ಅರುವತ್ತೋಕ್ಲುವಿನಲ್ಲಿ ಕ್ರೀಡಾಕೂಟ : ಗ್ರಾಮೀಣ ಕ್ರೀಡೆಗಳಿಗೆ ಮತ್ತೆ ಜೀವ ತುಂಬಬೇಕಿದೆ : ಶಾಸಕ ಕೆ.ಜಿ.ಬೋಪಯ್ಯ ಅಭಿಪ್ರಾಯ

February 16, 2021

ಮಡಿಕೇರಿ ಫೆ.16 : ಅಳಿವಿನಂಚಿನಲ್ಲಿರುವ ಗ್ರಾಮೀಣ ಕ್ರೀಡೆಗಳಿಗೆ ಮತ್ತೆ ಜೀವ ತುಂಬುವ ಕಾರ್ಯವಾಗಬೇಕಿದೆ ಎಂದು ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ತಿಳಿಸಿದ್ದಾರೆ.
ಅರುವತ್ತೋಕ್ಲು ಗ್ರಾಮದ ಸರ್ವದೈವತಾ ವಿದ್ಯಾಸಂಸ್ಥೆಯ ವೇದಿಕೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಆಶ್ರಯದೊಂದಿಗೆ ನಿಸರ್ಗ ಯುವತಿ ಮಂಡಳಿ ಆಯೋಜಿಸಿದ್ದ ಹೋಬಳಿ ಮಟ್ಟದ ಗ್ರಾಮೀಣ ಕ್ರೀಡಾಕೂಟವನ್ನು ಉದ್ಘಾಟಿಸಿ ಅವವರು ಮಾತನಾಡಿದರು.
ಜನಪದೀಯ ಗ್ರಾಮೀಣ ಕ್ರೀಡೆಗಳು ಗ್ರಾಮಗಳಿಂದಲೇ ದೂರವಾಗುತ್ತಿದ್ದು, ಇದನ್ನು ಮುಂದಿನ ಪೀಳಿಗೆಗೆ ಉಳಿಸುವ ಕೆಲಸವಾಗಬೇಕಿದೆ ಎಂದರು. ಆಧುನಿಕ ಯುಗಕ್ಕೆ ಮಾರು ಹೋಗುತ್ತಿರುವ ಯುವ ಜನತೆಗೆ ಗ್ರಾಮೀಣ ಕ್ರೀಡೆಗಳು ನೀಡುವ ಮಾನಸಿಕ ಮತ್ತು ದೈಹಿಕ ಸಾಮಥ್ರ್ಯದ ಬಗ್ಗೆ ಮನವರಿಕೆ ಮಾಡುವ ಮೂಲಕ ಆಸಕ್ತಿಯನ್ನು ಮೂಡಿಸಬೇಕಿದೆ. ಕೋವಿಡ್ ಕಾರಣದಿಂದಾಗಿ ಮಕ್ಕಳು ಮನೆಯಲ್ಲೇ ಉಳಿದುಕೊಳ್ಳಬೇಕಾಯಿತು. ಪ್ರಸ್ತುತ ಪರಿಸ್ಥಿತಿ ಸುಧಾರಿಸುತ್ತಿದ್ದು, ಗ್ರಾಮೀಣ ಕ್ರೀಡಾಕೂಟಗಳು ಹೆಚ್ಚು ಹೆಚ್ಚು ನಡೆಯಬೇಕು. ಅದರಲ್ಲಿ ಸತತವಾಗಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಕ್ರೀಡಾ ಸಾಮಥ್ರ್ಯವನ್ನು ಪ್ರದರ್ಶಿಸಬೇಕೆಂದು ಬೋಪಯ್ಯ ಸಲಹೆ ನೀಡಿದರು.
ಈಗಾಗಲೇ ಹತ್ತನೇ ತರಗತಿ ಮತ್ತು ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟಗೊಂಡಿದ್ದು, ವಿದ್ಯಾರ್ಥಿಗಳು ಧೈರ್ಯದಿಂದ ಪರೀಕ್ಷೆಗಳನ್ನು ಎದುರಿಸಬೇಕೆಂದು ಕಿವಿಮಾತು ಹೇಳಿದರು.
ವಿರಾಜಪೇಟೆ ತಾಲ್ಲೂಕು ಯುವ ಒಕ್ಕೂಟದ ಅಧ್ಯಕ್ಷೆ ಶೀಲಾ ಬೋಪಣ್ಣ ಅವರು ಅಧ್ಯಕ್ಷತೆ ವಹಿಸಿ ಕ್ರೀಡಾಕೂಟದ ಕುರಿತು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಪ್ರಮುಖರಾದ ಮನೆಯಪಂಡ ಸೋಮಣ್ಣ, ಆದಿತ್ಯ ಅಯ್ಯಪ್ಪ, ಪ್ರದೀಪ್ ಪಿ.ಆರ್, ವಿ.ಪಿ.ಪೂಣಚ್ಚ, ಗಿರೀಶ್ ಗಣಪತಿ ಮತ್ತಿತರರು ಹಾಜರಿದ್ದರು.
ನಿಸರ್ಗ ಯುವತಿ ಮಂಡಳಿಯ ಅಧ್ಯಕ್ಷೆ ರೇಖಾ ಶ್ರೀಧರ್ ಸ್ವಾಗತಿಸಿದರು, ಸದಸ್ಯೆ ಓಮನ ಟಿ.ಕೆ ನಿರೂಪಿಸಿ, ವಂದಿಸಿದರು.
::: ಸಮಾರೋಪ ಸಮಾರಂಭ :::
ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಕೊಡಗು ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಕೇಶವ ಕಾಮತ್ ಅವರು ನಿಸರ್ಗ ಯುವತಿ ಮಂಡಳಿಯ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಮುಖರಾದ ಆಶ ಪೂಣಚ್ಚ, ಮನೆಯಪಂಡ ಪ್ರಾಣ್ ಬೋಪಣ್ಣ, ಲಲಿತ ಮೊಣ್ಣಪ್ಪ, ಕಂದಾ ದೇವಯ್ಯ ಮತ್ತಿತರರು ಹಾಜರಿದ್ದರು.

error: Content is protected !!