ಶಾಶ್ವತ ಪುನರ್ವಸತಿ ಕಲ್ಪಿಸಲು ಆಗ್ರಹ : ನೆಲ್ಯಹುದಿಕೇರಿ ಹೋರಾಟ ಸಮಿತಿಯಿಂದ ಪ್ರತಿಭಟನೆ

February 15, 2021

ಮಡಿಕೇರಿ ಫೆ.15 : ನೆಲ್ಯಹುದಿಕೇರಿಯ ಕಾವೇರಿ ನದಿ ದಡ ನಿವಾಸಿಗಳಿಗೆ ಶಾಶ್ವತ ಪುನರ್ವಸತಿ ಕಲ್ಪಿಸಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಒತ್ತಾಯಿಸಿ ನೆಲ್ಯಹುದಿಕೇರಿ ನಿರಾಶ್ರಿತರ ಹೋರಾಟ ಸಮಿತಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು.
ನಗರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಮಿತಿ ಸದಸ್ಯರು ಸರ್ಕಾರ ಹಾಗೂ ಜಿಲ್ಲಾಡಳಿತ ನಿರಾಶ್ರಿತರನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದರು. ಕಾವೇರಿ ನದಿ ಪ್ರವಾಹದಲ್ಲಿ ಅನೇಕ ಮನೆಗಳು ಹಾನಿಗೀಡಾಗಿವೆ, ಹಲವು ಬಾರಿ ಶಾಶ್ವತ ಪರಿಹಾರಕ್ಕಾಗಿ ಮನವಿಯನ್ನು ಸಲ್ಲಿಸಲಾಗಿದೆ. ಆದರೆ ಇಲ್ಲಿಯವರೆಗೆ ಸೂಕ್ತ ಸ್ಪಂದನೆ ದೊರೆತ್ತಿಲ್ಲ. ಅಭ್ಯತ್ ಮಂಗಲದಲ್ಲಿ ನಿರಾಶ್ರಿತರಿಗೆ ನಿವೇಶನ ನೀಡುವ ಸಲುವಾಗಿ ಒತ್ತುವರಿ ತೆರವು ಮಾಡಲಾಗಿದೆ. ಆದರೆ ಅಲ್ಲಿದ್ದ ಮರಗಳನ್ನು ಕಡಿಯಲು ಅರಣ್ಯ ಇಲಾಖೆ ವಿಳಂಬ ಮಾಡುತ್ತಿದೆ, ಈಗಾಗಲೇ ಕಡಿದು ಹಾಕಿರುವ ಕೆಲವು ಮರಗಳನ್ನು ತೆರವು ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೋರಾಟ ಸಮಿತಿಯ ಅಧ್ಯಕ್ಷ ಪಿ.ಆರ್.ಭರತ್ ಮಾತನಾಡಿ ನೆಲ್ಯಹುದಿಕೇರಿಯ ಕಾವೇರಿ ನದಿ ದಡದಲ್ಲಿ 200ಕ್ಕೂ ಮೇಲ್ಪಟ್ಟ ಕುಟುಂಬಗಳು 25 ವರ್ಷಕ್ಕೂ ಹೆಚ್ಚು ಕಾಲದಿಂದ ನೆಲೆ ನಿಂತಿದ್ದಾರೆ. ಪ್ರತಿ ವರ್ಷ ಮಳೆಗಾಲದಲ್ಲಿ ಕಾವೇರಿ ನದಿ ನೀರಿನ ಪ್ರವಾಹಕ್ಕೆ ಸಿಲುಕಿ ಮನೆಗಳು ಜಲಾವೃತವಾಗುತ್ತಿವೆ. 2018 ಮತ್ತು 2019ರ ಪ್ರವಾಹದಲ್ಲಿ ನೂರಾರು ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದರೇ, ಇಂದಿಗೂ ಕೂಡ ಹಲವಾರು ಮನೆಗಳು ವಾಸಕ್ಕೆ ಯೋಗ್ಯವಾಗಿಲ್ಲ ಎಂದು ಹೇಳಿದರು.
ಕೂಲಿ ಕೆಲಸವನ್ನೇ ನಂಬಿಕೊಂಡು ಬದುಕುತ್ತಿರುವ ಬಡ ಕುಟುಂಬಗಳ ನೆರವಿಗೆ ಸರಕಾರ ಮತ್ತು ಜಿಲ್ಲಾಡಳಿತ ಮುಂದಾಗುತ್ತಿಲ್ಲ ಎಂದು ಹೇಳಿದ ಭರತ್, ಮಳೆಗಾಲ ಪ್ರಾರಂಭವಾಗಲು ಕೇವಲ 4 ತಿಂಗಳು ಮಾತ್ರವೇ ಉಳಿದಿದ್ದು, ತಕ್ಷಣ ನಿವೇಶನ ಮತ್ತು ಮನೆಗಳ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು. ತಪ್ಪಿದಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಸಿದ್ದಾಪುರ, ನೆಲ್ಯಹುದಿಕೇರಿ, ಕರಡಿಗೋಡು ಸೇರಿದಂತೆ ಕಾವೇರಿ ನದಿ ದಡದ ಪ್ರವಾಹ ಸಂತ್ರಸ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!