ನಿವೇಶನಗಳಿಗಾಗಿ ಖಾಸಗಿ ಜಮೀನು ಖರೀದಿ : ಸಚಿವ ಭೈರತಿ ಬಸವರಾಜು ಇಂಗಿತ

February 15, 2021

ಮಡಿಕೇರಿ ಫೆ.15 : ಖಾಸಗಿ ಜಮೀನನ್ನು ನಿವೇಶನಗಳನ್ನಾಗಿ ಪರಿವರ್ತಿಸಿ ಅದರಿಂದ ಬರುವ ಆದಾಯದಿಂದ ನಗರದ ಅಭಿವೃದ್ದಿಗೆ ಹಣ ಕ್ರೋಢಿಕರಿಸಲು ಯೋಜನೆ ರೂಪಿಸಲಾಗಿದೆ. ಖಾಸಗಿ ಭೂಮಿ ನೀಡಲು ಮುಂದಾಗುವ ಜಮೀನು ಮಾಲೀಕರಿಂದ ಭೂಮಿಯನ್ನು ಪಡೆದು ಅದನ್ನು ನಿವೇಶನವನ್ನಾಗಿ ಪರಿವರ್ತಿಸಲಾಗುವುದು ಎಂದು ನಗರಾಭಿವೃದ್ದಿ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜು ಹೇಳಿದ್ದಾರೆ.
ಮಡಿಕೇರಿಯಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವರು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಮತ್ತು ಆಯುಕ್ತರಿಗೆ ತಿಳಿಸಿದ್ದೇನೆ ಎಂದು ಸಚಿವರು ಹೇಳಿದರು. ನಗರ ಯೋಜನೆ ಅಡಿಯಲ್ಲಿ 3 ಕೆರೆಗಳ ಅಭಿವೃದ್ದಿ ಮತ್ತು ಸಂರಕ್ಷಣೆಗೆ ಸಂಬಂಧಿಸಿದಂತೆ ಅದರ ಸಾಧಕ ಬಾಧಕಗಳನ್ನು ಚರ್ಚೆ ನಡೆಸಿ ಡಿಪಿಆರ್ ತಯಾರಿಸಿ ಟೆಂಡರ್ ಕರೆದು ಕಾಮಗಾರಿಗೆ ಚಾಲನೆ ನೀಡಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಮಡಿಕೇರಿಯಲ್ಲಿ ಮಲಿನ ನೀರು ಶುದ್ದೀಕರಣ ಘಟಕ ಸ್ಥಾಪನೆಗಾಗಿ 50 ಕೋಟಿ ರೂ.ಗಳನ್ನು ನೀಡಲಾಗಿದ್ದು, ಮೊದಲ ಹಂತದ ಕೆಲವು ಕಾಮಾಗಾರಿಗಳನ್ನು ಪೂರೈಸಲಾಗಿದೆ. ಎಸ್.ಟಿ.ಪಿ ಸ್ಥಾಪನೆಗಾಗಿ ಜಾಗದ ಸಮಸ್ಯೆಯಿದ್ದ ಸ್ಥಳಿಯ ಶಾಸಕರು ಜಾಗ ಗುರುತಿಸುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸ್ಥಳ ದೊರೆತ ತಕ್ಷಣವೇ ಕಾಮಗಾರಿ ಆರಂಭವಾಗಲಿದೆ. ಮುಂದಿನ 15 ದಿನಗಳ ಒಳಗೆ ಮೊದಲ ಹಂತದ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಕಾಲಮಿತಿ ನಿಗಧಿಗೊಳಿಸಿ ಸೂಚನೆ ನೀಡಿರುವುದಾಗಿ ನಗರಾಭಿವೃದ್ದಿ ಸಚಿವ ಬೈರತಿ ಬಸವರಾಜು ಹೇಳಿದರು. ಯುಜಿಡಿ ಕಾಮಗಾರಿಯಿಂದ ರಸ್ತೆಗಳಿಗೆ ಹಾನಿಯಾಗಿದೆ. ಈ ಹಿನ್ನಲೆಯಲ್ಲಿ ಯುಜಿಡಿ ಪೈಪ್ ಲೈನ್ ಅಳವಡಿಕೆ ಮಾಡಿದ ಸ್ಥಳಗಳಲ್ಲಿ ಕಾಂಕ್ರೀಟ್ ಹಾಕುವ ಮೂಲಕ ರಸ್ತೆಗಳನ್ನು ದುರಸ್ಥಿ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ನಗರದ ಕೂಟು ಹೊಳೆಯಲ್ಲಿ ನೀರಿನ ಪ್ರಮಾಣ ಇಳಿಕೆಯಾಗುತ್ತಿದ್ದು, ಹೆಚ್ಚಿನ ನೀರನ್ನು ಸಂಗ್ರಹಿಸಲು ಅನುಕೂಲವಾಗುವಂತೆ ಕೂಟು ಹೊಳೆಯ ಹೂಳೆತ್ತಲು ಕೂಡ ಕ್ರಮ ಕೈಗೊಳ್ಳಲಾಗುತ್ತದೆ. ಮೊದಲು ಆ ಸ್ಥಳವನ್ನು ಸರ್ವೆ ನಡೆಸಿ ಗಡಿ ಗುರುತಿಸಿ ಸಂರಕ್ಷಿಸುವಂತೆ ಎಡಿಎಲ್‍ಆರ್‍ಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ಹೇಳಿದರು. ಸೋಮವಾರಪೇಟೆಯಲ್ಲಿ 40 ವರ್ಷ ಮೇಲ್ಪಟ್ಟ ನೀರು ಸರಬರಾಜು ಪೈಪ್‍ಗಳಿದ್ದು, ಸಮರ್ಪಕ ನೀರು ಪೂರೈಕೆ ಆಗದಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹೀಗಾಗಿ ಹೊಸ ಪೈಪ್ ಲೈನ್‍ಗೆ ಡಿಪಿಆರ್ ಸಲ್ಲಿಸುವಂತೆ ಸೂಚಿಸಿದ್ದು, ಸರಕಾರ ಪರಿಶೀಲಿಸಿ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ಕೊಡಗು ಜಿಲ್ಲೆಯ ಬಗ್ಗೆ ವಿಶೇಷ ಗೌರವವಿದೆ. ಮಾರ್ಚ್‍ನಲ್ಲಿ ಮತ್ತೆ ಕೊಡಗು ಜಿಲ್ಲೆಗೆ ಭೀಟಿ ನೀಡಿ ಪ್ರಗತಿ ಪರಿಶೀಲನೆ ನಡೆಸುತ್ತೇನೆ. ಇಂದು ಸೂಚಿಸಿದ ಕಾಮಗಾರಿಗಳು ಪೂರ್ಣಗೊಳಿಸಲು ವಿನಾ ಕಾರಣ ವಿಳಂಭ ಮಾಡಿದರೆ, ಅಂತಹ ಅಧಿಕಾರಿಗಳ ವಿರುದ್ದ ಶಿಸ್ತು ಕಾನೂನು ಕ್ರಮ ಕೈಗೊಳ್ಳುವುದಾಗಿ ಸಚಿವ ಬೈರತಿ ಬಸವರಾಜು ಎಚ್ಚರಿಸಿದರು.
ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಕುಶಾಲನಗರದ ಕಾವೇರಿ ನದಿಯಲ್ಲಿ ಕಳೆದ ಸಾಲಿನಲ್ಲಿ ಹೂಳೆತ್ತಿದ ಪರಿಣಾಮ ಈ ಬಾರಿ ತೀವ್ರ ಪ್ರವಾಹ ಎದುರಾಗಲಿಲ್ಲ. ಈಗಾಗಲೇ 50 ಲಕ್ಷ ರೂ. ವೆಚ್ಚದಲ್ಲಿ ಶೇ.50ರಷ್ಟು ಕಾಮಗಾರಿಯನ್ನು ಮಾತ್ರವೇ ಮಾಡಲಾಗಿದ್ದು, ನದಿಯಲ್ಲಿ ನೀರು ಇಳಿಕೆಯಾದ ಬಳಿಕ ಹೂಳೆತ್ತುವ ಕಾಮಗಾರಿ ನಡೆಸಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭ ಶಾಸಕರಾದ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯರಾದ ಸುನೀಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಮಡಿಕೇರಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ರಮೇಶ್ ಹೊಳ್ಳ ಉಪಸ್ಥಿತರಿದ್ದರು.

error: Content is protected !!