ತೊರೆನೂರು ಸಹಕಾರಿ ಕಟ್ಟಡ ಉದ್ಘಾಟನೆ : ಎಲ್ಲಾ ಸಹಕಾರ ಸಂಸ್ಥೆಗಳಿಗೆ ಒಂದೇ ತಂತ್ರಾಂಶ : ಸಚಿವ ಸೋಮಶೇಖರ್

February 16, 2021

ಮಡಿಕೇರಿ ಫೆ.16 : ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುತ್ತಿರುವ ಸಹಕಾರ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗುವಂತೆ ರಾಜ್ಯದ ಎಲ್ಲಾ ಸಹಕಾರ ಸಂಸ್ಥೆಗಳನ್ನು ಒಂದೇ ತಂತ್ರಾಂಶ(ಸಾಫ್ಟ್‍ವೇರ್)ದಲ್ಲಿ ಅಳವಡಿಸಲು ಚಿಂತನೆ ನಡೆಸಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಕುಶಾಲನಗರ ಸಮೀಪದ ತೊರೆನೂರು ಗ್ರಾಮದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಿರ್ಮಿಸಲಾಗಿರುವ ಹೆಚ್ಚುವರಿ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ರಾಜ್ಯದ 5400 ಸಹಕಾರ ಸಂಘಗಳು ಮತ್ತು 21 ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ಗಳನ್ನು ಒಂದೇ ಸಾಫ್ಟ್‍ವೇರ್‍ನಡಿ ತರಲು ಚಿಂತನೆ ನಡೆಸಲಾಗಿದ್ದು, ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೂ ಚರ್ಚಿಸಲಾಗಿದೆ ಎಂದು ಹೇಳಿದರು.
::: ಶೀಘ್ರ 295 ಕೋಟಿ ಬಿಡುಗಡೆ :::
ಕಳೆದ ಎರಡು ವರ್ಷಗಳ ಸಾಲ ಮನ್ನಾ ಯೋಜನೆಯ 295 ಕೋಟಿ ರೂ.ಗಳು ಸಹಕಾರ ಸಂಘಗಳಿಗೆ ಮರು ಪಾವತಿ ಅಗಬೇಕಾಗಿದ್ದು, ಅದನ್ನು ಸದ್ಯದಲ್ಲೇ ಒದಗಿಸಲಾಗುವುದು. ಅಲ್ಲದೆ ಕೊಡಗು ಜಿಲ್ಲೆಯ 4,500 ರೈತರ ಸಾಲಮನ್ನಾ ಯೋಜನೆಯ ಹಣವನ್ನು ಈ ಸಾಲಿನಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಮೂಲಕ ನೀಡಲಾಗುವುದು ಎಂದೂ ಸಚಿವರು ಇದೇ ಸಂದರ್ಭ ತಿಳಿಸಿದರು.
ಸಹಕಾರ ಇಲಾಖೆಯ ಮೂಲಕ ರೈತರ ಅಭಿವೃದ್ಧಿಗೆ ಪೂರಕವಾಗಿ ಎಲ್ಲಾ ರೀತಿಯ ಸಾಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ರಾಜ್ಯದಲ್ಲಿ 15,500 ಕೋಟಿ ಹಣವನ್ನು ಈ ಸಾಲಿನಲ್ಲಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಅತ್ಮ ನಿರ್ಭರ್ ಯೋಜನೆಯಡಿ ರಾಜ್ಯದ ರೈತರಿಗೆ ಅನುಕೂಲ ಕಲ್ಪಿಸಲು 36 ಕೋಟಿ ವೆಚ್ಚದ ಯೋಜನೆ ಸಿದ್ಧವಾಗಿದೆ ಈಗಾಗಲೇ 30 ಕೋಟಿ ಹಣ ಬಿಡುಗಡೆಯಾಗಿದ್ದು, ಇದರಲ್ಲಿ ರಾಜ್ಯದ 24 ಲಕ್ಷ ರೈತರಿಗೆ 12 ಕೋಟಿ ಹಣ ಒದಗಿಸಲಾಗಿದೆ ಎಂದು ಸೋಮಶೇಖರ್ ನುಡಿದರು.
ಪ್ರಸಕ್ತ ಸಾಲಿನಲ್ಲಿ ತೊರೆನೂರು ಗ್ರಾಮದ ನೂತನ ಕಟ್ಟಡದ ಮೇಲಂತಸ್ತಿನ ಕಟ್ಟಡಕ್ಕೆ 30 ಲಕ್ಷ ರೂ.ಗಳನ್ನು ನೀಡುವ ಭರವಸೆ ನೀಡಿದ ಅವರು, ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಹಕಾರ ಸಂಘಗಳನ್ನು ಆರಂಭಿಸುವ ಚಿಂತನೆ ಇರುವುದಾಗಿಯೂ ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ರಾಜ್ಯ ನಗರಾಭಿವೃದ್ಧಿ ಸಚಿವ ಬೈರತಿ ಎ ಬಸವರಾಜು ಮಾತಾಡಿ, ಸಹಕಾರ ಸಂಘಗಳು ಯಶಸ್ಸಿನ ಹಾದಿಯಲ್ಲಿ ಸಾಗಬೇಕಾದರೆ ಸಹಕಾರಿಗಳ ಪ್ರಯತ್ನ ಬಹು ಮುಖ್ಯ. ಇಂದಿನ ಪೈಪೋಟಿ ಯುಗದಲ್ಲಿ ಸಹಕಾರ ಸಂಘಗಳು ರೈತರ ಪ್ರಗತಿಗೆ ಪೂರಕವಾಗಿರುವುದರಿಂದ ರಾಜ್ಯದ ಎಲ್ಲಾ ಸಹಕಾರಿ ಸಂಘಗಳು ಉತ್ತಮ ಸ್ಧಿತಿಯಲ್ಲಿದ್ದು, ರೈತರ ಅಭಿವೃದ್ಧಿಗೆ ಸಹಕಾರಿಯಾಗುತ್ತಿವೆ. ಇವುಗಳ ಸದುಪಯೋಗವನ್ನು ಆಯಾ ಪ್ರದೇಶದ ರೈತರು ಪಡೆದುಕೊಳ್ಳುವ ಮೂಲಕ ತಮ್ಮ ಅರ್ಥಿಕ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.
ಸಭಾಂಗಣದ ಉದ್ಘಾಟನೆ ನೆರವೇರಿಸಿದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು, ಪ್ರತಿಯೊಬ್ಬರೂ ಸಮಪರ್ಣಾ ಭಾವನೆಯ ಮೂಲಕ ಸಹಕಾರ ಸಂಘದಲ್ಲಿ ದುಡಿದರೆ ಸಂಘದ ಬೆಳವಣಿಗೆ ಸಾಧ್ಯವಾಗುತ್ತದೆ. ಜಿಲ್ಲೆಯ ಸಹಕಾರ ಸಂಘಗಳು ಉತ್ತಮ ಮಟ್ಟದಲ್ಲಿ ಜಿಲ್ಲೆಯ ರೈತರಿಗೆ ಸೇವೆ ಸಲ್ಲಿಸುತ್ತಿರುವುದರಿಂದ ಜಿಲ್ಲೆಯ ಸಹಕಾರಿ ಕ್ಷೇತ್ರವು ರಾಜ್ಯದಲ್ಲಿ ಪ್ರಥಮ ಸ್ಧಾನ ಪಡೆದಿದೆ. ರೈತರಿಗೆ ಯಾವುದೇ ರೀತಿಯ ತೊಂದರೆಗಳು ಆಗದಂತೆ ಅಧಿಕಾರಿಗಳು ಗಮನಹರಿಸಬೇಕು ಎಂದು ಕಿವಿ ಮಾತು ಹೇಳಿದರು.
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಅಧ್ಯಕ್ಷ ಕೊಡಂದೇರ ಪಿ. ಗಣಪತಿ ಸಹಕಾರ ಕ್ಷೇತ್ರದ ಸಾಲ ಮನ್ನಾ ಕುರಿತು ಮಾತನಾಡಿದರು.
ತೊರೆನೂರು ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್. ಕೃಷ್ಣೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ನಿರ್ದೇಶಕರಾದ ಬಿ.ಕೆ.ಚಿಣ್ಣಪ್ಪ, ಬಿ.ಡಿ.ಮಂಜುನಾಥ, ಎಸ್.ಬಿ .ಭರತ್ ಕುಮಾರ್, ಉಷಾ ತೇಜಸ್ವಿನಿ, ಜಿಲ್ಲಾ ಪಂಚಾಯತ್ ಸದಸ್ಯ ಹೆಚ್.ಆರ್.ಶ್ರೀನಿವಾಸ, ತಾಲೂಕು ಪಂಚಾಯತ್ ಸದಸ್ಯ ಜಯಣ್ಣ, ಕುಶಾಲನಗರ ಎ.ಪಿಸಿಎಂಎಸ್ ಅಧ್ಯಕ್ಷ ಎಂ.ಎನ್.ಕೊಮಾರಪ್ಪ, ಉಪಾಧ್ಯಕ್ಷ ಜಗದೀಶ್, ಕೂಡಿಗೆ ಸಹಕಾರ ಸಂಘದ ಅಧ್ಯಕ್ಷ ಕೆ.ಕೆ.ಹೇಮಂತ್ ಕುಮಾರ್, ಕುಶಾಲನಗರ ಸಹಕಾರ ಸಂಘದ ಅಧ್ಯಕ್ಷ ಶರವಣ ಕುಮಾರ್, ತೊರೆನೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ರೂಪಾ ಮಹೇಶ್, ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ಸಲೀಂ, ಸಹಾಯಕ ನಿಬಂಧಕ ರವಿಕುಮಾರ್ ತೊರೆನೂರು ದೇವಾಲಯ ಸಮಿತಿಯ ಅಧ್ಯಕ್ಷ ಹೆಚ್ ಚಂದ್ರಪ್ಪ, ತೊರೆನೂರು ಸಹಕಾರ ಸಂಘದ ಉಪಾಧ್ಯಕ್ಷ ಪ್ರೇಮ್ ಕುಮಾರ್, ನಿರ್ದೇಶಕರು, ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಈ ಸಂದರ್ಭದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಹಿರಿಯ ಸಹಕಾರಿಗಳು ಮತ್ತು ನಿವೃತ್ತ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.
ಪಾಂಡುರಂಗ ಸ್ವಾಗತಿಸಿ, ಹೆಚ್ .ಬಿ. ಚಂದ್ರಪ್ಪ ವರದಿ ಮಂಡಿಸಿದರು.

error: Content is protected !!