ಕೊಡಗು ಜೆಡಿಎಸ್‍ನ ಎಲ್ಲಾ ಘಟಕಗಳು ವಿಸರ್ಜನೆ : ಫೆ.23 ರಂದು ಅಡ್ ಹಾಕ್ ಸಮಿತಿ ರಚನೆ

February 16, 2021

ಮಡಿಕೇರಿ ಫೆ.16 : ಜಾತ್ಯತೀತ ಜನತಾದಳದ ರಾಜ್ಯಾಧ್ಯಕ್ಷರ ಆದೇಶದಂತೆ ಕೊಡಗು ಜಿಲ್ಲಾ ಜೆಡಿಎಸ್‍ನ ಜಿಲ್ಲಾ ಮತ್ತು ತಾಲ್ಲೂಕುಗಳ ಎಲ್ಲಾ ಘಟಕಗಳನ್ನು ವಿಸರ್ಜಿಸಲಾಗಿದ್ದು, ಜಿಲ್ಲಾಧ್ಯಕ್ಷರು ತಾತ್ಕಾಲಿಕವಾಗಿ ಮುಂದುವರೆಯಲಿದ್ದಾರೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಫೆ.23 ರಂದು ಜಿಲ್ಲೆಗೆ ಭೇಟಿ ನೀಡುವ ವೀಕ್ಷಕರ ಉಪಸ್ಥಿತಿಯಲ್ಲಿ ಜಿಲ್ಲಾ ಮಟ್ಟದ ಅಡ್ ಹಾಕ್ ಸಮಿತಿ ರಚನೆಯಾಗಲಿದೆ ಎಂದರು.
ರಾಜ್ಯಾಧ್ಯಕ್ಷರಾದ ಹೆಚ್.ಕೆ.ಕುಮಾರಸ್ವಾಮಿ ಮತ್ತು ಪಕ್ಷದ ವರಿಷ್ಟರು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಚಿಂತನೆಯಂತೆ ರಾಜ್ಯವ್ಯಾಪಿ ಪಕ್ಷದ ಎಲ್ಲಾ ಸಮಿತಿಗಳನ್ನು ವಿಸರ್ಜಿಸಿ, ಬೂತ್ ಮಟ್ಟದಿಂದ ಪಕ್ಷವನ್ನು ಬಲಿಷ್ಟವಾಗಿ ಕಟ್ಟಿ ಬೆಳೆಸುವ ಗುರಿ ಹೊಂದಲಾಗಿದೆ. 2023 ರಲ್ಲಿ ಎದುರಾಗುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತದೊಂದಿಗೆ ಪಕ್ಷವನ್ನು ಅಧಿಕಾರಕ್ಕೆ ತರುವ ದೃಢ ನಿಲುವನ್ನು ತಳೆಯಲಾಗಿದೆ ಎಂದು ತಿಳಿಸಿದರು.
ಇದೇ ಫೆ.23 ರಂದು ನಗರದ ವಾಣಿಜ್ಯೋದ್ಯಮಿಗಳ ಸಹಕಾರ ಸಂಘದ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಜೆಡಿಎಸ್ ವೀಕ್ಷಕರಾದ ಬಿ.ಬಿ.ಲಿಂಗಯ್ಯ, ಸಂಸದರಾದ ಪ್ರಜ್ವಲ್ ರೇವಣ್ಣ, ಪಕ್ಷದ ವಕ್ತಾರರಾದ ವೈಎಸ್‍ವಿ ದತ್ತಾ, ರಾಜ್ಯ ನಾಯಕರುಗಳಾದ ಬಿ.ಬಿ.ಯಶೋಧ, ನಜ್ಮಾ ನಜೀರ್ ಮೊದಲಾದ ಗಣ್ಯರ ಉಪಸ್ಥಿತಿಯಲ್ಲಿ ಪಕ್ಷದ ಪ್ರಮುಖರ ಸಭೆ ನಡೆಯಲಿದ್ದು, ಅಡ್ ಹಾಕ್ ಸಮಿತಿ ರಚನೆಯಾಗಲಿದೆ ಎಂದರು.
ರಾಜ್ಯ ನಾಯಕರ ಚಿಂತನೆಯಂತೆ ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ಬೂತ್ ಸಮಿತಿಗಳ ರಚನೆ ನೂತನವಾಗಿ ನಡೆಯಲಿದ್ದು, ಬಳಿಕ ಪಂಚಾಯ್ತಿ ಮಟ್ಟದ ಸಮಿತಿ ರಚನೆಯಾಗಲಿದೆ. ಪ್ರತಿಯೊಂದು ಗ್ರಾಮ ಪಂಚಾಯ್ತಿಯಿಂದ ಒಬ್ಬರು ಪ್ರತಿನಿಧಿ ಒಳಗೊಂಡಂತೆ ಹಾಗೂ ಹತ್ತು ಮಂದಿ ಪುರಸಭೆ ಇಲ್ಲವೆ ನಗರಸಭೆ ಇಲ್ಲವೆ ಪಟ್ಟಣ ಪಂಚಾಯ್ತಿಯ ಪ್ರತಿನಿಧಿಗಳನ್ನು ಒಳಗೊಂಡಂತೆ 102 ಮಂದಿ ಸದಸ್ಯರನ್ನು ಮೀರದಂತೆ ತಾಲ್ಲೂಕು ಕಾರ್ಯಕಾರಿಣಿ ಸಮತಿ ರಚನೆಯಾಗಲಿದೆ. ಬಳಿಕ ಪ್ರತಿ ತಾಲ್ಲೂಕು ಮಟ್ಟದಿಂದ ಇಬ್ಬರು ಪ್ರತಿನಿಧಿಗಳು, ಸ್ಥಳೀಯ ಸಂಸ್ಥೆಯ ಪಕ್ಷದ ಮುಖಂಡರುಗಳನ್ನು ಒಳಗೊಂಂಡತೆ 100 ಮಂದಿಯನ್ನು ಮೀರದಂತೆ ಜಿಲ್ಲಾ ಘಟಕವನ್ನು ರಚಿಸಲಾಗುತ್ತದೆ. ಅಡ್ ಹಾಕ್ ಸಮಿತಿಯ ರಚನೆಯ ಬಳಿಕ ಪಕ್ಷದ ವಿವಿಧ ಸಮಿತಿಗಳು ಒಂದೆರಡು ತಿಂಗಳ ಅವಧಿಯೊಳಗೆ ಅಸ್ತಿತ್ವಕ್ಕೆ ಬರಲಿದೆಯೆಂದು ಸ್ಪಷ್ಟಪಡಿಸಿದರು.

error: Content is protected !!