ಒಂದು ಗೋವು ಕೂಡ ಕಸಾಯಿಖಾನೆಗೆ ಹೋಗದಂತೆ ನೋಡಿಕೊಳ್ಳಿ : ಮಡಿಕೇರಿಯಲ್ಲಿ ಸಚಿವ ಪ್ರಭು ಚವ್ಹಾಣ್ ನಿರ್ದೇಶನ

February 16, 2021

ಮಡಿಕೇರಿ ಫೆ.16 : ಗೋಹತ್ಯೆ ನಿಷೇಧ   ಜಾರಿಯಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ಪೊಲೀಸ್ ಇಲಾಖೆಯೊಂದಿಗೆ ಹೊಂದಾಣಿಕೆಯೊಂದಿಗೆ ಕಾರ್ಯನಿರ್ವಹಿಸುವ ಮೂಲಕ ಯಾವುದೇ ಒಂದು ಗೋವು ಸಹ ಕಸಾಯಿಖಾನೆಗೆ ಹೋಗದಂತೆ ನೋಡಿಕೊಳ್ಳಿ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.
ಮಡಿಕೇರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಪಶುಸಂಗೋಪನೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವರು, ಗೋಹತ್ಯೆ ನಿಷೇಧ   ಕಾಯ್ದೆಯ ಬಗ್ಗೆ ಮೊದಲು ನಮ್ಮ ಅಧಿಕಾರಿಗಳು ಅಧ್ಯಯನ ಮಾಡಬೇಕು. ಇಲ್ಲವಾದರೆ ಗೋಹತ್ಯೆ ತಡೆಯನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲು ಸಮಸ್ಯೆ ಆಗುತ್ತದೆ ಎಂದು ಇಲಾಖೆಯ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.
ಮಡಿಕೇರಿಗೆ ‘ಪಶು ಸಂಜೀವಿನಿ’ ವಾಹನ-ರೈತರ ಕರೆಗಳನ್ನು ಆಲಿಸಿ ಅವರ ಸಮಸ್ಯೆಗಳಿಗೆ ಸ್ಪಂದಿಸಿ ಸಿಬ್ಬಂದಿ ಕೊರತೆ ಮುಂದಿಟ್ಟುಕೊಂಡು ಕರ್ತವ್ಯದಿಂದ ವಿಮುಖರಾಗಬೇಡಿ ಎಮದು ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವರು, ಸದ್ಯದಲ್ಲೇ ಮಾಡಿಕೇರಿಗೂ ಸುಸಜ್ಜಿತ ಪಶುಶಸ್ತ್ರ ಚಿಕಿತ್ಸಾ ವಾಹನ ಪಶುಸಂಜೀವಿನಿ ನೀಡಲಾಗುವುದು. ರೈತರ ಮನೆ ಬಾಗಿಲಿಗೆ ತೆರಳಿ ಚಿಕಿತ್ಸೆ ನೀಡಿ ಎಂದು ಸಚಿವರು ಅಧಿಕಾರಿಗಳಿಗೆ ತಿಳಿಸಿದರು.
ಪಶುಸಂಗೋಪನೆ ಇಲಾಖೆ ನನ್ನ ಪರಿವಾರ ಇದ್ದಂತೆ. ಕುಟುಂಬದ ಪ್ರಮುಖನಾಗಿ ನಿಮ್ಮ ಸಮಸ್ಯೆಗಳನ್ನು ಆಲಿಸಲು ಸದಾಸಿದ್ಧ ಎಂದು ಇದೇ ಸಂದರ್ಭ ಹೇಳಿದರು.
ಮೇವು ಬೆಳೆಯಿರಿ- ಮಡಿಕೇರಿ ತಾಲ್ಲೂಕಿನಲ್ಲಿ ಇರುವ ಗೋಮಾಳ ಜಾಗವನ್ನು ಗುರುತಿಸಿ ಮೇವು ಬೆಳೆಯಲು ಆದ್ಯತೆ ನೀಡಿ ಹಾಗೂ ಒತ್ತುವರಿ ತೆರವಿಗೆ ಜಿಲ್ಲಾಡಳಿತ ಬೇಗ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಇಲಾಖೆಯ ಸಮಗ್ರ ಪ್ರಗತಿ ಪರಿಶೀಲನೆ ನಡೆಸಿ ಹಕ್ಕಿಜ್ವರದ ಪ್ರಕರಣ, ಕಾಲುಬಾಯಿರೋಗ ನಿಯಂತ್ರಣ, ಕೃತಕ ಗರ್ಭಧಾರಣೆ, ಲಂಪಿಸ್ಕಿನ್, ಮೇವಿನ ಲಭ್ಯತೆ, ಕಿಸಾನ್ ಸಂಪರ್ಕ, ಜಾನುವಾರುಗಳಿಗೆ ಆರೋಗ್ಯ ಶಿಬಿರ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಸಭೆಯಲ್ಲಿ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಅಪರ ಜಿಲ್ಲಾಧಿಕಾರಿ ಡಿ.ರೂಪ, ಮುಖ್ಯಕಾರ್ಯನಿರ್ವಹಣಾಧಿಕಾರಿ ಭನ್ವರ್ ಸಿಂಗ್ ಹಾಗೂ ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

error: Content is protected !!