ಜೆಡಿಎಸ್ ಜಿಲ್ಲಾಧ್ಯಕ್ಷ ಸ್ಥಾನ ಬಿಟ್ಟು ಕೊಡಲು ಸಿದ್ಧ : ಕೆ.ಎಂ.ಗಣೇಶ್

ಮಡಿಕೇರಿ ಫೆ.16 : ಕೊಡಗು ಜಿಲ್ಲಾ ಜೆಡಿಎಸ್ ಅಧ್ಯಕ್ಷನಾಗಿ ಪಕ್ಷದ ಸಂಘಟನೆಗಾಗಿ ತಾನು ಶ್ರಮಿಸಿದ್ದು, ನೂತನ ಜಿಲ್ಲಾ ಸಮಿತಿಯ ರಚನೆಯ ಸಂದರ್ಭ ತನ್ನ ಅಧ್ಯಕ್ಷ ಸ್ಥಾನವನ್ನು ಬಿಟ್ಟು ಕೊಟ್ಟು ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದ ಏಳಿಗೆಗಾಗಿ ಶ್ರಮಿಸಲು ಸಿದ್ಧನಿದ್ದೇನೆಂದು ಕೆ.ಎಂ.ಗಣೇಶ್ ಸ್ಪಷ್ಟ ಪಡಿಸಿದ್ದಾರೆ.
ಪಕ್ಷದ ವರಿಷ್ಟರ ಚಿಂತನೆಯಂತೆ ಪಕ್ಷವನ್ನು ಶಕ್ತಿಯುತವಾಗಿ ಕಟ್ಟಿ ಬೆಳೆಸುವ ಮೂಲಕ 2023 ರಲ್ಲಿ ಮತ್ತೆ ಹೆಚ್.ಡಿ. ಕುಮಾರ ಸ್ವಾಮಿ ಅವರು ಮುಖ್ಯ ಮಂತ್ರಿಗಳಾಗಿ ರಾಜ್ಯದ ಸರ್ವಾಂಗೀಣ ಪ್ರಗತಿಗೆ ಕಾರಣರಾಗಬೇಕೆನ್ನುವುದು ನಮ್ಮೆಲ್ಲರ ಇಚ್ಛೆಯೆಂದು ತಿಳಿಸಿದರು.
::: ತೊಂದರೆ ನೀಡಿ ಬೊಕ್ಕಸ ಭರ್ತಿ :::
ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮತ್ತು ನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯಾಗುತ್ತಲೇ ಇದ್ದು, ಜನಸಮಾನ್ಯರಿಗೆ ತೊಂದರೆ ನೀಡಿ ಸರ್ಕಾರದ ಬೊಕ್ಕಸ ತುಂಬಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಗಣೇಶ್ ಆರೋಪಿಸಿದರು.
::: ವಿರಾಜಪೇಟೆಯಲ್ಲಿ ಪ್ರತಿಭಟನೆ :::
ಪಕ್ಷದ ವಿರಾಜಪೇಟೆ ತಾಲ್ಲೂಕು ಅಧ್ಯಕ್ಷ ಪಿ.ಎ.ಮಂಜುನಾಥ್ ಮಾತನಾಡಿ, ಬೆಲೆ ಏರಿಕೆ ಕ್ರಮವನ್ನು ವಿರೋಧಿಸಿ ಫೆ.17 ರಂದು ವಿರಾಜಪೇಟೆ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು. ಬೆಳಗ್ಗೆ 11 ಗಂಟೆಗೆ ಗಡಿಯಾರ ಕಂಬದಿಂದ ತಹಶೀಲ್ದಾರ್ ಕಛೇರಿಯವರೆಗೆ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಮಾಜಿ ಜಿಲ್ಲಾಧ್ಯಕ್ಷ ಇಸಾಕ್ ಖಾನ್, ಮಾಜಿ ಖಜಾಂಚಿ ಡೆನ್ನಿ ಬರೋಸ್, ಜಿಲ್ಲಾ ಕಾರ್ಯದರ್ಶಿ ಎಂ.ಸಿ.ಸುನಿಲ್ ಹಾಗೂ ಮಹಿಳಾ ಘಟಕದ ಜಿಲ್ಲಾ ಕಾರ್ಯದರ್ಶಿ ಲೀಲಾ ಶೇಷಮ್ಮ ಉಪಸ್ಥಿತರಿದ್ದರು.