ರಾಮಮಂದಿರ ದೇಣಿಗೆ ವಿಚಾರದಲ್ಲಿ ರಾಜಕಾರಣಿಗಳು ಸಣ್ಣತನ ಬಿಡಲಿ : ಸಂಸದ ಪ್ರತಾಪ್ ಸಿಂಹ ಅಸಮಾಧಾನ

February 17, 2021

ಮಡಿಕೇರಿ ಫೆ.17 : ಅಯೋಧ್ಯಾ ಶ್ರೀರಾಮಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಿಸುತ್ತಿರುವ ವಿಚಾರದಲ್ಲಿ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿರುವ ಕೆಲವು ರಾಜಕಾರಣಿಗಳು ತಮ್ಮ ಸಣ್ಣತನ ಮತ್ತು ಕ್ಷುಲ್ಲಕ ಬುದ್ಧಿಯನ್ನು ಪ್ರದರ್ಶನ ಮಾಡುತ್ತಿರುವುದು ಸ್ಪಷ್ಟವಾಗುತ್ತಿದೆ ಎಂದು ಕೊಡಗು- ಮೈಸೂರು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸುವ ಸಂದರ್ಭ ನಾವು ಒತ್ತಡದಿಂದ ದೇಣಿಗೆ ನೀಡಿದ್ದೇವೆ ಎಂದು ಯಾರಾದರೂ ಒಬ್ಬರು ಹೇಳಲಿ ನೋಡೋಣ ಎಂದು ಸವಾಲು ಹಾಕಿದರು. ಕಾಂಗ್ರೆಸ್, ಜೆಡಿಎಸ್, ಎಸ್‍ಡಿಪಿಐ ಅಥವಾ ಬೇರ್ಯಾವುದೇ ಪಕ್ಷದ ಜೊತೆ ಗುರುತಿಸಿಕೊಂಡವರ ಮನೆಗೆ ತೆರಳಿ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುತ್ತಿರಾ ಎಂದು ಮನವಿ ಮಾಡಿದ್ದೇವೆ. ಆ ಸಂದರ್ಭ ಕೊಟ್ಟಿದ್ದರೆ ಖುಷಿಯಿಂದಲೇ ಸಂಗ್ರಹ ಮಾಡಿದ್ದು, ಕೊಡದವರ ಬಗ್ಗೆ ಎಲ್ಲಿಯೂ ಬೇಸರ ಪಟ್ಟುಕೊಂಡಿಲ್ಲ ಎಂದು ಹೇಳಿದರು.
ದೇಣಿಗೆ ನೀಡದವರೇ ಇಲ್ಲಸಲ್ಲದ ಮಾತನಾಡುತ್ತಿದ್ದಾರೆ, ಬಹಳ ಮಂದಿ ಮುಸಲ್ಮಾನರು, ಕ್ರಿಶ್ಚಿಯನ್ನರು ರಾಮಮಂದಿರಕ್ಕೆ ದೇಣಿಗೆ ನೀಡಿದ್ದಾರೆ. ಅವರೇ ಸದಾಭಿಪ್ರಾಯದಿಂದ ಹಣ ನೀಡಿದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹೆಚ್.ಡಿ. ಕುಮಾರಸ್ವಾಮಿ ಅವರುಗಳ ಹೇಳಿಕೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ದೊಡ್ಡ ವ್ಯಕ್ತಿಗಳ ಸಣ್ಣತನದ ಬಗ್ಗೆ ಮಾತನಾಡೋಕೆ ಹೋಗಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

error: Content is protected !!