ಮಡಿಕೇರಿಯಲ್ಲಿ ನೀರು ಶುದ್ಧೀಕರಣ ಘಟಕ ಸ್ಥಾಪನೆ : ಸೂಕ್ತ ಕ್ರಮಕ್ಕೆ ಸಚಿವ ಬಸವರಾಜ ಸೂಚನೆ

February 15, 2021

ಮಡಿಕೇರಿ ಫೆ.15 : ಮಡಿಕೇರಿ ನಗರದಲ್ಲಿ ಮಲೀನ ನೀರು ಶುದ್ಧೀಕರಣ ಘಟಕ ನಿರ್ಮಿಸಲು ತಕ್ಷಣ ಜಾಗ ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಗರಾಭಿವೃದ್ಧಿ ಸಚಿವÀ ಬಿ.ಎ.ಬಸವರಾಜ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಕೈಗೊಳ್ಳಲಾಗಿರುವ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಡಿಕೇರಿ ನಗರದಲ್ಲಿ ಮಲೀನ ನೀರು ಶುದ್ಧೀಕರಣ ಘಟಕ ನಿರ್ಮಾಣಕ್ಕೆ 50 ಕೋಟಿ ರೂ. ಹಣವಿದೆ. ಆದರೆ ಇದುವರೆಗೆ ಜಾಗ ಗುರುತಿಸದೆ ಹಣ ಸದ್ಭಳಕೆಯಾಗಿಲ್ಲ. ನಗರದ ಅಭಿವೃದ್ಧಿ ದೃಷ್ಟಿಯಿಂದ ಶೀಘ್ರ ಜಾಗ ಗುರುತಿಸಿ ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡುವಂತೆ ಬಿ.ಎ.ಬಸವರಾಜ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮುಂದಿನ ಅಧಿವೇಶನ ನಂತರ ಕೊಡಗು ಜಿಲ್ಲೆಗೆ ಭೇಟಿ ನೀಡಲಿದ್ದು, ಆ ಸಂದರ್ಭದಲ್ಲಿ ಭೂಮಿ ಪೂಜೆ ನೆರವೇರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರು ನಿರ್ದೇಶನ ನೀಡಿದರು.
ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗುತ್ತದೆ. ಆದರೆ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವುದು ಕೇಳಿ ಬರುತ್ತದೆ. ಆದ್ದರಿಂದ ಕುಡಿಯುವ ನೀರಿನ ಮೂಲವನ್ನು ಸಂರಕ್ಷಿಸಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಗಮನಹರಿಸುವುದು ಅತ್ಯಗತ್ಯ ಎಂದು ಬೈರತಿ ಬಸವರಾಜ ಅವರು ಹೇಳಿದರು.
ನಗರ, ಪಟ್ಟಣ ಪಂಚಾಯಿತಿ ವ್ಯಾಪ್ತಿಗಳಲ್ಲಿ ಯಾವುದೇ ಕಾರಣಕ್ಕೂ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಾರದು. ಹಳೆಯ ಪೈಪು ಮತ್ತು ಮೋಟಾರುಗಳನ್ನು ಬದಲಿಸಿ ಕುಡಿಯುವ ನೀರು ಪೂರೈಸುವಂತೆ ಸಚಿವರು ನಿರ್ದೇಶನ ನೀಡಿದರು.
ಮಡಿಕೇರಿ ನಗರ ಮತ್ತು ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಬೆಟ್ಟಗುಡ್ಡ ಪ್ರದೇಶವಾಗಿರುವುದರಿಂದ ನಾಗರಿಕರ ಸಂಚಾರಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಕಾಮಗಾರಿ ನಿರ್ವಹಿಸುವಂತೆ ಸಚಿವರು ಸೂಚಿಸಿದರು.
ಸೋಮವಾರಪೇಟೆಯಲ್ಲಿ ಪೈಪುಲೈನ್ ಅಳವಡಿಕೆ ಸಂಬಂಧಿಸಿದಂತೆ ನೀಲನಕ್ಷೆ ತಯಾರಿಸಿ ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಮುಖ್ಯಾಧಿಕಾರಿಗೆ ನಿರ್ದೇಶನ ನೀಡಿದರು.
ಮಡಿಕೇರಿ ನಗರ ಮತ್ತು ಜಿಲ್ಲೆಯ ಮೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಗಳಲ್ಲಿ ಬಡಾವಣೆ ಅಭಿವೃದ್ಧಿ ಸಂಬಂಧಿಸಿದಂತೆ 50:50 ಅನುಪಾತದಲ್ಲಿ ಭೂಮಿ ನೀಡಲು ಮುಂದೆ ಬರುವವರನ್ನು ಪತ್ತೆ ಹಚ್ಚಿ ಬಡಾವಣೆ ಅಭಿವೃದ್ಧಿಗೆ ಮುಂದಾಗಬೇಕು ಎಂದು ನಗರಾಭಿವೃದ್ಧಿ ಸಚಿವರು ಸಲಹೆ ಮಾಡಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರಾದ ಕೆ.ಜಿ.ಬೋಪಯ್ಯ ಅವರು ನಗರಾಭಿವೃದ್ಧಿ ಇಲಾಖೆಯಿಂದ ಒದಗಿಸುವ ನಿವೇಶನದ ದರಕ್ಕಿಂತ ಖಾಸಗಿ ಬಡಾವಣೆಗಳಲ್ಲಿ ನಿವೇಶನ ದರ ಕಡಿಮೆ ಇರುವುದರಿಂದ ಕೊಡಗು ಜಿಲ್ಲೆಯಲ್ಲಿ ಅಷ್ಟಾಗಿ ಯಶಸ್ಸು ಕಾಣುತ್ತಿಲ್ಲ ಎಂದು ಸಚಿವರ ಗಮನಕ್ಕೆ ತಂದರು.
ಕುಶಾಲನಗರದಲ್ಲಿ ಮಳೆಗಾಲದ ಅವಧಿಯಲ್ಲಿ ಪ್ರವಾಹ ಉಂಟಾಗಿ ತುಂಬಾ ತೊಂದರೆಯಾಗುತ್ತಿದೆ. ಇದರಿಂದ ಹೂಳು ತೆಗೆಯುವಂತಾಗಬೇಕು. ಆ ನಿಟ್ಟಿನಲ್ಲಿ ನಗರ/ ಪಟ್ಟಣ ವ್ಯಾಪ್ತಿಯ ಜಾಗವನ್ನು ಗುರುತಿಸಬೇಕಿದೆ ಎಂದು ಸಚಿವರು ಹೇಳಿದರು.
ಈ ಕುರಿತು ಪ್ರತಿಕ್ರಿಯಿಸಿದ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ಕುಶಾಲನಗರ ಪಟ್ಟಣದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಹೂಳೆತ್ತುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಶೇ.50 ರಷ್ಟು ಹೂಳೆತ್ತುವ ಕಾರ್ಯ ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದರು.
ಪ್ರತಿಯೊಂದು ಕುಟುಂಬಕ್ಕೂ ಕುಡಿಯುವ ನೀರು ಪೂರೈಸಬೇಕಿದೆ. ನಗರ, ಪಟ್ಟಣ ಪ್ರದೇಶದ ಜನರಿಗೆ ಕನಿಷ್ಠ ಮೂಲ ಸೌಲಭ್ಯವನ್ನಾದರೂ ಒದಗಿಸಬೇಕು. ಸಾರ್ವಜನಿಕರ ಕೆಲಸ ಕಾಲ ಮಿತಿಯಲ್ಲಿ ಆಗಬೇಕು ಎಂದರು.
ಕೊಡಗು ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುವುದರಿಂದ ಹೊಸ ತಂತ್ರಜ್ಞಾನ ಅಳವಡಿಸಿ ಕುಡಿಯುವ ನೀರು ಪೂರೈಕೆಗೆ ಕ್ರಮವಹಿಸಬೇಕು. ಮಳೆಗಾಲ ಆರಂಭಕ್ಕೂ ಮೊದಲು ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ನಗರಾಭಿವೃದ್ಧಿ ಸಚಿವರು ನಿರ್ದೇಶನ ನೀಡಿದರು.
ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ ಅವರು ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿದಾಗ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಹುದು. ಆದ್ದರಿಂದ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ವಿಧಾನ ಪರಿಷತ್ತಿನಲ್ಲಿ ಮಡಿಕೇರಿ ನಗರ ಮತ್ತು ಮೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸಂಬಂಧಿಸಿದಂತೆ ಮಾನ್ಯ ಸಚಿವರು ಗಮನ ಸೆಳೆದಾಗ ಕೊಡಗು ಜಿಲ್ಲೆಗೆ ಖುದ್ದು ಭೇಟಿ ನೀಡಿದ್ದಾರೆ. ಆ ನಿಟ್ಟಿನಲ್ಲಿ ಅಭಿವೃದ್ಧಿ ಕೆಲಸಗಳು ಆಗಬೇಕು ಎಂದರು.
ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರು ಮಾತನಾಡಿ ಮಡಿಕೇರಿ ಮತ್ತು ಮೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾಗದಂತೆ ಅಧಿಕಾರಿಗಳು ಗಮನ ಹರಿಸಬೇಕು. ನಗರಾಭಿವೃದ್ಧಿ ವ್ಯಾಪ್ತಿಗೆ ಸಂಬಂಧಿಸಿದಂತೆ ಇನ್ನಷ್ಟು ಮುತುವರ್ಜಿ ವಹಿಸಬೇಕು ಎಂದು ಅವರು ಹೇಳಿದರು.
ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಮೇಶ್ ಹೊಳ್ಳ ಮಾತನಾಡಿ ಮೂಡಾದಿಂದ ಇದುವರೆಗೆ ಯಾವುದೇ ಬಡಾವಣೆ ಅಭಿವೃದ್ಧಿ ಪಡಿಸಿಲ್ಲ ಎಂದು ಅವರು ತಿಳಿಸಿದರು.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮುಖ್ಯ ಅಭಿಯಂತರರಾದ ಸಿದ್ದನಾಯಕ ಅವರು ಮಾಹಿತಿ ನೀಡಿ ಮಡಿಕೇರಿ ನಗರಕ್ಕೆ ಕೂಟುಹೊಳೆ ಮತ್ತು ಕುಂಡಾಮೇಸ್ತ್ರಿ ಹೊಳೆಯಿಂದ ಕುಡಿಯುವ ನೀರು ಪೂರೈಸಲಾಗುತ್ತದೆ ಎಂದರು.
ಕುಂಡಾಮೇಸ್ತ್ರಿ ಹೊಳೆಯಲ್ಲಿ 10 ಮೀಟರ್ ವ್ಯಾಸದ ಜಾಕ್‍ವೆಲ್ ನಿರ್ಮಾಣ ಮಾಡಲಾಗಿದೆ ಎಂದರು. ಸ್ಟೋನ್‍ಹಿಲ್ ಬಳಿ ಜಲ ಶುದ್ಧೀಕರಣ ಘಟಕ ಕಾರ್ಯನಿರ್ವಹಿಸುತ್ತಿದೆ. ಕುಂಡಾಮೇಸ್ತ್ರಿ ಹೊಳೆಗೆ ಬ್ಯಾರೇಜ್ ನಿರ್ಮಾಣ ಮಾಡಬೇಕಿದೆ. ಮಡಿಕೇರಿ ನಗರ ನಗರೋತ್ಥಾನ ಮೂರನೇ ಯೋಜನೆಯಡಿ 8 ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಮಲೀನ ನೀರು ಶುದ್ಧೀಕರಣ ಘಟಕಕ್ಕೆ ಜಾಗ ಒದಗಿಸಬೇಕಿದೆ. ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆ, ಒಳಚರಂಡಿ ಯೋಜನೆ, ವಿರಾಜಪೇಟೆ ಪ.ಪಂ.ವ್ಯಾಪ್ತಿಯಲ್ಲಿ ಕುಡಿಯುವ ನೀರು ಯೋಜನೆ ಮತ್ತು ವಿರಾಜಪೇಟೆ ಮತ್ತು ಸೋಮವಾಪೇಟೆ ಪಂ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರು ಮತ್ತು ಒಳಚರಂಡಿ ಯೋಜನೆ ಸಂಬಂಧಿಸಿದಂತೆ ಮಾಹಿತಿ ನೀಡಿದರು.
ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್.ರೂಪ, ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕರಾದ ರಾಜು, ನಗರಸಭೆ ಪೌರಾಯುಕ್ತರಾದ ಎಸ್.ವಿ.ರಾಮದಾಸ್, ಭೂ ದಾಖಲೆಗಳ ಸಹಾಯಕ ನಿರ್ದೇಶಕರಾದ ವಿರೂಪಾಕ್ಷ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇಇ ರಾಜ್ ಗೋಪಾಲ್, ಎಇಇ ಅಜಯ್, ನಗರಾಭಿವೃದ್ಧಿ ಕೋಶದ ಎಇಇ ನಾಗರಾಜು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಾದ ಶ್ರೀಧರ, ನಾಚಪ್ಪ, ಸುಜಯ್ ಕುಮಾರ್, ನಗರಾಭಿವೃದ್ಧಿ ಯೋಜನ ಶಾಖೆಯ ಸಹಾಯಕ ನಿರ್ದೇಶಕರಾದ ಲಾವಣ್ಯ ಇತರರು ತಮ್ಮ ನಗರದ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿದರು. ಫೋಟೋ :: ಮಿನಿಸ್ಟರ್ ಮೀಟಿಂಗ್

error: Content is protected !!