ಕೊಡಗು ಸಂಸದರನ್ನು ಹುಡುಕಬೇಕಾಗಿದೆ : ಜೆಡಿಎಸ್ ಟೀಕೆ

February 16, 2021

ಮಡಿಕೇರಿ ಫೆ.16 : ಧಾರಣೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ಕಾಫಿ ಮತ್ತು ಕರಿಮೆಣಸು ಕೃಷಿಕರ ಸಂಕಷ್ಟಗಳ ಬಗೆಹರಿಕೆಯ ಜವಾಬ್ದಾರಿ ತನ್ನ ಹೆಗಲ ಮೇಲಿರಲಿ ಎಂದು ಘೋಷಿಸಿದ್ದ ಕೊಡಗು ಸಂಸದರು ಈಗ ಎಲ್ಲಿದ್ದಾರೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಎಂ.ಗಣೇಶ್ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಕಳೆದ 2018 ರಿಂದ ಇಲ್ಲಿಯವರೆಗೆ ಜಿಲ್ಲೆ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ತತ್ತರಿಸಿದೆ. ಕಾಫಿ ಕೃಷಿ ನೆಲ ಕಚ್ಚಿ ನಾಶವಾಗುವ ಹಂತದಲ್ಲಿದೆ. ಭತ್ತದ ಫಸಲು ಕೊಚ್ಚಿ ಹೋಗಿದೆ, ಕರಿಮೆಣಸು, ಕಾಫಿಯ ಧಾರಣೆಯೂ ಕುಸಿದು ಬೆಳೆಗಾರ ಕಂಗಾಲಾಗಿದ್ದಾನೆ. ಇಂತಹ ಸಂದಿಗ್ಧ ಪರಿಸ್ಥಿತಿಯ ನಡುವೆ ಬೆಳೆಗಾರರ ನೆರವಿಗೆ ಬರಬೇಕಾದ ಆಡಳಿತ ಪಕ್ಷ ಮೌನವಾಗಿ ಕುಳಿತಿದ್ದರೆ, ಜವಾಬ್ದಾರಿ ಹೊತ್ತ ಸಂಸದರು ಕಾಣಿಸುತ್ತಿಲ್ಲವೆಂದು ಕಾರವಾಗಿ ನುಡಿದರು.
ಜನರ, ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸದ ಸಂಸದರನ್ನು ಹುಡುಕಿ ಕೊಡಿ ಎಂದು ದೂರು ದಾಖಲಿಸುವ ಪರಿಸ್ಥಿತಿ ಇದೆಯೆಂದು ಲೇವಡಿ ಮಾಡಿದ ಕೆ.ಎಂ. ಗಣೇಶ್, ಸಂಸದರ ಇಂತಹ ಧೋರಣೆಯ ವಿರುದ್ಧ ನಾವು ಎದ್ದು ನಿಲ್ಲುವ ಕೆಲಸ ಮಾಡಬೇಕಾಗುತ್ತದೆಂದು ಎಚ್ಚರಿಕೆ ನೀಡಿದರು.
::: ಜನ ಎಚ್ಚೆತ್ತುಕೊಳ್ಳಲಿ :::
ಜಿಲ್ಲೆಯ ಜನತೆಯ ಮೂಲಭೂತ ಸಮಸ್ಯೆಗಳ ಬಗೆಹರಿಕೆಯ ಬಗ್ಗೆ ಕೇವಲ ಸುಳ್ಳು ಹೇಳುವುದನ್ನು ಬಿಟ್ಟರೆ ಜಿಲ್ಲೆಯ ಶಾಸಕರಿಗೆ ಬೇರೆ ಅಜೆಂಡಾ ಇಲ್ಲವೆ ಎಂದು ಕಟುವಾಗಿ ಪ್ರಶ್ನಿಸಿದ ಕೆ.ಎಂ.ಗಣೇಶ್, ಕಳೆದ ಎರಡೂವರೆ ದಶಕಗಳಿಂದ ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಶಾಸಕರಗಳ ಬಗ್ಗೆ ಜನತೆ ಎಚ್ಚೆತ್ತುಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.

error: Content is protected !!