಾಯಪಟ್ಟರು. ಶಾಶ್ವತ ಆಯೋಗದ ವರದಿ ತಯಾರಿಸಲು 158 ಕೋಟಿ ರೂ.ಗಳಷ್ಟು ಖರ್ಚು ಮಾಡಲಾಗಿದೆ. ಸುಮಾರು 1351 ಜನಾಂಗಗಳನ್ನು ಗುರುತು ಮಾಡಲಾಗಿದ್ದು, ಹೆಚ್ಚುವರಿಯಾಗಿ 464 ಜಾತಿಗಳು ಸೇರ್ಪಡೆಗೊಂಡಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದೆಲ್ಲವೂ ಸಮಗ್ರವಾಗಿ ಬಹಿರಂಗವಾದರಷ್ಟೇ ಎಲ್ಲಾ ಜಾಂಗಗಳಿಗೆ ನ್ಯಾಯ ಸಿಗಲು ಸಾಧ್ಯ, ಆದರೆ ಸರ್ಕಾರದಿಂದ ಇಲ್ಲಿಯವರೆಗೆ ವರದಿಯನ್ನು ಬಿಡುಗಡೆ ಮಾಡಲು ಸಾಧ್ಯವೇ ಆಗಿಲ್ಲವೆಂದು ರಮೇಶ್ ಟೀಕಿಸಿದರು.
ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಜನಸಾಮಾನ್ಯರು ಜೀವನ ನಡೆಸುವುದೇ ಕಷ್ಟವಾಗಿದೆ. ಕಳೆದ ಒಂದು ವರ್ಷದಲ್ಲಿ ಡೀಸೆಲ್ ಬೆಲೆ ಶೇ.23 ಮತ್ತು ಪೆಟ್ರೋಲ್ ಬೆಲೆ ಶೇ.25 ರಷ್ಟು ಏರಿಕೆಯಾಗಿದೆ. ಆದಾಯ ಕಡಿಮೆಯಾಗಿ ಖರ್ಚು ಹೆಚ್ಚಾಗುತ್ತಿದ್ದು, ಜನರ ಆರ್ಥಿಕ ಮಟ್ಟ ಚೇತರಿಸಿಕೊಳ್ಳುವುದು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ತೈಲೋತ್ಪನ್ನಗಳಿಗೆ ಒಂದು ವರ್ಷದ ಹಿಂದಿನ ದರವನ್ನು ನಿಗಧಿ ಪಡಿಸಿದರೆ ಪರಿಸ್ಥಿತಿ ಸುಧಾರಿಸಬಹುದೆಂದು ಆರ್ಥಿಕ ತಜ್ಞರು ಸಲಹೆ ನೀಡಿದ್ದು, ಸರ್ಕಾರ ಇದನ್ನು ಪರಿಗಣಿಸಬೇಕೆಂದು ಒತ್ತಾಯಿಸಿದರು.
ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪಗಳಿಂದ ಬೆಳೆಗಾರರು ಸಾಕಷ್ಟು ಕಷ್ಟ, ನಷ್ಟಗಳನ್ನು ಅನುಭವಿಸಿದ್ದು, ತಕ್ಷಣ ಬೆಳೆ ಪರಿಹಾರ ಬಿಡುಗಡೆ ಮಾಡಬೇಕು ಮತ್ತು ರೈತರಿಗೆ ಬೇಡವಾದ ಕೃಷಿ ಕಾಯ್ದೆಯನ್ನು ಕೇಂದ್ರ ಸರ್ಕಾರ ತಕ್ಷಣ ಕೈಬಿಡಬೇಕೆಂದು ಪ್ರತಿಭಟನೆಯ ಸಂದರ್ಭ ಒತ್ತಾಯಿಸಲಾಗುವುದೆಂದು ಅವರು ಹೇಳಿದರು.
ನಗರದ ಗಾಂಧಿ ಮಂಟಪದ ಬಳಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಮೆರವಣಿಗೆ ನಡೆಸಿ ನಂತರ ಮನವಿ ಪತ್ರ ಸಲ್ಲಿಸಲಾಗುವುದು ಎಂದರು.
ಯರವ ಸಮಾಜದ ಮಂದಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಪೊನ್ನಂಪೇಟೆಯಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ಮತ್ತು ಕಕ್ಕಬ್ಬೆ ರಸ್ತೆ ದುರಸ್ತಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಅಹಿಂದ ಒಕ್ಕೂಟ ಬೆಂಬಲ ಸೂಚಿಸಲಿದೆ ಎಂದು ರಮೇಶ್ ಇದೇ ಸಂದರ್ಭ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ ಟಿ.ಎಂ.ಮುದ್ದಯ್ಯ, ಕಾರ್ಯಾಧ್ಯಕ್ಷ ಬೇಬಿಮ್ಯಾಥ್ಯು, ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್ ಹಾಗೂ ನಿರ್ದೇಶಕ ಆರ್.ಪಿ.ಚಂದ್ರಶೇಖರ್ ಉಪಸ್ಥಿತರಿದ್ದರು.

error: Content is protected !!