ಕೂಡಿಗೆ ಕೊಡಗು ಸೈನಿಕ ಶಾಲೆ ಅಭಿವೃದ್ಧಿಗೆ 5 ಕೋಟಿ ರೂ.ಗಳ ಪ್ರಸ್ತಾವನೆ

February 16, 2021

ಮಡಿಕೇರಿ ಫೆ.16 : ಕೂಡಿಗೆಯಲ್ಲಿರುವ ಕೊಡಗು ಸೈನಿಕ ಶಾಲೆಯ ಅಭಿವದ್ಧಿಗೆ 5 ಕೋಟಿ ರೂ.ಗಳನ್ನು ಮಂಜೂರು ಮಾಡುವಂತೆ ಸಹಕಾರ ಇಲಾಖೆ ಸಚಿವ ಎಸ್.ಟಿ.ಸೋಮಶೇಖರ್ ಅವರು ಸರಕಾರದ ಗಮನ ಸೆಳೆದಿದ್ದಾರೆ.
ಮಂಗಳವಾರ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು, ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರೊಂದಿಗೆ ಸೈನಿಕ ಶಾಲೆಗೆ ಭೇಟಿ ನೀಡಿದ ಸಚಿವರು, ಶಾಲೆಯ ಪ್ರಾಂಶುಪಾಲ ಜಿ.ಕಣ್ಣನ್ ಅವರೊಂದಿಗೆ ಕೆಲ ಕಾಲ ಚರ್ಚಿಸಿದರು.
ಈ ಸಂದರ್ಭ ಕಣ್ಣನ್ ಅವರು, ‘2018ರಲ್ಲಿ ಹಾರಂಗಿ ಜಲಾಶಯದಿಂದ ನೀರು ಬಿಟ್ಟ ಸಂದರ್ಭ ಶಾಲಾ ಆವರಣಕ್ಕೆ ನುಗ್ಗಿ ಸಾಕಷ್ಟು ಹಾನಿಯಾಗಿತ್ತು. ಈ ಸಂಬಂಧ ಸರ್ಕಾರದ ಮಟ್ಟದಿಂದ ಯಾವುದಾದರೂ ಸಹಾಯವಾಗಬಹುದೇ? ಎಂದು ಸಚಿವ ಸೋಮಶೇಖರ್ ಅವರ ಗಮನಕ್ಕೆ ತಂದರು.
ಇದಕ್ಕೆ ತಕ್ಷಣ ಸ್ಪಂದಿಸಿದ ಸಚಿವರು, ನೀರಾವರಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ಪರಿಸ್ಥಿತಿಯನ್ನು ವಿವರಿಸಿದರು.
::: 5 ಕೋಟಿ ರೂ.ಗಳ ಪ್ರಸ್ತಾವನೆ :::
ರಾಕೇಶ್ ಸಿಂಗ್ ಅವರ ಬಳಿ ಸೈನಿಕ ಶಾಲೆಗೆ ಆದ ತೊಂದರೆ ಬಗ್ಗೆ ಸಚಿವ ಸೋಮಶೇಖರ್ ಅವರು ವಿವರಣೆ ನೀಡುವ ಸಂದರ್ಭದಲ್ಲಿ, ಶಾಲೆಯ ಅಭಿವೃದ್ಧಿಗೆ 5 ಕೋಟಿ ರೂಪಾಯಿಗಳ ಪ್ರಸ್ತಾವನೆಗೆ ಮಂಜೂರಾತಿ ಕೊಡಬೇಕು ಎಂದೂ ಮನವಿ ಮಾಡಿದರು.
ಇದಕ್ಕೆ ರಾಕೇಶ್ ಸಿಂಗ್ ಅವರು ಪೂರಕವಾಗಿ ಸ್ಪಂದಿಸಿರುವುದಾಗಿ ಸಚಿವರು ತಿಳಿಸಿದರು. ಈ ಸಂದರ್ಭ ಶಾಸಕರಾದ ಅಪ್ಪಚ್ಚು ರಂಜನ್ ಅವರೂ ಹಾಜರಿದ್ದರು.

error: Content is protected !!