ಪೂರ್ಣಗೊಂಡ ಕಾಮಗಾರಿ ಹಣವೇ ಬಿಡುಗಡೆಯಾಗಿಲ್ಲ : ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಗುತ್ತಿಗೆದಾರರ ಸಂಘ ನಿರ್ಧಾರ

February 16, 2021

ಮಡಿಕೇರಿ ಫೆ.16 : 2019-20ನೇ ಸಾಲಿನಲ್ಲಿ ಕೊಡಗು ಜಿಲ್ಲೆಯಾದ್ಯಂತ ಪೂರ್ಣಗೊಂಡಿರುವ ಮಳೆಹಾನಿ ಕಾಮಗಾರಿಗಳು ಮತ್ತು ಇತರೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಲೋಕೋಪಯೋಗಿ ಗುತ್ತಿಗೆದಾರರಿಗೆ ಹಣ ಬಿಡುಗಡೆಯಾಗದೇ ಇರುವುದರಿಂದ ಇದೇ ಫೆ.19 ರಿಂದ ಎಲ್ಲಾ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಕೊಡಗು ಜಿಲ್ಲಾ ಲೋಕೋಪಯೋಗಿ ಗುತ್ತಿಗೆದಾರರ ಸಂಘ ನಿರ್ಧರಿಸಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ರವಿಚಂಗಪ್ಪ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಈ ಹಿಂದೆ ಶೇ.75 ರಷ್ಟು ಹಣವನ್ನು ಪಾವತಿ ಮಾಡಬೇಕೆಂದು ಒತ್ತಾಯಿಸಿ ಸಂಘ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿತ್ತು. ಆದರೆ ಇದಕ್ಕೆ ಯಾವುದೇ ಸ್ಪಂದನೆ ದೊರೆಯದೇ ಇರುವುದರಿಂದ ಮತ್ತು ಹಣ ಬಿಡುಗಡೆಯಾಗದೇ ಇರುವುದರಿಂದ ಮುಷ್ಕರ ಅನಿವಾರ್ಯವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಯಾವುದೇ ಕಾಮಗಾರಿಗಳಿಗೆ ಬಿಲ್ ಪಾವತಿಯಾಗದೆ ಇರುವುದರಿಂದ ಗುತ್ತಿಗೆದಾರರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ತುರ್ತು ಕಾಮಗಾರಿ ಕೈಗೊಳ್ಳಲು ತೊಂದರೆಯಾಗುತ್ತಿದ್ದು, ಕಾಮಗಾರಿಗಳಿಗೆ ಸರ್ಕಾರದ ನಿಯಮದಂತೆ ಶೇ.22ರಷ್ಟು ತೆರಿಗೆ ಕಡಿತಗೊಳ್ಳುವುದರಿಂದ ಗುತ್ತಿಗೆದಾರರು ಮತ್ತಷ್ಟು ಕಷ್ಟಕ್ಕೆ ಸಿಲುಕಲಿದ್ದಾರೆ. ಆದ್ದರಿಂದ 75:25 ಅನುಪಾತದಲ್ಲಿ ಹಣ ಬಿಡುಗಡೆಗೊಳಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಮತ್ತು ಜಿಲ್ಲೆಯ ಶಾಸಕರುಗಳು ಮಧ್ಯ ಪ್ರವೇಶಿಸಿ ಗುತ್ತಿಗೆದಾರರ ಸಮಸ್ಯೆಗಳಿಗೆ ಸ್ಪಂದಿಸಿ ಸರ್ಕಾರದ ಗಮನ ಸೆಳೆಯಬೇಕೆಂದು ರವಿಚಂಗಪ್ಪ ಒತ್ತಾಯಿಸಿದ್ದಾರೆ.

error: Content is protected !!