ಪ್ರಾಮಾಣಿಕತೆ ಮೆರೆದ ಅಂಗನವಾಡಿ ಕಾರ್ಯಕರ್ತೆಯರು : ಸಿಕ್ಕಿದ 50 ಸಾವಿರ ರೂ.ಗಳನ್ನು ಕಳೆದುಕೊಂಡವರಿಗೆ ಮರಳಿಸಿದರು

February 16, 2021

*ಸಿದ್ದಾಪುರ ಫೆ.16 : ಅಂಗನವಾಡಿ ಕಾರ್ಯಕರ್ತೆಯರಿಬ್ಬರು ಮದುವೆ ಮನೆಯಲ್ಲಿ ಸಿಕ್ಕ ಸುಮಾರು 50 ಸಾವಿರ ರೂ.ಗಳನ್ನು ಹಣ ಕಳೆದುಕೊಂಡವರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಯೋಗಿ ಕಣಂಜಾಲು ಕಿಶೋರ್ ಅವರ ವಿವಾಹದ ಹಿನ್ನೆಲೆ ಇಂದು ಮಧ್ಯಾಹ್ನ ಅವರ ಕೂಡ್ಲೂರು ಚೆಟ್ಟಳ್ಳಿ ನಿವಾಸದಲ್ಲಿ ಚಪ್ಪರ ಸಮಾರಂಭ ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿಉತ್ತಪ್ಪ ಅವರು ಹಿರಿಯರ ಆರ್ಶೀವಾದ ಪಡೆಯುತ್ತಿದ್ದ ಸಂದರ್ಭ ಪ್ಯಾಂಟ್ ಜೇಬಿನಲ್ಲಿದ್ದ 500 ಮುಖಬೆಲೆಯ 50 ಸಾವಿರ ರೂ.ಗಳ ಕಟ್ಟು ಕೆಳಗೆ ಬಿದ್ದಿದೆ. ಜನಜಂಗುಳಿಯ ನಡುವೆ ಇದು ಮಣಿಉತ್ತಪ್ಪ ಅವರ ಅರಿವಿಗೆ ಬರಲಿಲ್ಲ.
ಆದರೆ ಇದನ್ನು ಗಮನಿಸಿದ ಅಂಗನವಾಡಿ ಕಾರ್ಯಕರ್ತರಾದ ಭೂತನಕಾಡು ಕಡ್ಲೆಮನೆ ರತಿ ಹಾಗೂ ನೆಲ್ಯಹುದಿಕೇರಿ ಎಂ.ಜಿ ಕಾಲೋನಿಯ ಇಂದಿರಾ ಅವರುಗಳು ಸಮಯ ಪ್ರಜ್ಞೆ ಮೆರೆದು ಬಿದ್ದ ಹಣವನ್ನು ತೆಗೆದು ಮಣಿಉತ್ತಪ್ಪ ಅವರಿಗೆ ನೀಡಿದರು.
ವಿಷಯ ತಿಳಿದು ಆಶ್ಚರ್ಯಚಕಿತರಾದ ಮಣಿಉತ್ತಪ್ಪ ಅವರು ಅಂಗನವಾಡಿ ಕಾರ್ಯಕರ್ತೆಯರಿಗೆ ಕೃತಜ್ಞತೆ ಸಲ್ಲಿಸಿದರಲ್ಲದೆ ಪ್ರಾಮಾಣಿಕತೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ನೆರೆದಿದ್ದವರು ಕೂಡ ಕೊಂಡಾಡಿದರು. (ಅಂಚೆಮನೆ ಸುಧಿ)

error: Content is protected !!