ಕೊಡವ ಕೌಟುಂಬಿಕ ಹಾಕಿ ಹಬ್ಬಕ್ಕೆ 5 ಕೋಟಿ ರೂ. : ಫೆ.18 ರಂದು ನಿಯೋಗದಿಂದ ಸಿಎಂ ಭೇಟಿ

February 16, 2021

ಮಡಿಕೇರಿ ಫೆ.16 : ವಿಶ್ವದ ಗಮನ ಸೆಳೆದಿರುವ ಕೊಡವ ಕೌಟುಂಬಿಕ ಹಾಕಿ ಹಬ್ಬಕ್ಕೆ ಪ್ರತಿವರ್ಷ ಬಜೆಟ್‍ನಲ್ಲಿ 5 ಕೋಟಿ ರೂ. ಅನುದಾನ ಮೀಸಲಿಡುವಂತೆ ಒತ್ತಾಯಿಸಿ ಬೆಂಗಳೂರು ಕೊಡವ ಸಮಾಜದ ನೇತೃತ್ವದಲ್ಲಿ ವಿವಿಧ ಕೊಡವ ಸಮಾಜಗಳು ಹಾಗೂ ಜನಪ್ರತಿನಿಧಿಗಳ ನಿಯೋಗ ಫೆ.18 ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಲಿದೆ.
ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ತೇಲಪಂಡ ಶಿವಕುಮಾರ್ ನಾಣಯ್ಯ ಅವರ ಮುಂದಾಳತ್ವದಲ್ಲಿ ಇಂದು ನಾಪೋಕ್ಲು ಕೊಡವ ಸಮಾಜದ ಪ್ರತಿನಿಧಿಗಳು ಹಾಕಿ ಅಕಾಡೆಮಿ ಹಾಗೂ ಸಂಸದ ಪ್ರತಾಪ್ ಸಿಂಹ ಅವರ ಶಿಫಾರಸ್ಸಿನ ಮನವಿ ಪತ್ರದೊಂದಿಗೆ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಎಂ.ಟಿ.ನಾಣಯ್ಯ ಅವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಯೋಜನಾ ಆಯೋಗದ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಜೆ.ಪುಟ್ಟಸ್ವಾಮಿ ಅವರನ್ನು ಭೇಟಿಯಾದರು.
ಬಜೆಟ್‍ನಲ್ಲಿ ರೂ.5 ಕೋಟಿ ಮೀಸಲಿಡುವಂತೆ ಮನವಿ ಮಾಡಿಕೊಂಡ ಪ್ರಮುಖರು ಮುಖ್ಯಮಂತ್ರಿಗಳ ಭೇಟಿಗಾಗಿ ಸಮಯ ಕೋರಿದರು. ಇದಕ್ಕೆ ಸ್ಪಂದಿಸಿದ ಬಿ.ಜೆ.ಪುಟ್ಟಸ್ವಾಮಿ ಅವರು ರಾಜ್ಯ ಕ್ರೀಡಾ ಇಲಾಖೆಗೆ ಮನವಿ ಪತ್ರವನ್ನು ಕಳುಹಿಸಿದರು. ಅಲ್ಲದೆ ಮುಖ್ಯಮಂತ್ರಿಗಳ ಭೇಟಿಗೆ ಫೆ.18 ರಂದು ಅವಕಾಶ ಕಲ್ಪಿಸಿದರು.
ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ತೇಲಪಂಡ ಶಿವಕುಮಾರ್ ನಾಣಯ್ಯ ಅವರು ಮುಖ್ಯಮಂತ್ರಿಗಳು ನಮ್ಮ ಬೇಡಿಕೆ ಈಡೇರಿಸುವ ಭರವಸೆ ಇದೆ ಎಂದು ತಿಳಿಸಿದರು.
ಗುರುವಾರ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಎಂ.ಟಿ.ನಾಣಯ್ಯ ಅವರ ನೇತೃತ್ವದಲ್ಲಿ ವಿವಿಧ ಕೊಡವ ಸಮಾಜಗಳ ಪ್ರಮುಖರು ಹಾಗೂ ಶಾಸಕರುಗಳಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚುರಂಜನ್, ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ವೀಣಾಅಚ್ಚಯ್ಯ ಮತ್ತಿತರರ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಲಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಬಿ.ಜೆ.ಪುಟ್ಟಸ್ವಾಮಿ ಅವರಿಗೆ ಮನವಿ ಸಲ್ಲಿಸುವ ಸಂದರ್ಭ ನಾಪೋಕ್ಲು ಕೊಡವ ಸಮಾಜದ ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ, ಕುಲ್ಲೇಟಿರ ಬಿನ್ನಿ ಬೋಪಣ್ಣ, ಮುಕ್ಕಾಟಿರ ಪೂಣಚ್ಚ ಮತ್ತಿತರರು ಹಾಜರಿದ್ದರು.
ಈ ಸಂಬಂಧ ಬೆಂಗಳೂರು ಕೊಡವ ಸಮಾಜದಲ್ಲಿ ಸಭೆ ನಡೆದು ಅಧ್ಯಕ್ಷ ಎಂ.ಟಿ.ನಾಣಯ್ಯ ಅವರು ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು.

error: Content is protected !!