ಕೊಡಗನ್ನಾಳಿದ ಅರಸರ ತೇಜೋವಧೆ ಸರಿಯಲ್ಲ : ಸಿಎನ್ ಸಿ ವಿರುದ್ಧ ಅಖಿಲ ಭಾರತ ವೀರಶೈವ ಮಹಾಸಭಾ ಅಸಮಾಧಾನ

February 17, 2021

ಮಡಿಕೇರಿ ಫೆ.17 : ಸಿಎನ್ ಸಿ ಸಂಘಟನೆಯ ಎನ್.ಯು.ನಾಚಪ್ಪ ಅವರು ಕೊಡಗನ್ನು ಆಳಿದ ಅರಸರ ಬಗ್ಗೆ ಇಲ್ಲಸಲ್ಲದ ಕಾಲ್ಪನಿಕ ಕಥೆಯೊಂದನ್ನು ಪ್ರಚೋದನಾಕಾರಿಯಾಗಿ ಹರಿಬಿಟ್ಟಿದ್ದಾರೆ ಎಂದು ಆರೋಪಿಸಿರುವ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕ, ಅರಸರ ತೇಜೋವಧೆಯನ್ನು ತಕ್ಷಣ ನಿಲ್ಲಿಸಬೇಕೆಂದು ಒತ್ತಾಯಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾದ ಜಿಲ್ಲಾಧ್ಯಕ್ಷ ಹೆಚ್.ವಿ.ಶಿವಪ್ಪ ಹಾಗೂ ಉಪಾಧ್ಯಕ್ಷ ಜಿ.ಎಂ.ಕಾಂತರಾಜು ಇತಿಹಾಸವನ್ನು ತಿರುಚುವ ಪ್ರಯತ್ನವನ್ನು ಯಾರೂ ಮಾಡಬಾರದೆಂದು ತಿಳಿಸಿದರು. ದೇವಟ್ ಪರಂಬುವಿನಲ್ಲಿ ಟಿಪ್ಪುವಿನ ಕುತಂತ್ರದಿಂದ ನಡೆದ ನರಮೇಧದಲ್ಲಿ ಕೊಡವರು ಮಾತ್ರ ಬಲಿಯಾದರು ಎನ್ನುವುದು ಹಾಸ್ಯಾಸ್ಪದವಾಗಿದೆ. ರಾಜರ ಸೈನ್ಯದಲ್ಲಿದ್ದ ಎಲ್ಲಾ ಜನಾಂಗದವರ ಹತ್ಯೆ ಕೂಡ ನಡೆದಿದ್ದು, ಇತಿಹಾಸ ಇದನ್ನು ವಿವರಿಸಿದೆ ಎಂದು ಸ್ಪಷ್ಟಪಡಿಸಿದರು.
ಕೊಡಗಿನ ಇತಿಹಾಸದ ಬಗ್ಗೆ ಡಾ.ಐ.ಮಾ.ಮುತ್ತಣ್ಣ ಅವರು ಬರೆದಿರುವ ಮೆಮೊರಿಸ್ ಆಫ್ ಕೂರ್ಗ್ ಪುಸ್ತಕದಲ್ಲಿ ಇತಿಹಾಸದ ನೈಜತೆಯನ್ನು ವಿವರಿಸಲಾಗಿದೆ. ಹಾಲೇರಿ ವಂಶದ ಎಲ್ಲಾ ರಾಜರು ಶಾಂತಿ ಪ್ರಿಯರು ಮತ್ತು ಸೇವಾ ಮನೋಭಾವನೆಯ ವ್ಯಕ್ತಿಗಳು. ಜನರ ಕಷ್ಟಗಳಿಗೆ ಸ್ಪಂದಿಸಿ ಜಮ್ಮಾ, ಜಹಗೀರು, ಬಾಣೆ ಹೀಗೆ 34 ವಿಧದ ಜಾಗಗಳನ್ನು ಎಲ್ಲಾ ಜನಾಂಗದವರಿಗೆ ಮಂಜೂರು ಮಾಡಿ ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಆಡಳಿತ ನಡೆಸಿದ್ದಾರೆ. ಬ್ರಿಟಿಷರು ಕೊಡಗಿನ ಕೊನೆಯ ರಾಜ ಚಿಕ್ಕವೀರ ರಾಜೇಂದ್ರರನ್ನು ಮೋಸದಿಂದ ಸೆರೆ ಹಿಡಿಯಲು ಮತ್ತು ಕೊಡಗನ್ನು ವಶಪಡಿಸಿಕೊಳ್ಳಲು ಮುಂದಾದಾಗ ಆಸ್ಥಾನದಲ್ಲಿನ ದಿವಾನರು ಬೆಂಬಲಕ್ಕೆ ನಿಂತ ಸಂದರ್ಭ ಮಾತಂಡ ಅಚ್ಚಪ್ಪ ದಿವಾನರು ಅರಸರ ರಕ್ಷಣೆಗೆ ಬಂದರು. ಈ ರೀತಿಯ ವ್ಯಕ್ತಿಗಳನ್ನು ನಮ್ಮ ಸಮಾಜ ಸದಾ ಗೌರವಿಸುತ್ತದೆ ಎಂದು ಹೆಚ್.ವಿ.ಶಿವಪ್ಪ ಹಾಗೂ ಜಿ.ಎಂ.ಕಾಂತರಾಜು ತಿಳಿಸಿದರು.
ಕೊಡವರನ್ನು ಎಸ್.ಟಿ ಪಂಗಡಕ್ಕೆ ಸೇರಿಸಲು ಯಾರೂ ವಿರೋಧ ವ್ಯಕ್ತಪಡಿಸುತ್ತಿಲ್ಲ, ಆದರೆ ಕೊಡವೇತರರನ್ನು ಓಡಿಸುವ ಕುತಂತ್ರಕ್ಕೆ ನಮ್ಮ ವಿರೋಧವಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರುಗಳು ಕೊಡಗಿನ ಇತಿಹಾಸದ ಬಗ್ಗೆ ಬಹಿರಂಗ ಚರ್ಚೆಗೆ ನಾವುಗಳು ಸಿದ್ಧವಿದ್ದು ಸಿಎನ್ ಸಿ ವೇದಿಕೆ ಸೃಷ್ಟಿಸಲಿ ಎಂದು ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಕಿರಿಕೊಡ್ಲಿ ಮಠದ ಶ್ರೀಸದಾಶಿವ ಸ್ವಾಮಿಗಳು, ಮಹಾಸಭಾದ ಪ್ರಧಾನ ಕಾರ್ಯದರ್ಶಿ ಟಿ.ಎಸ್.ಶಾಂಭ ಶಿವಮೂರ್ತಿ, ಖಜಾಂಚಿ ಹೆಚ್.ಬಿ.ಉದಯಕುಮಾರ್ ಹಾಗೂ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ಕೆ.ಬಿ.ಹಾಲಪ್ಪ ಉಪಸ್ಥಿತರಿದ್ದರು.

error: Content is protected !!