ದಲಿತ ಅಧಿಕಾರಿಗಳಿಗೆ ಕಿರುಕುಳ : ಕೊಡಗು ದಲಿತ ಸಂಘರ್ಷ ಸಮಿತಿ ಆರೋಪ

ಮಡಿಕೇರಿ ಫೆ.16 : ಇತ್ತೀಚಿನ ದಿನಗಳಲ್ಲಿ ಕೊಡಗು ಜಿಲ್ಲೆಯಲ್ಲಿ ದಲಿತ ಅಧಿಕಾರಿಗಳಿಗೆ ಕೆಲವು ಜನಪ್ರತಿನಿಧಿಗಳಿಂದ ಮಾನಸಿಕ ಕಿರುಕುಳವಾಗುತ್ತಿದ್ದು, ನಿಯಮಬಾಹಿರವಾಗಿ ವರ್ಗಾವಣೆಗೊಳಿಸಲಾಗುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕೋಪಯೋಗಿ ಇಲಾಖೆಯ ಲೆಕ್ಕಾಧಿಕಾರಿ ರಾಮಚಂದ್ರ ಎಂಬುವವರನ್ನು ಯಾವುದೇ ಕಾರಣವಿಲ್ಲದೆ ದಿಢೀರ್ ಆಗಿ ವರ್ಗಾವಣೆ ಮಾಡಲಾಗಿದ್ದು, ಇವರನ್ನು ಮತ್ತೆ ಅದೇ ಹುದ್ದೆಯಲ್ಲಿ ಮುಂದುವರಿಸದಿದ್ದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಕೆಲವು ಜನಪ್ರತಿನಿಧಿಗಳು ದಲಿತ ಅಧಿಕಾರಿಗಳನ್ನು ಏಕವಚನದಲ್ಲಿ ಸಂಭೋದಿಸಿ ಮಾನಸಿಕ ಖಿನ್ನತೆ ಮೂಡಿಸುತ್ತಿರುವುದಲ್ಲದೆ ಕುತಂತ್ರದಿಂದ ಎಸಿಬಿ ಬಲೆಗೆ ಬೀಳಿಸುತ್ತಿದ್ದಾರೆ. ವಿರಾಜಪೇಟೆಯ ಲೋಕೋಪಯೋಗಿ ಇಲಾಖೆಗೆ ಲೆಕ್ಕಾಧಿಕಾರಿಯಾಗಿ ವರ್ಷದ ಹಿಂದೆಯಷ್ಟೆ ಬಂದಿದ್ದ ರಾಮಚಂದ್ರ ಅವರನ್ನು ಇದೀಗ ಏಕಾಏಕಿ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿದರು.
ಮುಂದಿನ 10 ದಿನಗಳ ಒಳಗಾಗಿ ಇವರನ್ನು ಅದೇ ಹುದ್ದೆಯಲ್ಲಿ ಮುಂದುವರೆಸದಿದ್ದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ನಿರಂತರವಾಗಿ ದಲಿತ ಅಧಿಕಾರಿಗಳಿಗೆ ಕಿರುಕುಳವಾಗುತ್ತಿದ್ದರು ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿರುವ ದಲಿತ ನಾಯಕರುಗಳು ಮೌನಕ್ಕೆ ಶರಣಾಗಿರುವುದು ನಾಚಿಕೆಗೇಡಿನ ಸಂಗತಿಯೆಂದು ದಿವಾಕರ್ ಅಸಮಾಧಾನ ವ್ಯಕ್ತಪಡಿಸಿದರು.
::: ಮೀಸಲಾತಿ ಬೇಕು :::
ಜಿಲ್ಲೆಯಲ್ಲಿ ಈ ಹಿಂದೆ ಮೂರು ವಿಧಾನಸಭಾ ಕ್ಷೇತ್ರಗಳಿದ್ದಾಗ ಒಂದು ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿತ್ತು. ಕ್ಷೇತ್ರಗಳ ಸಂಖ್ಯೆ ಎರಡಕ್ಕೆ ಸೀಮಿತವಾದ ನಂತರ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಕ್ಷೇತ್ರಗಳು ಇಲ್ಲದಾಗಿದ್ದು, ದಲಿತರು ತಮ್ಮ ಹಕ್ಕಿಗಾಗಿ ಹಾಗೂ ಸಾಮಾಜಿಕ ಭದ್ರತೆಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆಯೆಂದು ಅವರು ಆರೋಪಿಸಿದರು.
ಈಗಾಗಲೆ ಜಿಲ್ಲೆಯಲ್ಲಿ ಎರಡು ಹೊಸ ತಾಲ್ಲೂಕು ಸೇರಿ ಐದು ತಾಲ್ಲೂಕುಗಳಾಗಿದ್ದು, ವಿಧಾನಸಭಾ ಕ್ಷೇತ್ರಗಳನ್ನು ಹೆಚ್ಚಿಸುವ ಮೂಲಕ ಒಂದು ಕ್ಷೇತ್ರವನ್ನು ಪರಿಶಿಷ್ಟರಿಗೆ, ಮತ್ತೊಂದನ್ನು ಹಿಂದುಳಿದ ವರ್ಗಕ್ಕೆ ಮೀಸಲಿಡಬೇಕೆಂದು ದಿವಾಕರ್ ಒತ್ತಾಯಿಸಿದರು.
ಬಾಳೆಲೆಯಲ್ಲಿ ನಡೆದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಕೂಡ ತನಿಖೆಯನ್ನು ಪೂರ್ಣಗೊಳಿಸದೆ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಸಿಸಿ ಕ್ಯಾಮೆರಾ ಮತ್ತು ಮರಣೋತ್ತರ ಪರೀಕ್ಷೆಯ ವರದಿ ಆಧಾರದಲ್ಲಿ ತನಿಖೆಯನ್ನು ಪೂರ್ಣಗೊಳಿಸುವಂತೆ ಒತ್ತಾಯಿಸಿದರು.
::: ಬೃಹತ್ ಸಮಾವೇಶ :::
ಮೇ ತಿಂಗಳಿನಲ್ಲಿ ಜಿಲ್ಲೆಯಲ್ಲಿ ಸುಮಾರು 10 ಸಾವಿರ ಮಂದಿಯ ಬೃಹತ್ ಸಂವಿಧಾನ ಸಮಾವೇಶವನ್ನು ಸಮಿತಿಯ ಮೂಲಕ ನಡೆಸುವುದಾಗಿ ಇದೇ ಸಂದರ್ಭ ತಿಳಿಸಿದ ದಿವಾಕರ್, ಈ ಸಮಾವೇಶದಲ್ಲಿ ಮುಂದಿನ ರಾಜಕೀಯ ಬೆಂಬಲದ ಕುರಿತು ಚಿಂತನೆ ಹರಿಸಲಾಗುತ್ತದೆ ಎಂದು ತಿಳಿಸಿದರು.
ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಹೆಚ್.ಕೆ.ಗಣೇಶ್ ಮಾತನಾಡಿ, ದಲಿತ ದೌರ್ಜನ್ಯ ನಿಯಂತ್ರಣ ಸಮತಿಯಲ್ಲಿ ದಲಿತರ ಸಮಸ್ಯೆಗಳಿಗೆ ಸ್ಪಂದಿಸುವ ಕಾಳಜಿ ಇರುವವರನ್ನು ನೇಮಕ ಮಾಡಿಕೊಳ್ಳಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ತಾಲ್ಲೂಕು ಸಂಚಾಲಕ ಎ.ಪಿ.ದೀಪಕ್ ಉಪಸ್ಥಿತರಿದ್ದರು.